ಪ್ರಜ್ಞಾ ಕ್ರಾಫ್ಟ್ ಮೇಳ ಉದ್ಘಾಟನೆ

udp-19-craft 2
Published on

ಉಡುಪಿ: ಪಿಪಿಸಿ ಕ್ಯಾಂಪಸ್‌ನಲ್ಲಿ ಪೂರ್ಣಪ್ರಜ್ಞ ವಿದ್ಯಾಸಂಸ್ಥೆ ಹಾಗೂ ಪ್ರಾಚಿ ಉಡುಪಿ ಆಶ್ರಯದಲ್ಲಿ 2 ದಿನದ ಪ್ರಜ್ಞಾ ಕ್ರಾಫ್ಟ್ ಮೇಳಕ್ಕೆ ಸೋಮವಾರ ಚಾಲನೆ ದೊರೆಯಿತು. ಕ್ರಾಫ್ಟ್ ಮೇಳದಲ್ಲಿ ಛತ್ತೀಸ್‌ಗಢದಿಂದ ಲೋಹಶಿಲ್ಪದ ನಂದಿ, ಗಣೇಶ, ಕರ್ಮವೃಕ್ಷ, ಬಸ್ತಾರ್‌ನ ಬಾನ್ಸುರಿ, ಹ್ಯಾಂಡ್ ಮೇಡ್ ಬಾಚಣಿಗೆ, ಡೋಗ್ರಾ ಚಿತ್ರಕಲೆಗಳು, ಐರನ್ ಕ್ರಾಫ್ಟ್, ತುಮಕೂರಿನ ಹ್ಯಾಂಡಮೇಡ್ ಲ್ಯಾಂಪ್ಸ್, ಬಾಗಲಕೋಟೆಯ ಇಳಕಲ್ ಸೀರೆ, ಹೂವಿನಹಡಗಲಿಯ ಖಾದಿ ವಸ್ತ್ರಗಳು, ಮೆಕ್ಕೆಜೋಳದ ಸಿಪ್ಪೆಯಿಂದ ತಯಾರಿಸಿದ ಹೂಗುಚ್ಛಗಳು, ತಾಳಿಪಾಡಿ ಕೈಮಗ್ಗ ಸೀರೆಗಳು, ವಿಜಯಪುರದ ತಾಮ್ರ ಮತ್ತು ಬೆಳ್ಳಿಯಿಂದ ತಯಾರಿಸಿದ ಹ್ಯಾಂಡಮೇಡ್ ಆಭರಣಗಳು ಸೇರಿದಂತೆ ಸುಮಾರು 25 ಮಳಿಗೆಗಳಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯುತ್ತಿದೆ.

ಮೇಳ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಕ್ರಾಪ್ಟ್ ಕೌನ್ಸಿಲ್ ಜಂಟಿ ಕಾರ್ಯದರ್ಶಿ ಎನ್. ಶಶಿಧರ್, ಹಸ್ತಶಿಲ್ಪಗಳು ಪರಿಸರಕ್ಕೆ ಪೂರಕವಾಗಿದ್ದು, ಸಮಾಜದ ಮುಖ್ಯ ಅಂಗವಾಗಿದೆ. ಹಸ್ತಶಿಲ್ಪ ನಶಿಸಿದರೆ ಮುಂದಿನ ಜನಾಂಗಕ್ಕೆ ನಷ್ಟವಾಗುವುದರಿಂದ ಕರಕುಶಲಕರ್ಮಿಗಳಿಗೆ ಪ್ರಾಶಸ್ತ್ಯ ನೀಡಬೇಕು. ಆದರೆ ಸರ್ಕಾರದ ಬಳಿ ಹಸ್ತಶಿಲ್ಪಿಗಳ ಅಂಕಿಅಂಶಗಳಿಲ್ಲದಿರುವುದು ಖೇದಕರ ಸಂಗತಿ. ಭಾರತ ಸರ್ಕಾರ ಅನೇಕ ಭೌಗೋಳಿಕ ವಿಶೇಷತೆಗಳಿಗೆ ಜಿಐ ಟ್ಯಾಗ್ ನೀಡುತ್ತಿದೆ. ಅನೇಕ ಹಸ್ತಶಿಲ್ಪಗಳಿಗೂ ಈ ಮಾನ್ಯತೆ ಲಭಿಸಿದೆ. ಹಸ್ತಶಿಲ್ಪಿಗಳನ್ನು ಕಳೆದುಕೊಂಡರೆ ಮತ್ತೆ ಸಿಗೋದಿಲ್ಲ. ಹೀಗಾಗಿ ಕಾಲೇಜುಗಳಲ್ಲಿ ಕ್ರಾಪ್ಟ್ ಅಪ್ರಿಸಿಯೇಶನ್ ಮಾರ್ಕ್‌ಗಳನ್ನು ನೀಡಬೇಕು. ಸ್ಥಳೀಯ ಹಸ್ತಶಿಲ್ಪಗಳಿಗೆ ಸಂಬಂಧಪಟ್ಟ ಕೋರ್ಸ್‌ಗಳನ್ನು ಪ್ರಾರಂಭಿಸಬೇಕು. ಸ್ಥಳೀಯ ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಒದಗಿಸಬೇಕು ಎಂದರು.

ಪೂರ್ಣಪ್ರಜ್ಞ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಡಾ. ಚಂದ್ರಶೇಖರ್, ಎಂಜಿಎಂ ಕಾಲೇಜು ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಮುಖ್ಯ ಅತಿಥಿಗಳಾಗಿದ್ದರು. ಪಿಪಿಸಿ ಪ್ರಾಂಶುಪಾಲ ಡಾ. ರಾಘವೇಂದ್ರ ಎ., ಆಡಳಿತಾಧಿಕಾರಿ ಡಾ. ಎ.ಪಿ. ಭಟ್, ಕಲಾವಿದ ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು. ಸಂಧ್ಯಾ ಕಾಲೇಜು ಪ್ರಾಂಶುಪಾಲೆ ಡಾ.ಸುಕನ್ಯಾ ಮೇರಿ ಸ್ವಾಗತಿಸಿ, ಪ್ರಾಧ್ಯಾಪಕಿ ಶ್ರೀರಕ್ಷಾ ಕಾರ್ಯಕ್ರಮ ನಿರೂಪಿಸಿದರು. ಪಿಯು ಕಾಲೇಜು ಪ್ರಾಂಶುಪಾಲೆ ಪ್ರತಿಮಾ ಬಾಳಿಗಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net