

ಯಳಂದೂರು: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಾಮನಿರ್ದೇಶಿತ ಸದಸ್ಯರಾಗಿ ಗೌತಮ್ ಬಡಾವಣೆ ನಿವಾಸಿ ಬಿ.ನಂಜುಂಡಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಸಂಬಂಧ ಸಹಕಾರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. ನಂಜುಂಡಸ್ವಾಮಿ ಮಾತನಾಡಿ, ನಾನು ಸಹಕಾರ ಸಂಘದಲ್ಲಿ ಹಲವು ವರ್ಷಗಳಿಂದ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ. ಈಗ ನನ್ನನ್ನು ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಇದಕ್ಕೆ ಕಾರಣರಾದ ಶಾಸಕ ಎ.ಆರ್. ಕೃಷ್ಣಮೂರ್ತಿ ಹಾಗೂ ಕಾಂಗ್ರೆಸ್‌ನ ಮಾಜಿ ಶಾಸಕರು, ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸಹಕಾರ ಸಂಘದ ಶ್ರೇಯೋಭಿವೃದ್ಧಿಗೆ ನನ್ನ ಅವಧಿಯಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ತಿಳಿಸಿದರು.
ಪಪಂ ಸದಸ್ಯರಾದ ಬಿ.ರವಿ, ಮಂಜು, ಮಾಜಿ ಸದಸ್ಯ ಜೆ.ಶ್ರೀನಿವಾಸ್, ಮುಖಂಡರಾದ ಲಿಂಗರಾಜಮೂರ್ತಿ, ಚಂದ್ರಶೇಖರ್, ಬಸವರಾಜು, ಯರಿಯೂರು ನಾಗೇಂದ್ರ, ನಾಗಣ್ಣ, ಮಲ್ಲು, ಪರಶಿವಮೂರ್ತಿ, ಪುಟ್ಟರಾಜು, ಶೇಖರ್, ಪ್ರತಾಪ್, ಮಹೇಶ್ ಇತರರು ಇದ್ದರು.