

ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ಚನ್ನರಾಯಪಟ್ಟಣ
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ ಬೂದಿಗೆರೆ ಗ್ರಾಮದಲ್ಲಿ ಭಾನುವಾರ ರಾತ್ರಿ ರಸ್ತೆಯುದ್ದಕ್ಕೂ ಸಿರಂಜ್‌ಗಳು ಸೇರಿ ವಿವಿಧ ಬಗೆಯ ವೈದ್ಯಕೀಯ ತ್ಯಾಜ್ಯ ಕಂಡುಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಅಲರ್ಟ್ ಆಗಿರುವ ಜಿಲ್ಲಾ ಆರೋಗ್ಯ ಇಲಾಖೆ ದೇವನಹಳ್ಳಿ ತಾಲೂಕಿನ ಖಾಸಗಿ ಕ್ಲಿನಿಕ್‌ಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಟಿಎಚ್‌ಒ ದೌಡು: ಭಾನುವಾರ ರಾತ್ರಿ ವೈದ್ಯಕೀಯ ತ್ಯಾಜ್ಯ ಹರಿದಾಡುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ದೇವನಹಳ್ಳಿ ತಾಲೂಕು ಆರೋಗ್ಯಾಧಿಕಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೈದ್ಯಕೀಯ ತ್ಯಾಜ್ಯ ದೊರೆತಿರುವ ಸುತ್ತಮುತ್ತಲ ಪ್ರದೇಶಗಳಲ್ಲಿನ ಖಾಸಗಿ ಕ್ಲಿನಿಕ್‌ಗಳನ್ನು ತಪಾಸಣೆ ನಡೆಸಿದ್ದಾರೆ. ಅನುಮಾನ ಬಂದ ಕೆಲವು ಕ್ಲಿನಿಕ್‌ಗಳಿಗೆ ನೋಟಿಸ್ ನೀಡಿ ವೈಜ್ಞಾನಿಕವಾಗಿ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಬಗ್ಗೆ ಖಚಿತಪಡಿಸುವಂತೆ ಸೂಚನೆ ನೀಡಲಾಗಿದೆ.
ಬೀದಿಗೆ ಬಂದ್ ಸಿರಿಂಜ್‌ಗಳು: ಬೂದಿಗೆರೆ ಸುತ್ತಮುತ್ತಲ ಶನಿವಾರ ಹಾಗೂ ಭಾನುವಾರ ಭಾರಿ ಮಳೆಯಾಗಿದ್ದು, ಮಳೆ ನೀರಿನೊಂದಿಗೆ ರಾಶಿಗಟ್ಟಲೆ ಸಿರಿಂಜ್‌ಗಳು ಸೇರಿ ವಿವಿಧ ಬಗೆಯ ವೈದ್ಯಕೀಯ ತ್ಯಾಜ್ಯಗಳು ಹರಿದುಬಂದಿವೆ. ಇವುಗಳನ್ನು ಕಂಡ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ವೈದ್ಯಕೀಯ ತ್ಯಾಜ್ಯನ್ನು ವಿಂಗಡಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಆದರೆ ಕೆಲವು ಖಾಸಗಿ ಕ್ಲಿನಿಕ್‌ನವರು ಬೇಕಾಬಿಟ್ಟಿ ವಿಲೇವಾರಿ ಮಾಡುತ್ತಿರುವುದರಿಂದ ವೈದ್ಯಕೀಯ ತ್ಯಾಜ್ಯ ಬೀದಿಗೆ ಬರುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಗ್ರಾಮದಲ್ಲಿ ಆತಂಕ ಸೃಷ್ಟಿ: ಬೂದಿಗೆರೆ ಭಾಗದಲ್ಲಿ ಕೆಲ ದಿನಗಳಿಂದ ಉತ್ತಮ ಮಳೆಯಾಗಿದ್ದು, ಅದರಲ್ಲೂ ಶನಿವಾರ ಸುರಿದ ಜೋರು ಮಳೆಗೆ ಚರಂಡಿ, ಕಾಲುವೆಗಳು ತುಂಬಿ ಹರಿದಿವೆ. ಇದೇ ವೇಳೆ ಚರಂಡಿ, ಕಾಲುವೆಗಳಿಂದ ಸಿರಂಜ್‌ಗಳು ಸೇರಿ ಇನ್ನಿತರ ವೈದ್ಯಕೀಯ ತ್ಯಾಜ್ಯ ನೀರಿನಲ್ಲಿ ತೇಲಿಕೊಂಡು ಬಂದು ರಸ್ತೆ ಮೇಲೆ ಹಾಗೂ ಅಕ್ಕ ಪಕ್ಕದಲ್ಲಿ ಹರಡಿವೆ.ವೈಜ್ಞಾನಿಕವಾಗಿ ವಿಂಗಡಿಸಿ ವಿಲೇವಾರಿ ಮಾಡಬೇಕಿದ್ದ ವೈದ್ಯಕೀಯ ತ್ಯಾಜ್ಯ ರಸ್ತೆಯುದ್ದಕ್ಕೂ ಪ್ರತ್ಯೇಕ್ಷವಾಗಿ ಆತಂಕ ಸೃಷ್ಟಿಸಿದೆ.
ಎಲ್ಲಿಂದ ಬಂತು ತ್ಯಾಜ್ಯ: ಬೂದಿಗೆರೆ ಗ್ರಾಮದಲ್ಲಿ ದಿಢೀರ್ ಕಂಡುಬಂದ ವೈದ್ಯಕೀಯ ತ್ಯಾಜ್ಯದ ಬಗ್ಗೆ ಎಲ್ಲೆಡೆ ಗುಸುಗುಸು ನಡೆಯುತ್ತಿದೆ. ಮಳೆ ನೀರಿನಲ್ಲಿ ಕೊಚ್ಚಿಕೊಂಡು ಬಂದಿರುವುದರಿಂದ ನಿಖರವಾಗಿ ಎಲ್ಲಿಂದ ಬಂದಿದೆ ಎಂದು ಪತ್ತೆ ಹಚ್ಚುವುದು ಕಷ್ಟಸಾಧ್ಯವಾಗಿದೆ. ಆದರೆ ವೈದ್ಯಕೀಯ ತ್ಯಾಜ್ಯವನ್ನು ಹೀಗೆ ವಿಲೇವಾರಿ ಮಾಡುವುದು ಗಂಭೀರ ಅಪರಾಧ. ಆದರೂ ಇಷ್ಟೊಂದು ನಿರ್ಲಕ್ಷ್ಯ ತೋರಿಸುತ್ತಿರುವುದು ಏಕೆ ಎಂಬ ಪ್ರಶ್ನೆ ಮೂಡಿಸಿದೆ. ಈ ಹಿಂದಿನಿಂದಲೂ ಗ್ರಾಮಾಂತರ ಜಿಲ್ಲೆಯಲ್ಲಿ ನಕಲಿ ಕ್ಲಿನಿಕ್‌ಗಳ ಹಾವಳಿ ಹೆಚ್ಚಿದೆ. ಆಗಾಗ ಜಿಲ್ಲಾ ಆರೋಗ್ಯ ಇಲಾಖೆ ದಾಳಿ ನಡೆಸುವುದು ನಕಲಿ ಕ್ಲಿನಿಕ್‌ಗಳಿಗೆ ಬೀಗ ಹಾಕುವುದು ನಡದೇ ಇದೆ. ಆದರೆ ಕೆಲವು ದಿನಗಳ ನಂತರ ಪ್ರಕರಣದ ಸದ್ದು ಅಡಗುತ್ತದೆ. ಅದೇ ರೀತಿ ಈ ಪ್ರಕರಣವೂ ಆಗದಿರಲಿ. ಎಲ್ಲಿಂದ ವೈದ್ಯಕೀಯ ತ್ಯಾಜ್ಯ ಬರುತ್ತಿದೆ. ಯಾವ್ಯಾವ ಕ್ಲಿನಿಕ್‌ನವರು ಹೇಗೆ ವಿಲೇವಾರಿ ಮಾಡುತ್ತಿದ್ದಾರೆ ಎಂಬುದರ ಸಂಪೂರ್ಣ ತಪಾಸಣೆ ನಡೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬೂದಿಗೆರೆಯಲ್ಲಿ ವೈದ್ಯಕೀಯ ತ್ಯಾಜ್ಯ ಕಂಡುಬಂದ ಮಾಹಿತಿ ಹಿನ್ನೆಲೆಯಲ್ಲಿ ತಕ್ಷಣ ಟಿಎಚ್‌ಒ ಅವರಿಗೆ ಪರಿಶೀಲನೆ ನಡೆಸಲು ಸೂಚಿಸಲಾಗಿತ್ತು. ಅದರಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುತ್ತಮುತ್ತಲ ಖಾಸಗಿ ಕ್ಲಿನಿಕ್‌ಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಕೆಲವೊಂದು ಕ್ಲಿನಿಕ್‌ಗಳಿಗೆ ನೋಟಿಸ್ ನೀಡಿದ್ದಾರೆ. ಅದೇ ರೀತಿ ಜಿಲ್ಲೆಯ ಎಲ್ಲ ಕ್ಲಿನಿಕ್‌ಗಳಿಗೂ ನೋಟಿಸ್ ನೀಡಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿರುವ ಬಗ್ಗೆ ಖಚಿತಪಡಿಸುವಂತೆ ಸೂಚಿಸಲಾಗಿದೆ. ಈ ಪ್ರಕರಣವನ್ನು ಗಂಭೀರವಾರಿ ಪರಿಗಣಿಸಲಾಗಿದೆ.
ಡಾ.ಸುನಿಲ್‌ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ
ಬೂದಿ ಹೋಬಳಿ ವ್ಯಾಪ್ತಿಯಲ್ಲಿ ನಾಯಿಕೊಡೆಗಳಂತೆ ಖಾಸಗಿ ಕ್ಲಿನಿಕ್‌ಗಳು ಹಾಗೂ ಹಲು ಮೆಡಿಕಲ್ ಸ್ಟೋರ್‌ಗಳು ಹುಟ್ಟಿಕೊಂಡಿವೆ. ಆದರೆ ಇವರು ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿರುವ ಬಗ್ಗೆ ಅನುಮಾನವಿದೆ. ಇವುಗಳನ್ನು ಚರಂಡಿಗಳಲ್ಲಿ ಸುರಿಯುತ್ತಿದ್ದಾರೆ ಎಂಬ ಶಂಕೆ ಇದೆ. ಅಧಿಕಾರಿಗಳು ಸರಿಯಾದ ರೀತಿ ತನಿಖೆ ನಡೆಸಿದರೆ ಸತ್ಯ ಬಯಲಾಗಲಿದೆ.
ಶ್ರೀಧರ್ ಬೂದಿಗೆರೆ ಗ್ರಾಮಸ್ಥ