

ಮಂಡ್ಯ: ಜಿಲ್ಲೆಯಲ್ಲಿ ಸೆ.10 ರಿಂದ 45 ದಿನದ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು.
ನಗರದ ಜಿಪಂ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಪ್ರಥಮ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದರು.
ಸಮೀಕ್ಷೆ ಕೈಗೊಳ್ಳಲು ಏಳು ತಾಲೂಕಿಗೆ ಒಬ್ಬರಂತೆ ಸಮೀಕ್ಷೆದಾರರನ್ನು ನೇಮಕ ಮಾಡಲಾಗಿದೆ. ಅವರಿಗೆ ಈಗಾಗಲೇ ತರಬೇತಿ ಸಹ ನೀಡಲಾಗಿರುತ್ತದೆ. ಸಮೀಕ್ಷೆದಾರರು ತಾಲೂಕು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಲಿಂಗತ್ವ ಅಲ್ಪಸಂಖ್ಯಾತರು ಆಸ್ಪತ್ರೆಗೆ ಭೇಟಿ ನೀಡಿ ನಿಖರ ಮಾಹಿತಿ ನೀಡಿ. ಈ ಹಿಂದೆ ಜಿಲ್ಲೆಯಲ್ಲಿ ಅಶೋದಯ ಸಮಿತಿಯಿಂದ ನಡೆಸಿದ ಸಮೀಕ್ಷೆಯಲ್ಲಿ 1039 ಲಿಂಗತ್ವ ಅಲ್ಪಸಂಖ್ಯಾರನ್ನು ಗುರುತಿಸಲಾಗಿದೆ. ಇವರುಗಳು ಸಮೀಕ್ಷೆಯಲ್ಲಿ ನೊಂದಾಯಿಸಿಕೊಳ್ಳುವಂತೆ ನೋಡಿಕೊಳ್ಳಿ. ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಮುಖ್ಯಸ್ಥರನ್ನು ಸಂಪರ್ಕಿಸಿ ಸಮೀಕ್ಷೆಯ ಬಗ್ಗೆ ಮಾಹಿತಿ ನೀಡಿ ಜಿಲ್ಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಸಮೀಕ್ಷೆಯಿಂದ ಹೊರ ಉಳಿಯದಂತೆ ನೋಡಿಕೊಳ್ಳಿ ಎಂದರು.
ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಸರ್ಕಾರ ಲಿಂಗತ್ವ ಅಲ್ಪಸಂಖ್ಯಾತರಿಗೆ ಯೋಜನೆ ರೂಪಿಸಲು, ಸವಲತ್ತುಗಳನ್ನು ಒದಗಿಸುವ ದೃಷ್ಟಿಯಿಂದ ಸಮೀಕ್ಷೆ ನಡೆಸುತ್ತದೆ. ಇದು ಸ್ವಯಂ ಪ್ರೇರಿತ ಸಮೀಕ್ಷೆಯಾಗಿರುತ್ತದೆ. ಲಿಂಗತ್ವ ಅಲ್ಪಸಂಖ್ಯಾತರು ಖುದ್ದು ತಾಲೂಕು ಆಸ್ಪತ್ರೆಗೆ ಆಗಮಿಸಿ ಮಾಹಿತಿ ನೀಡಬೇಕಿರುತ್ತದೆ. ಇದರ ಬಗ್ಗೆ ಸಮುದಾಯದಲ್ಲಿ ಹೆಚ್ಚಿನ ಪ್ರಚಾರ ಕೈಗೊಂಡು ಸಮೀಕ್ಷೆಯನ್ನು ನಡೆಸಿ ಎಂದರು.
ಸಭೆಯಲ್ಲಿ ಭಾಗವಹಿಸಿದ್ದ ಲಿಂಗತ್ವ ಅಲ್ಪಸಂಖ್ಯಾತರು ವಸತಿ ಸಮಸ್ಯೆಯ ಬಗ್ಗೆ ತಿಳಿಸಿದಾಗ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಮಂಡ್ಯ ನಗರಸಭೆಯಲ್ಲಿ ನಿವೇಶನ ಹಾಗೂ ವಸತಿ ರಹಿತರ ಪಟ್ಟಿ ಸಿದ್ಧ ಪಡಿಸುತ್ತಿದ್ದು, ಮಂಡ್ಯ ನಗರ ವ್ಯಾಪ್ತಿಯಲ್ಲಿ ಬರುವ ಲಿಂಗತ್ವ ಅಲ್ಪಸಂಖ್ಯಾತರು ನಗರಸಭೆಯ ಪಟ್ಟಿಯಲ್ಲಿ ಹೆಸರು ಸೇರಿಸುವಂತೆ ತಿಳಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಮೂರ್ತಿ, ಡಿಎಲ್ಒ ಡಾ.ಸೋಮಶೇಖರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ, ಮಹಿಳಾ ಸಬಲೀಕರಣ ಘಟಕದ ಪುಷ್ಪಾ ಇತರರಿದ್ದರು.