ಮುಸ್ಲಿಂರಿಗೆ ಮೋದಿಯಿಂದ ರಂಜಾನ್ ಕಿಟ್ ವಿತರಣೆ, ಸಚಿವ ಎಂ.ಬಿ. ಪಾಟೀಲ ರಿಯಾಕ್ಷನ್ ಹೇಗಿತ್ತು ಗೊತ್ತಾ?

M B Patil
Published on

ವಿಜಯಪುರ: ರಂಜಾನ್ ಹಬ್ಬದ ಹಿನ್ನೆಲೆ ಮುಸ್ಲಿಂರಿಗೆ ಕಿಟ್ ವಿತರಣೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಕ್ರಮ ಸ್ವಾಗತಾರ್ಹ. ಇನ್ನಾದರೂ ಸಂವಿಧಾನದ ಆಶಯದಂತೆ ನಡೆದುಕೊಳ್ಳಲಿ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ.ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದರು.

ನಗರದ ಈದ್ಗಾ ಮೈದಾನದಲ್ಲಿ ರಂಜಾನ್ ಹಿನ್ನೆಲೆ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಮುಸ್ಲಿಂರಿಗೆ ಕಿಟ್ ಕೊಟ್ಟಿರುವುದು ಒಳ್ಳೆಯದು. ಅದೇ ರೀತಿ ನಮ್ಮ ದೇಶದ ಪರಂಪರೆ, ಇತಿಹಾಸ , ಸಹೋದರತ್ವ ತತ್ವದಲ್ಲಿ ನಂಬಿಕೆ ಇಟ್ಟು ಆಡಳಿತ ನೀಡಲಿ. ಈ ದೇಶದಲ್ಲಿ ಹಿಂದು-ಮುಸ್ಲಿಂ-ಕ್ರೈಸ್ತ್-ಬೌದ್ಧರು ಒಟ್ಟಿಗೆ ಇದ್ದೇವೆ. ಇದೀಗ ಮೋದಿಯವರಿಗೆ ಅರ್ಥ ಆಗಿರೋದು ಬಹಳ ಸಂತೋಷ. ಇದೇ ರೀತಿ ಮೋದಿಯವರು ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಲಿ ಅಂತ ಪವಿತ್ರ ರಂಜಾನ್ ಹಬ್ಬದಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.

ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಸ್ಲಿಂರು ರಂಜಾನ್ ಹಬ್ಬದ ಪ್ರಾರ್ಥನೆಯಲ್ಲಿ ಕಪ್ಪು ಪಟ್ಟಿ ಕಟ್ಟಿಕೊಂಡು ಭಾಗಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪಾಟೀಲರು, ಅದಕ್ಕೆಲ್ಲದಕ್ಕೂ ಕಾನೂನಿದೆ, ಪಾರ್ಲಿಮೆಂಟ್ ಇದೆ. ಕಾನೂನು ಬಾಹಿರ, ಸಂವಿಧಾನ ಬಾಹಿರವಾಗಿ ಏನಾದರೂ ಕ್ರಮ ಕೈಗೊಂಡರೆ ಬೇರೆ ರೀತಿ ಪರಿಣಾಮ ಎದುರಿಸಬೇಕಾಗುತ್ತದೆ. ಜನ ಶಕ್ತಿ ಬಹಳ ದೊಡ್ಡದು. ಒಂದು ಕಡೆ ರಂಜಾನ್ ಹಬ್ಬದಲ್ಲಿ ಮುಸ್ಲಿಂರಿಗೆ ಕಿಟ್ ಕೊಡೋದು, ಇನ್ನೊಂದೆಡೆ ವಕ್ಫ್ ಕಾಯ್ದೆ ತಿದ್ದುಪಡಿ ಜಾರಿಗೆ ತಂದರೆ ಎರಡೂ ಸರಿದೂಗುವುದಿಲ್ಲ. ಅದಕ್ಕೆ ಕಾನೂನು ಪ್ರಕಾರವಾಗಿ, ಸಂವಿಧಾನ ಪ್ರಕಾರವಾಗಿ ನಡೆದುಕೊಳ್ಳಬೇಕಾಗಿರೋ ಜವಾಬ್ದಾರಿ ಎಲ್ಲರದು. ಹಿಂದು-ಮುಸ್ಲಿಂ ಬೇರೆ ಯಾರೇ ಇರಲಿ ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು ಎಂದರು.

ಶಾಸಕ ಯತ್ನಾಳ ಉಚ್ಚಾಟನೆ ವಿಚಾರ

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲರು, ಯತ್ನಾಳರು ಕಾಂಗ್ರೆಸ್ ಸೇರ್ಪಡೆಗಾಗಿ ಅರ್ಜಿ ಹಾಕಿಲ್ಲ. ಹಾಗೊಂದು ವೇಳೆ ಅರ್ಜಿ ಹಾಕಿದರೂ ನಮ್ಮ ಪಕ್ಷದಲ್ಲಿ ತೆಗೆದುಕೊಳ್ಳುವುದು ಕಷ್ಟ. ಅವರು ಒಂದು ಸಮುದಾಯವನ್ನು, ಒಂದು ಧರ್ಮದ ಜನರನ್ನು ಬೇಕಾಬಿಟ್ಟಿಯಾಗಿ ಅಪಮಾನಿಸಿದ್ದಾರೆ. ಅವಮಾನಿಸಿದ್ದಾರೆ. ಹೀಗಾಗಿ ಅವರನ್ನು ತೆಗೆದುಕೊಳ್ಳುವುದು ಕಷ್ಟ. ಸದ್ಯಕ್ಕೆ ಅವರು ಅರ್ಜಿಯನ್ನೇ ಹಾಕದಿರುವಾಗ ಮಾತನಾಡುವುದು ಅಪ್ರಸ್ತುತ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net