

ಮದ್ದೂರು: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ತೆಂಗಿನ ಮರಗಳಿಗೆ ಬಂದಿರುವ ಕಪ್ಪು ತಲೆ ಹುಳು ಬಾಧೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಭರವಸೆ ನೀಡಿದರು.
ತಾಲೂಕಿನ ತೈಲೂರು ಗ್ರಾಮದ ತೈಲೂರಮ್ಮ ದೇವಸ್ಥಾನ ಆವರಣದಲ್ಲಿ ಬುಧವಾರ ತೋಟಗಾರಿಕೆ ಇಲಾಖೆಯಿಂದ ಹಮ್ಮಿಕೊಂಡಿದ್ದ ಕಪ್ಪು ತಲೆ ಹುಳು ಬಾಧಿತ ತೆಂಗಿನ ತೋಟದ ರೈತರುಗಳಿಗೆ ಇಲಾಖೆಯಿಂದ ತರಬೇತಿ ಹಾಗೂ ಉಚಿತವಾಗಿ ಬೇವಿನ ಎಣ್ಣೆ ವಿತರಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶೀಘ್ರವಾಗಿ ತಾಲೂಕಿಗೆ ತೋಟಗಾರಿಕೆ ಸಚಿವರನ್ನು ಕರೆಸಿ ಅವರಿಗೆ ತೆಂಗಿನ ಮರಗಳಿಗೆ ಬಂದಿರುವ ಕಪ್ಪುತಲೆ ಹುಳು ಬಾಧೆಯಿಂದ ರೈತರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಅವರ ಗಮನಕ್ಕೆ ತಂದು ರೋಗ ನಿಯಂತ್ರಣ ಮಾಡಲು ಸರ್ಕಾರ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ತೆಂಗು ಬೆಳೆಗಾರರು ಆತಂಕ ಪಡದೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಕಪ್ಪು ತಲೆ ಹುಳ ನಿಯಂತ್ರಣಕ್ಕೆ ನಾನು ಶಾಸಕನಾದ ನಂತರ ತಾಲೂಕಿನಲ್ಲಿ ಹೊಸದಾಗಿ ಪ್ರಯೋಗಾಲಯ ನಿರ್ಮಾಣ ಮಾಡಲಾಗಿದೆ. ಮುಂದೆಯೂ ತೆಂಗು ಬೆಳೆಗಾರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.
ಕೃಷಿ ವಿಜ್ಞಾನಿಗಳಾದ ಡಾ.ಪವಿತ್ರಾ, ಡಾ.ಹತೀಪ ಅವರು ಕುಪ್ಪ ತಲೆ ಹುಳುವಿನ ಬಗ್ಗೆ ರೈತರಿಗೆ ವಿಶೇಷ ಮಾಹಿತಿ ನೀಡಿದರು.
ತರಬೇತಿ ಕಾರ್ಯಾಗಾರದಲ್ಲಿ ಕೆ.ಕೋಡಿಹಳ್ಳಿ, ಅಗರಲಿಂಗನ ದೊಡ್ಡಿ, ತೈಲೂರು, ಬೂದುಗುಪ್ಪೆ, ಮಾದನಾಯಕನಹಳ್ಳಿ, ರುದ್ರಾಕ್ಷಿಪುರ, ನಿಡಘಟ್ಟ ಗ್ರಾಮದ ರೈತರು ಆಗಮಿಸಿ, ಉಚಿತ ಬೇವಿನ ಎಣ್ಣೆ ಪಡೆದುಕೊಂಡರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಎಂ.ರೇಖಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೆಲುವರಾಜು, ಗ್ರಾಪಂ ಮಾಜಿ ಅಧ್ಯಕ್ಷ ನಿಡಘಟ್ಟ ಪ್ರಕಾಶ್ ಇದ್ದರು.