

ವಿಜಯವಾಣಿ ಸುದ್ದಿಜಾಲ ಉಡುಪಿ
ಜಿಲ್ಲೆಯ ಹಂಗಾರಕಟ್ಟೆ ಕೋಡಿ ಬೆಂಗ್ರೆಗಳ ಮೀನುಗಾರಿಕಾ ಕಿರು ಬಂದರು ಪ್ರದೇಶದಲ್ಲಿ ಸುಮಾರು 1 ಕಿಮೀ ವಿಸ್ತೀರ್ಣದ ಬ್ರೇಕ್ವಾಟರ್ ಕಾಮಗಾರಿ ನನೆಗುದಿಗೆ ಬಿದ್ದಿದೆ. ಈ ಭಾಗದಲ್ಲಿನ ಬಂದರು ಅಭಿವೃದ್ಧಿ ಕಾರ್ಯ ಆಗಬೇಕಿದ್ದು ಕೂಡಲೇ ಸಮಗ್ರ ಯೋಜನಾ ವರದಿ ತಯಾರಿಸಿ ಎಂದು ಅಧಿಕಾರಿಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಹಂಗಾರಕಟ್ಟೆಯಲ್ಲಿ ಸೆ.15ರಂದು ಸಂಜೆ ಮೀನುಗಾರಿಕಾ ಮತ್ತು ಬಂದರು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಕೋಡಿ-ಕನ್ಯಾಣದಿಂದ ಬೆಂಗ್ರೆಯವರೆಗೆ 3 ಕಿಮೀ ವ್ಯಾಪ್ತಿಯಲ್ಲಿ 11 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿಗೆ ಸಂಬಂಧಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಮೀನುಗಾರಿಕಾ ಮುಖಂಡರು ಮಾತನಾಡಿ, ಮಲ್ಪೆ ಬಂದರಿನ ನಂತರ ಹೆಚ್ಚು ಒತ್ತಡವಿರುವ ಹಂಗಾರಕಟ್ಟೆ ಬಂದರು ಅಭಿವೃದ್ಧಿಯಾದರೆ ಮೀನುಗಾರಿಕಾ ದೋಣಿ ನಿಲುಗಡೆಗೆ ಸಹಾಯವಾಗುತ್ತದೆ. ಕೊಚ್ಚಿನ್ ಶಿಪ್ ಯಾರ್ಡ್ ಬಳಿಯಿರುವ ಖಾಸಗಿ ಜಾಗದ ಮಾಲೀಕರೊಡನೆ ಚರ್ಚಿಸಿ, ಸರ್ಕಾರ ಭೂ ಸ್ವಾಧೀನ ಮಾಡಿಕೊಂಡರೆ ಹೊಸ ಜಟ್ಟಿ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಕುಂದಾಪುರ ಶಾಸಕ ಕಿರಣಕುಮಾರ್ ಕೊಡ್ಗಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕೊಚ್ಚಿನ್ ಶಿಪ್ ಯಾರ್ಡ್ನ ಸಿಇಒ ಹರಿಕುಮಾರ್, ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ವಿವೇಕ ಆರ್., ಮೀನುಗಾರಿಕಾ ಉಪನಿರ್ದೇಶಕ ಕುಮಾರಸ್ವಾಮಿ, ಬಂದರು ಇಲಾಖೆಯ ಪ್ರಸನ್ನ ಹಾಗೂ ಶೋಭಾ, ತಾಲೂಕು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರು, ಮೀನುಗಾರಿಕಾ ಮುಖಂಡರಾದ ರಾಜೇಂದ್ರ ಸುವರ್ಣ, ನಾಗರಾಜ ಬೆಂಗ್ರೆ, ಸುದಿನ್ ಬೆಂಗ್ರೆ, ಕೋಟತಟ್ಟು ಗ್ರಾಪಂ ಸದಸ್ಯ ರವೀಂದ್ರ ತಿಂಗಳಾಯ ಇತರರು ಉಪಸ್ಥಿತರಿದ್ದರು.
ಹೊಸ ಪ್ರಾಂಗಣ ಮೀನು ಏಲಂ ಮಾರುಕಟ್ಟೆ, ಶೌಚಾಲಯ ಮುಂತಾದ ಮೂಲ ಸೌಕರ್ಯ ಒದಗಿಸಲು ಶೇ.60-40ರ ಧನ ಸಹಾಯದ ಯೋಜನೆಯೊಂದಿಗೆ ಕೇಂದ್ರ ಸರ್ಕಾರಕ್ಕೆ ಶೀಘ್ರವಾಗಿ ಪ್ರಸ್ತಾವನೆ ಕಳುಹಿಸಬೇಕು. ಕೇಂದ್ರ ಸರ್ಕಾರದ ಮತ್ಸ್ಯ ಸಂಪದಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಉಡುಪಿ ಜಿಲ್ಲೆಯ ಶಾಸಕರೊಂದಿಗೆ ಕೂಡಲೇ ಸಭೆ ಕರೆಯಬೇಕು. | ಕೋಟ ಶ್ರೀನಿವಾಸ ಪೂಜಾರಿ. ಸಂಸದ