ಮೈಸೂರು: ಈ ಬಾರಿಯೂ 11 ದಿನ ದಸರಾ ಆಚರಣೆ

Jamboo Savari
ಜಂಬೂಸವಾರಿ (ಸಾಂದರ್ಭಿಕ ಚಿತ್ರ)
Published on: 

ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವದ ಕಾರ್ಯಕ್ರಮಗಳು ಅಂತಿಮಗೊಂಡಿದ್ದು, ಗುರುವಾರ ಜಿಲ್ಲಾಡಳಿತ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದೆ. ಕಳೆದ ಬಾರಿಯಂತೆ ಈ ಬಾರಿಯೂ 11 ದಿನಗಳ ಕಾಲ ದಸರಾ ನಡೆಯಲಿದೆ. ಪ್ರತಿ ಬಾರಿ ನವರಾತ್ರಿಯ ನಂತರ 10ನೇ ದಿನ ಜಂಬೂಸವಾರಿ ನಡೆಯುತಿತ್ತು, ಈ ಬಾರಿ ದಶರಾತ್ರಿಯ ನಂತರ 11ನೇ ದಿನ ಜಂಬೂಸವಾರಿ ನಡೆಯಲಿದೆ. ಈ ಬಾರಿ ದಸರಾ ಅ.11 ರಂದು ಉದ್ಘಾಟನೆಗೊಂಡು 21 ರಂದು ಮುಕ್ತಾಯಗೊಳ್ಳಲಿದೆ.

ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ಸನ್ನಿಧಿಯಲ್ಲ್ಲಿ ಅ.11 ರಂದು ಬೆಳಗ್ಗೆ 11.50 ರಿಂದ 12.13ರೊಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಕೊಪ್ಪಳದ ಶ್ರೀ ಗವಿಮಠದ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ ದಸರಾ ಉತ್ಸವಕ್ಕೆ ಚಾಲನೆ ನೀಡುವರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ.ಜಿ. ಪರಮೆಶ್ವರ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ವಿವಿಧ ಕಾರ್ಯಕ್ರಮಗಳಿಗೆ ಚಾಲನೆ:

ಅ.11 ರಂದು ಬೆಳಗ್ಗೆ 11ಕ್ಕೆ ಕುಪ್ಪಣ್ಣ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ,ಲಿಂಗಾಂಬುಧಿ ಸಸ್ಯಶಾಸ್ತ್ರೀಯ ತೋಟದಲ್ಲಿ ಮ.12.30ಕ್ಕೆ ಪುಷ್ಪ ಮೇಳ ಮತ್ತು ಸಸ್ಯ ತೋಟ ಉದ್ಘಾಟನೆ, ಸಂ.4ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳ, ಭಾರತ ಸ್ಕೌಟ್ ಮತ್ತು ಗೈಡ್ಸ್ ಮೈದಾನದಲ್ಲಿ 4 ಕ್ಕೆ ಕನ್ನಡ ಪುಸ್ತಕ ಮಾರಾಟ ಮೇಳ, ಕಾವಾ ಕಾಲೇಜು ಆವರಣದಲ್ಲಿ 4.30ಕ್ಕೆ ಲಲಿತಕಲೆ ಮತ್ತು ಕರಕುಶಲ ಶಿಬಿರ, ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ 4.30ಕ್ಕೆ ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟ, ಸಂ.5ಕ್ಕೆ ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಹಾಗೂ ರಾಜ್ಯ ಸಂಗೀತ ವಿದ್ವಾನ ಪ್ರಶಸ್ತಿ ಪ್ರದಾನ, 6ಕ್ಕೆ ಸಯ್ಯಜಿರಾವ್ ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರ ಹಾಗೂ ವಸ್ತು ಪ್ರದರ್ಶನ ಆವರಣದಲ್ಲಿ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು.

ಅ.12 ರಂದು ಸಂಜೆ 7ಕ್ಕೆ ಗಾಯಕ ರಘುದೀಕ್ಷಿತ್ ತಂಡದಿಂದ ತತ್ವ ಸಂಗೀತ, ಅ.13 ರಂದು ಬೆಳಗ್ಗೆ 6.30ಕ್ಕೆ ಅರಮನೆ ಆವರಣದಲ್ಲಿ ರಂಗೋಲಿ ಸ್ಪರ್ಧೆ, ಮಾನಸಗಂಗೋತ್ರಿಯ ಬಿ.ಎಂ. ಶ್ರೀ ಸಭಾಂಗಣದಲ್ಲಿ 10ಕ್ಕೆ ದಸರಾ ಕವಿಗೋಷ್ಠಿ ಉದ್ಘಾಟನೆ, ಜೆಕೆ ಮೈದಾನದಲ್ಲಿ 11ಕ್ಕೆ ಮಹಿಳಾ ದಸರಾ, ಬಿಎಂಶ್ರೀ ಸಭಾಂಗಣದಲ್ಲಿ 11ಕ್ಕೆ ಹಾಸ್ಯ- ಚುಟುಕು ಕವಿಗೋಷ್ಠಿ, ಉತ್ತನಹಳ್ಳಿಯಲ್ಲಿ ಸಂ.6ಕ್ಕೆ ಯುವ ದಸರಾಗೆ ಚಾಲನೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಯೋಗ ದಸರಾ:

ಅ.14 ರಂದು ಬೆಳಗ್ಗೆ 10ಕ್ಕೆ ಜೆಕೆ ಮೈದಾನದಲ್ಲಿ ಯೋಗ ದಸರಾ, 10.30ಕ್ಕೆ ಬಿಎಂ ಶ್ರೀ ಸಭಾಂಗಣದಲ್ಲಿ ಯುವ ಕವಿಗೋಷ್ಠಿ, ಕಲಾಮಂದಿರದಲ್ಲಿ 11ಕ್ಕೆ ಮಕ್ಕಳ ದಸರಾ, ಅ.15 ರಂದು ಬೆಳಗ್ಗೆ 7ಕ್ಕೆ ಟೌನ ಹಾಲ್ ಬಳಿಯಿಂದ ಪಾರಂಪರಿಕ ನಡಿಗೆ, ಮಾನಸಗಂಗೋತ್ರಿಯ ಬಿಎಂ ಶ್ರೀ ಸಭಾಂಗಣದಲ್ಲಿ 10.30ಕ್ಕೆ ಚಿಗುರು ಕವಿಗೋಷ್ಠಿ, ಅ.16 ರಂದು ಬೆಳಗ್ಗೆ 7ಕ್ಕೆ ಟೌನ್ ಹಾಲ್ ಬಳಿಯಿಂದ ಪಾರಂಪರಿಕ ಸೈಕಲ್ ಸವಾರಿ, ವಸ್ತು ಪ್ರದರ್ಶನ ಆವರಣದ ಕಾಳಿಂಗರಾವ್ ಸಭಾಂಗಣದಲ್ಲಿ ಬೆ.8ಕ್ಕೆ ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆ, 10.30ಕ್ಕೆ ಬಿಎಂಶ್ರೀ ಸಭಾಂಗಣದಲ್ಲಿ ಜನಪದ ಕಾವ್ಯಗೋಷ್ಠಿ, ಜೆಕೆ ಮೈದಾನದ ಎಂಎಂಸಿ ಅಮೃತ ಮಹೋತ್ಸವ ಸಭಾಂಗಣದಲ್ಲಿ 11.15ಕ್ಕೆ ರೈತ ದಸರಾ, ಸಂಜೆ 7ಕ್ಕೆ ಅರಮನೆ ಆವರಣದಲ್ಲಿ ಪೊಲೀಸ್ ಬ್ಯಾಂಡ್ ಆಯೋಜಿಸಲಾಗಿದೆ.

ಟಾಂಗಾ ಸವಾರಿ:

ಅ.17 ರಂದು ಟೌನ್ ಹಾಲ್ ಬಳಿಯಿಂದ ಬೆಳಗ್ಗೆ 7ಕ್ಕೆ ಪಾರಂಪರಿಕ ಉಡುಗೆಯಲ್ಲಿ ದಂಪತಿಗಳ ಪಾರಂಪರಿಕ ಟಾಂಗಾ ಸವಾರಿ, ಬಿಎಂ ಶ್ರೀ ಸಭಾಂಗಣದಲ್ಲಿ ಬೆ.10.30ಕ್ಕೆ ಪ್ರಧಾನ ಕವಿಗೋಷ್ಠಿ, ಡಿ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಸಂ.5.30ಕ್ಕೆ ನಾಡಕುಸ್ತಿ ಪಂದ್ಯಾವಳಿ, ಸಂ.6.30ಕ್ಕೆ ಜೆಕೆ ಮೈದಾನದಲ್ಲಿ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ, ರಾತ್ರಿ 8ಕ್ಕೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಡ್ರೋನ್ ಪ್ರದರ್ಶನ,

ಪ್ರಥಮ ಬಾರಿ ಕಂಬಳ ಆಯೋಜನೆ:

ನಗರದಲ್ಲಿ ವಿವಿಧ ಸಂಘ ಸಂಸ್ಥೆಗಳ ವಿರೋಧದ ನಡುವೆಯೂ ಈ ಬಾರಿ ಕಂಬಳವನ್ನು ಅ.18 ಮತ್ತು 19 ರಂದು ಆಯೋಜಿಸಲಾಗಿದೆ. ಅ.18 ರಂದು ಬೆಳಗ್ಗೆ 6ಕ್ಕೆ ನಂಜನಗೂಡು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಗ್ರಾಮೀಣ ಯೋಗ, 10ಕ್ಕೆ ಜೆಕೆ ಮೈದಾನದಲ್ಲಿ ಮುದ್ದು ಪ್ರಾಣಿಗಳ ಪ್ರದರ್ಶನ, 10ಕ್ಕೆ ಸಾತಗಳ್ಳಿಯ ವಿಟಿಯು ಕಾಲೇಜು ಬಳಿ ಕಂಬಳ, ರಾತ್ರಿ 8ಕ್ಕೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಡ್ರೋನ್ ಪ್ರದರ್ಶನ, ಅ.19 ರಂದು ಬೆಳಗ್ಗೆ 6ಕ್ಕೆ ಚಾಮುಂಡಿಬೆಟ್ಟದಲ್ಲಿ ಯೋಗ ಚಾರಣ, ಸಂಜೆ 5.30ಕ್ಕೆ ಸಾತಗಳ್ಳಿಯ ವಿಟಿಯು ಕಾಲೇಜು ಬಳಿ ಕಂಬಳ ಬಹುಮಾನ ವಿತರಣಾ ಸಮಾರಂಭ, ಅ.20 ರಂದು ಸಂಜೆ 7ಕ್ಕೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಪಂಜಿನ ಕವಾಯತು ಪೂರ್ವಾಭ್ಯಾಸ ಆಯೋಜಿಸಲಾಗಿದೆ.

ಅ.21 ರಂದು ಜಂಬೂಸವಾರಿ :

ಅ.21 ರಂದು ಸಂಜೆ 4.10 ರಿಂದ 4.35ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಅರಮನೆ ಆವರಣದಲ್ಲಿ ವಿಜಯದಶಮಿ ಮೆರವಣಿಗೆಗೆ ಚಾಲನೆ ದೊರೆಯಲಿದ್ದು, ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗುವ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ. ಅದಕ್ಕೂ ಮುನ್ನ ಮಧ್ಯಾಹ್ನ ಧ್ಯಾಹ್ನ 1.36 ರಿಂದ 1.56ರ ನಡುವಿನ ಶುಭ ಮಕರ ಲಗ್ನದಲ್ಲಿ ನಂದಿಧ್ವಜ ಪೂಜೆ ನೆರವೇರಿಸಲಾಗುವುದು. ಅದೇ ದಿನ ಸಂಜೆ 7ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉಪಸ್ಥಿತಿಯಲ್ಲಿ ಬನ್ನಿಮಂಪಟದ ಪಂಜಿನ ಕವಾಯತು ಮೈದಾನದಲ್ಲಿ ಪಂಜಿನ ಕವಾಯತು ನಡೆಯಲಿದೆ.

ಗಣ್ಯರಿಗೆ ಆಹ್ವಾನ :

ನಾಡಹಬ್ಬ ದಸರಾ ಉತ್ಸವಕ್ಕೆ ಆಗಮಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರಿಗೆ ಬೆಂಗಳೂರಿನಲ್ಲಿ ಗುರುವಾರ ಜಿಲ್ಲಾಡಳಿತದಿಂದ ಆಹ್ವಾನ ನೀಡಲಾಯಿತು. ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ, ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net