ಅಪ್ರಾಪ್ತನಿಂದ ಬೈಕ್ ಸವಾರಿ, ಬಾಲಕನ ತಂದೆಗೆ 28 ಸಾವಿರ ರೂ. ದಂಡ!

Gavel on desk. Isolated with good copy space. Dramatic lighting.
Gavel on desk. Isolated with good copy space. Dramatic lighting.
Published on

ನರಗುಂದ: ಅಪ್ರಾಪ್ತನಿಗೆ ಸಾರ್ವಜನಿಕ ಸ್ಥಳದಲ್ಲಿ ಬೈಕ್ (ಸ್ಕೂಟಿ) ಓಡಿಸಲು ಕೊಟ್ಟಿದ್ದಕ್ಕಾಗಿ ಬಾಲಕನ ತಂದೆಗೆ 28 ಸಾವಿರ ರೂ.ದಂಡವಿಧಿಸಿ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಜೀನ್ನಪ್ಪ ಚೌಗಲಾ ಶುಕ್ರವಾರ ಆದೇಶ ನೀಡಿದ್ದಾರೆ. ನರಗುಂದ ತಾಲೂಕಿನಲ್ಲಿ ಇಷ್ಟು ದೊಡ್ಡ ಮೊತ್ತದ ದಂಡ ವಿಧಿಸಿರುವುದು ಇದೇ ಮೊದಲ ಪ್ರಕರಣವಾಗಿದೆ.

ಏನಿದು ಘಟನೆ: ಪಟ್ಟಣದ ಅರ್ಭಾಣ ಬಡಾವಣೆಯ ಮೊಹಮ್ಮದ್ ಆಸೀಫ್ ಮೊಹಮ್ಮದ್ ಯೂಸುಫ್ ಕಚ್ಚಿ ಎಂಬುವರು ಅಪ್ರಾಪ್ತನಿಗೆ ಮಾರ್ಚ್ 8 ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಸ್ಕೂಟಿ ಓಡಿಸಲು ಕೊಟ್ಟಿದ್ದರು. ನರಗುಂದದ ಶಿವಾಜಿ ವರ್ತುಲದ ಬಳಿ ಇಬ್ಬರಿಗಿಂತ ಹೆಚ್ಚು ಜನರನ್ನು ಹತ್ತಿಸಿಕೊಂಡು ಅಪಾಯಕಾರಿ ರೀತಿಯಲ್ಲಿ ವಾಹನ ಚಾಲನೆ ಮಾಡುತ್ತಿದ್ದಾಗ ಗಸ್ತಿನಲ್ಲಿದ್ದ ಪೊಲೀಸರು ಬೈಕ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಕುರಿತು ವಿಚಾರಣೆ ನಡೆಸಿದ ದಿವಾಣಿ ನ್ಯಾಯಾಧೀಶ ಜೀನ್ನಪ್ಪ ಚೌಗಲಾ ಅವರು, ಅಪ್ರಾಪ್ತನಿಗೆ ಸಾರ್ವಜನಿಕ ರಸ್ತೆ ಮೇಲೆ ವಾಹನ ಚಾಲನೆ ಮಾಡಲು ಕೊಟ್ಟಿದ್ದಕ್ಕಾಗಿ ಮೋಟಾರ ವಾಹನ ಕಾಯ್ದೆಯಡಿ ಬಾಲಕನ ತಂದೆಗೆ 28 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net