

ಡಾ. ಎ.ಮೋಹನ್ ಕುಂಟಾರ್ ಗೆ ಎ.ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ ಪ್ರದಾನ
ವಿಜಯವಾಣಿ ಸುದ್ದಿಜಾಲ ಉಡುಪಿ
ಇಂದಿನ ಕಥೆ-ಕಾದಂಬರಿಯಿಂದ ಹಿಡಿದು ಹಿಂದಿನ ರಾಮಾಯಣ, ಮಹಾಭಾರತ ಇವೆಲ್ಲವೂ ಸಹ ಸಾಹಿತ್ಯ. ಇವುಗಳಿಗೆ ಹುಟ್ಟು ಇದೆ, ನಿರಂತತೆ, ಬದುಕೂ ಇದೆ. ಆದರೆ, ಸಾವಿಲ್ಲ. ಸೃಜನಶೀಲ ಬರವಣಿಗೆ ಹಾಗೂ ಎಲ್ಲವೂ ಸಹಿತವಾಗಿರುವುದನ್ನು ಸಾಹಿತ್ಯ ಎನ್ನುತ್ತಾರೆ ಎಂದು ಪಾಂಡಿಚೇರಿಯ ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್ನ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಪ್ರೇಮಶೇಖರ್ ಉಲ್ಲೇಖಿಸಿದರು.
ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಮುದ್ದಣ ಸಾಹಿತ್ಯೋತ್ಸವ ಮತ್ತು ಎ.ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಾಹಿತ್ಯ-ಏಕೆ--ಹೇಗೆ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಮೆಸೊಪೊಟೋಮಿಯಾ ಇತಿಹಾಸದಿಂದ ನಾಗರಿಕತೆ ತಿಳಿಯುತ್ತದೆ. ಆದರೆ, ಅದರ ಆಚೆಯೂ ನಾಗರಿಕತೆ, ಸಾಹಿತ್ಯ ಇತ್ತು. ಅವೆಲ್ಲ ನಾಶವಾಗಿದೆ. ಹೀಗಾಗಿ ಕಥೆ-ಕಾದಂಬರಿ ಓದಿದಾಗ ಅಲ್ಲಿನ ಪಾತ್ರಗಳ ಒಳಹೊಕ್ಕಾಗ ವಿಶೇಷ ಅನುಭವ ಆಗುತ್ತದೆ. ನಮ್ಮದಲ್ಲದ ಬದುಕು ದಕ್ಕುತ್ತದೆ. ಸಾಹಿತ್ಯ ಓದಿನಿಂದ ಸಮಯ ವ್ಯರ್ಥ್ಯವಾಗದೆ ಜ್ಞಾನ ಶ್ರೀಮಂತಗೊಳ್ಳುತ್ತದೆ. ಸಾಹಿತ್ಯದಿಂದ ತಾಳ್ಮೆ, ಸಹನೆ, ಸಾಧಿಸುವ ಮನೋಭಾವ ವೃದ್ಧಿಯಾಗುವುದರಿಂದ ವಿಜ್ಞಾನ ಮತ್ತು ಗಣಿತದಲ್ಲಿಯೂ ಸಾಹಿತ್ಯ ಅಳವಡಿಸಬೇಕಿದೆ. ಪಂಚತಂತ್ರ, ಇಸೋಪನ ನೀತಿ ಕಥೆಗಳು ಮನುಷ್ಯ ಹೇಗೆ ಬದುಕಬೇಕೆಂಬುದನ್ನು ತಿಳಿಸುತ್ತದೆ ಎಂದರು.
ವಿದ್ಯಾರ್ಥಿನಿಯರಾದ ಮೇಧಾ, ವೈಭವಿ ಸಂಗಡಿಗರು ಭಾವಗೀತೆ ಹಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಪುತ್ತಿ ವಸಂತಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ ಶೆಟ್ಟಿ, ಪ್ರಶಸ್ತಿ ಪುರಸ್ಕೃತರ ಪರಿಚಯ ಹಾಗೂ ಕೃತಿ ವಿಶ್ಲೇಷಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ ಎ. ಉಪಸ್ಥಿತರಿದ್ದರು. ಉಪನ್ಯಾಸಕಿ ಅದಿತಿ ಭಟ್ ಪ್ರಶಸ್ತಿ ಪತ್ರ ವಾಚಿಸಿದರು. ಉಪನ್ಯಾಸಕಿ ಡಾ. ವಿಜಯಲಕ್ಷ್ಮೀ ಪರಿಚಯಿಸಿದರು. ಕನ್ನಡ ಉಪನ್ಯಾಸಕ ರಾಘವೇಂದ್ರ ತುಂಗ ವಂದಿಸಿದರು. ಕನ್ನಡ ಉಪನ್ಯಾಸಕಿ ಅಂಬಿಕಾ ಕಾರ್ಯಕ್ರಮ ನಿರೂಪಿಸಿದರು.
ಹಂಪಿ ಕನ್ನಡ ವಿವಿಯ ಭಾಷಾಂತರ ಅಧ್ಯಯನ ವಿಭಾಗದ ಮುಖ್ಯಸ್ಥ, ಪ್ರಾಧ್ಯಾಪಕ ಡಾ. ಎ.ಮೋಹನ್ ಕುಂಟಾರ್ ಅವರು ತನ್ನ 'ಸ್ವಗತ ಮತ್ತು ಸಂವಾದ' ಕೃತಿಗೆ ವಿ.ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ-2024 ಸ್ವೀಕರಿಸಿ ಮಾತನಾಡಿ, ಬೆಳಗಾವಿ ಜಿಲ್ಲೆಯ ಹುದಲಿ ಗ್ರಾಮದ ಇನಾಂದಾರ್ ಅವರು ಉಡುಪಿಯಲ್ಲಿ ಬದುಕು ಕಂಡವರು. ಪೂರ್ಣಪ್ರಜ್ಞಾ ಕಾಲೇಜಿನ ಪ್ರಥಮ ಪ್ರಾಂಶುಪಾಲರೂ ಆಗಿದ್ದರು. ಸಾಹಿತ್ಯದ ರುಚಿ ಸವಿಯಬೇಕೆಂದರೆ ಇನಾಂದಾರ್ ಅವರ ಯಾವುದೇ ಕೃತಿಯನ್ನಾದರೂ ಓದಬಹುದು. ಸಾಹಿತ್ಯ ಓದುವುದರಿಂದ ಹೃದಯವಂತಿಕೆ ಉಂಟಾಗುತ್ತದೆ. ಮಾನವೀಯ ಸಂಬಂಧ ಬೆಸೆಯಲು ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದರು.