

ಮೂಡಿಗೆರೆ: ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಒತ್ತಾಯಿಸಿ ಮಾ.15ರಂದು ವಿವಿಧ ಸಂಘಟನೆಗಳಿಂದ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥ್ ಗೌಡ ತಿಳಿಸಿದರು.
ತಾಲೂಕಿನಲ್ಲಿ 15 ವರ್ಷದಿಂದ ವಿದ್ಯುತ್ ಸಮಸ್ಯೆಯಿದೆ. ಅನೇಕ ಬಾರಿ ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಇದೂವರೆಗೂ ಸಮಸ್ಯೆ ಪರಿಹರಿಸಿಲ್ಲ. ಗುಣಮಟ್ಟದ ವಿದ್ಯುತ್ ಇಲ್ಲದೆ ಕೃಷಿ ಚಟುವಟಿಕೆಗೆ ತೊಂದರೆ ಉಂಟಾಗಿದೆ. ಮೋಟಾರು ಸುಟ್ಟು ಹೋಗುತ್ತಲೇ ಇದೆ. 15 ದಿನಗಳ ಹಿಂದೆ ನಾನೊಬ್ಬನೇ ಏಕಾಂಗಿಯಾಗಿ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದೆ. ಆಗ ಮೆಸ್ಕಾಂ ಪ್ರಭಾರ ಎಇಇ ಎಸ್.ಎಲ್.ಲೋಹಿತ್ ಅವರು ಕರೆ ಮಾಡಿ ಕೂಡಲೇ ಸಮಸ್ಯೆ ಬಗೆಹರಿಸಲಾಗುವುದು ಎಂದು ಪೊಳ್ಳು ಭರವಸೆ ನೀಡಿ ನನ್ನನ್ನು ಸಾಗಹಾಕಿದ್ದರು. ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಯಾವ ಅಧಿಕಾರಿಗೂ ರೈತರ ಸಂಕಷ್ಟದ ಅರಿವಿಲ್ಲ. ಸ್ಥಳೀಯ ಜನಪ್ರತಿನಿಧಿಗಳೂ ಗಮನಹರಿಸುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರೇ ಇಂಧನ ಸಚಿವರಾದರೂ ವಿದ್ಯುತ್ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ. ಹಾಗಾಗಿ ರೈತ ಸಂಘ, ನೀರಾವರಿ ವಿದ್ಯುತ್ ಬಳಕೆದಾರ ವೇದಿಕೆ, ಕರವೇ ಸೇರಿದಂತೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನೀರಾವರಿ ವಿದ್ಯುತ್ ಬಳಕೆದಾರ ವೇದಿಕೆ ಅಧ್ಯಕ್ಷ ಭರತ್ ಮಡ್ಡಿಕೆರೆ ಮಾತನಾಡಿ, ರೈತರಿಗೆ ಕಾರ್ಮಿಕರ ಸಮಸ್ಯೆ ಒಂದು ಕಡೆಯಾದರೆ, ಮತ್ತೊಂದೆಡೆ ವಿದ್ಯುತ್ ಸಮಸ್ಯೆ ಎದುರಾಗಿದೆ. ಈಗ ಕಾಫಿ ತೋಟಕ್ಕೆ ನೀರು ಹಾಯಿಸಬೇಕಿದೆ. ಇಂಥ ಸಂದರ್ಭದಲ್ಲಿ ಗುಣಮಟ್ಟದ ವಿದ್ಯುತ್ ಸಿಗುತ್ತಿಲ್ಲ. ಪ್ರತಿ ವರ್ಷ ಮೆಸ್ಕಾಂ ಅಧಿಕಾರಿಗಳ ಭರವಸೆ ಕೇಳಿ ಸಾಕಾಗಿದೆ ಎಂದು ದೂರಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಪುಟ್ಟಸ್ವಾಮಿ ಗೌಡ, ರಾಜ್ಯ ಉಪಾಧ್ಯಕ್ಷೆ ಜಿ.ಆರ್.ವನಶ್ರೀ, ಮುಖಂಡರಾದ ಎಂ.ಎನ್.ಚಂದ್ರೇಗೌಡ, ಎಚ್.ಎಸ್.ನಾಗೇಶ್‌ಗೌಡ ಇತರರಿದ್ದರು.