ಜ್ಞಾನಾರ್ಜನೆಗೆ ಹೊಸ ವಿಷಯಗಳ ಕಲಿಕೆ ಅಗತ್ಯ...

Moot Court
Published on

ಹೈಕೋರ್ಟ್​ ನ್ಯಾಯಮೂರ್ತಿ ಇ.ಎಸ್​. ಇಂದಿರೇಶ ಅನಿಸಿಕೆ

ಉಡುಪಿಯಲ್ಲಿ ಅಣಕು ನ್ಯಾಯಾಲಯ ಸ್ಫರ್ಧೆ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಜಾಗತಿಕ ಯುಗದಲ್ಲಿರುವ ವಿದ್ಯಾರ್ಥಿಗಳು ಹೊಸ ಹೊಸ ಸಂಗತಿ, ವಿಷಯಗಳನ್ನು ಕಲಿತು ಜ್ಞಾನ ಹೆಚ್ಚಿಸಿಕೊಂಡಲ್ಲಿ ನಿಗದಿತ ಗುರಿ ಸಾಧಿಸುವ ಸಾಮರ್ಥ್ಯ ಲಭಿಸುತ್ತದೆ. ನಿರಂತರ ಶ್ರಮ, ಪ್ರಾಮಾಣಿಕತೆ, ಸಮಗ್ರತೆ ಹಾಗೂ ಸಾಮಾಜಿಕವಾಗಿ ತೊಡಗಿಕೊಳ್ಳುವಿಕೆಯಿಂದ ಗುರಿ ಸಾಧಿಸುವ ಕನಸು ನನಸಾಗಲು ಸಾಧ್ಯ ಎಂದು ಹೈಕೋರ್ಟ್​ ನ್ಯಾಯಮೂರ್ತಿ ಇ.ಎಸ್​. ಇಂದಿರೇಶ ಅನಿಸಿಕೆ ವ್ಯಕ್ತಪಡಿಸಿದರು.

ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಏ.11ರಂದು ಆಯೋಜಿಸಿದ್ದ ಪ್ರತಿಷ್ಠಿತ ಅಡ್ವೋಕೇಟ್​ ಪಿ.ಶಿವಾಜಿ ಶೆಟ್ಟಿ ಸ್ಮಾರಕ 9ನೇ ರಾಷ್ಟ್ರೀಯ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಕಾನೂನು ವಿದ್ಯಾರ್ಥಿಗಳು ನಿತ್ಯವೂ ದಿನಪತ್ರಿಕೆ ಓದಬೇಕು ಎಂದು ಸಲಹೆ ನೀಡಿದರು.

ವಕೀಲರು ಸಮಾಜದ ವಿಜ್ಞಾನಿಗಳು

ಮದ್ರಾಸ್​ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಡಾ. ಪಿ.ಜ್ಯೋತಿಮಣಿ ಮಾತನಾಡಿ, ವಕೀಲರು ಸಮಾಜದಲ್ಲಿರುವ ವಿಜ್ಞಾನಿಗಳಾಗಿದ್ದಾರೆ. ವೈದ್ಯರಂತೆಯೇ ವಕೀಲರೂ ಸಹ ಸಮಾಜದಲ್ಲಿ ಸಮಾನ ಪಾತ್ರ ನಿರ್ವಹಿಸುತ್ತಾರೆ. ಅವರು ರೋಗಗಳಿಗೆ ಔಷಧ ಕೊಟ್ಟು ವಾಸಿ ಮಾಡಿ ಜನರಿಗೆ ಸಹಕರಿಸಿದರೆ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸುವ ಮೂಲಕ ವಕೀಲರು ನೊಂದವರ ಕಣ್ಣೀರು ಒರೆಸುತ್ತಾರೆ. ವಕೀಲರಾಗುವವರಿಗೆ ಇಂತಹ ಅಣಕು ನ್ಯಾಯಾಲಯ ಸ್ಪರ್ಧೆಯು ವೃತ್ತಿ ನೈಪುಣ್ಯತೆ ಸಾಧಿಸಲು ಸಹಕಾರಿಯಾಗುತ್ತದೆ ಎಂದರು.

ಕಾಲೇಜಿನ ನಿರ್ದೇಶಕಿ ಪ್ರೊ. (ಡಾ.) ನಿರ್ಮಲಾಕುಮಾರಿ ಕೆ. ಅಧ್ಯಕ್ಷತೆ ವಹಿಸಿದ್ದರು. ಜಯಂತಿ ಪಿ. ಶಿವಾಜಿ ಶೆಟ್ಟಿ, ಸ್ಪರ್ಧೆಯ ಸಂಯೋಜಕಿ ಸುರೇಖಾ ಕೆ., ವಕೀಲ ಶ್ರೀಧರ ಪಿ.ಎಸ್​., ಸ್ಫರ್ಧೆಯ ಕಾರ್ಯದರ್ಶಿಗಳಾದ ಕೌಶಲ ಕಾಮತ, ನಜ್ಮಾ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕಿರಣ ಎಸ್​. ಗಂಗಣ್ಣವರ ಪಾಲ್ಗೊಂಡಿದ್ದರು.

ಕಾಲೇಜಿನ ವಿದ್ಯಾರ್ಥಿನಿಯರಾದ ಶ್ರೀನಿಧಿ ಸಂಗಡಿಗರು ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. (ಡಾ.) ರಘುನಾಥ ಕೆ.ಎಸ್​. ಸ್ವಾಗತಿಸಿದರು. ಕಾನೂನು ವಿದ್ಯಾರ್ಥಿಗಳಾದ ಸಿಮ್ರಾನ್​ ಶೇಖ್​, ಸಂಜನಾ ಎಸ್​. ತೋಳೂರು, ವಿದ್ಯಾರ್ಥಿ ಡಿಯಾನ್​ ಕ್ವಾಡ್ರೋಸ್​ ಅತಿಥಿಗಳನ್ನು ಪರಿಚಯಿಸಿದರು. ಸಾಯಿರಮ್ಯಾ ಆರ್​. ಬೇಳೂರಕರ್​ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಾಂಶುಪಾಲ ಅಮೋಘ ಗಡಕರ್​ ವಂದಿಸಿದರು.

ಶೀಲ್ಡ್​ಗಳ ಅನಾವರಣ

ಸ್ಫರ್ಧಾ ವಿಜೇತರಿಗೆ ನೀಡುವ ಶೀಲ್ಡ್​ಗಳನ್ನೂ ಸಹ ಅನಾವರಣ ಮಾಡಲಾಯಿತು. ಮೂರು ದಿನ ನಡೆಯಲಿರುವ ಈ ಸ್ಪರ್ಧೆಯಲ್ಲಿ ದೇಶದ 22 ರಾಜ್ಯಗಳಿಂದ ಕಾನೂನು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.

ವಕೀಲರು ಸಮಾಜ ನಿರ್ಮಿಸುವ ಇಂಜನಿಯರ್​ಗಳಿದ್ದಂತೆ. ಹೀಗಾಗಿ ಉತ್ತಮ ಸಮಾಜ ನಿರ್ಮಿಸುವಲ್ಲಿ ಮುಂದಾಗಬೇಕು. ಕಲಿಕೆಯಿಂದ ಹಿಡಿದು ಆರಂಭದ 10 ವರ್ಷ ಕತ್ತೆಯಂತೆ ಶ್ರಮವಹಿಸಿ ದುಡಿದರೆ 11ನೇ ವರ್ಷದಿಂದ ಕುದುರೆಯಂತೆ ವೇಗವಾಗಿ ಓಡಬಹುದು. ಅಣಕು ನ್ಯಾಯಾಲಯ ಸ್ಪರ್ಧೆಯು ನ್ಯಾಯಾಂಗದ ಎಲ್ಲ ಆಯಾಮಗಳನ್ನು ಸಮರ್ಪಕವಾಗಿ ತಿಳಿದುಕೊಳ್ಳುವ ಪೂರಕ ವೇದಿಕೆಯಾಗಿದೆ. ನ್ಯಾಯದ ಪರವಾಗಿ ಸಮರ್ಥವಾಗಿ ವಾದ ಮಂಡಿಸಲು ಯುವ ವಕೀಲರನ್ನು ಇದು ಅಣಿಗೊಳಿಸಲಿದೆ. | ಇ.ಎಸ್​. ಇಂದಿರೇಶ. ಹೈಕೋರ್ಟ್​ ನ್ಯಾಯಮೂರ್ತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net