ಮತ್ಸ್ಯ ಸಂಪತ್ತು ವೃದ್ಧಿಸಿ, ಮೀನುಗಾರರನ್ನು ರಕ್ಷಿಸು...

Fishing
Published on

ಸಮುದ್ರರಾಜನಿಗೆ ಮೀನುಗಾರರ ಪ್ರಾರ್ಥನೆ

ಮಲ್ಪೆಯಲ್ಲಿ ಗಣಹೋಮ, ಸಾಮೂಹಿಕ ಪೂಜೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಆರಂಭದ ಹಿನ್ನೆಲೆಯಲ್ಲಿ ಮಲ್ಪೆ ವಲಯ ನಾಡದೋಣಿ ಮೀನುಗಾರರ ಸಂದ ವತಿಯಿಂದ ಸಮುದ್ರ ರಾಜನಿಗೆ ಜೂನ್​ 13ರಂದು ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಲಾಯಿತು.

ಮಲ್ಪೆ ಭಾಂಡೇಶ್ವರ ಸಮುದ್ರ ತೀರದಲ್ಲಿ ಸಂಪ್ರದಾಯದಂತೆ ನಾಡದೋಣಿ ಮೀನುಗಾರರು ಶ್ರದ್ಧಾ-ಭಕ್ತಿಯಿಂದ ಸಮುದ್ರ ಪೂಜೆ ಕೈಗೊಂಡರು. ಮತ್ಸ್ಯ ಸಂಪತ್ತು ವೃದ್ಧಿಯಾಗಿ, ಮೀನುಗಾರರ ಕ್ಷೇಮ ಹಾಗೂ ಲೋಕದ ಸುಭೀಕ್ಷೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಗಣಹೋಮ, ವಿಶೇಷ ಪೂಜೆ

ಬೆಣ್ಣೆಕುದ್ರು ಕುಲಮಹಾಸ್ತ್ರೀ ಅಮ್ಮನವರಿಗೆ ಗಣಹೋಮ, ವಿಶೇಷ ಪೂಜೆ ನಡೆಸಿ, ವಡಭಾಂಡೇಶ್ವರ ಬಲರಾಮ ದೇವಸ್ಥಾನಕ್ಕೆ ಆಗಮಿಸಿದ ಮೀನುಗಾರರು ವಿಶೇಷ ಪೂಜೆ ಸಲ್ಲಿಸಿದರು. ಸಮೀಪದ ಬೊಬ್ಬರ್ಯ ದೈವಸ್ಥಾನದಲ್ಲಿ ಪಂಜುರ್ಲಿ ದೈವಕ್ಕೆ ಹಣ್ಣು-ಕಾಯಿ ಸಮರ್ಪಿಸಿದರು. ಬಳಿಕ ಮೆರವಣಿಗೆಯಲ್ಲಿ ತೆರಳಿ ಸಮುದ್ರ ರಾಜನಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು.

ಕಾಂಗ್ರೆಸ್​ ನಾಯಕ ಪ್ರಸಾದರಾಜ್​ ಕಾಂಚನ್​, ಮಲ್ಪೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಸುಂದರ ಪಿ. ಸಾಲ್ಯಾನ್​, ಉಪಾಧ್ಯಕ್ಷ ದೇಜಪ್ಪ ಕೋಟ್ಯಾನ್​, ಕಾರ್ಯದರ್ಶಿ ಯುವರಾಜ ಸಾಲ್ಯಾನ್​, ಕಂತು ಬಲೆ ಮೀನುಗಾರರ ಸಂಘದ ಅಧ್ಯಕ್ಷ ಯಾದವ ಅಮೀನ್​, ಟ್ರಾಲ್​ ದೋಣಿ ಮೀನುಗಾರರ ಸಂಘದ ಅಧ್ಯಕ್ಷ ಆನಂದ ಕಾಂಚನ್​, ಮಲ್ಪೆ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಕೃಷ್ಣ ಸುವರ್ಣ, ಪ್ರಮುಖರಾದ ವಾಸು, ವಿಜಯ, ರಾಜೇಶ ಇತರರು ಪಾಲ್ಗೊಂಡಿದ್ದರು.

ವರ್ಷಂಪ್ರತಿಯಂತೆ ಈ ಬಾರಿಯೂ ಬೆಣ್ಣೆಕುದ್ರು ದೇವಸ್ಥಾನದಲ್ಲಿ ಗಣಹೋಮ, ಬಲರಾಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮತ್ಸ್ಯ ಸಂಪತ್ತು ವೃದ್ಧಿಗಾಗಿ ಪ್ರಾರ್ಥನೆ ಮಾಡಿದ್ದೇವೆ. ಕಡಲಿಗಿಳಿಯುವ ಮೊದಲು ವಾಡಿಕೆಯಂತೆ ಸಮುದ್ರ ರಾಜನಿಗೆ ಪೂಜೆ ಸಲ್ಲಿಸಿದ್ದೇವೆ. ರೆಡ್​ ಅಲರ್ಟ್​ ಇರುವುದರಿಂದ ಜೂ.16 ಅಥವಾ 17ರಂದು ಕಡಲಿಗಿಳಿಯಲು ಮೀನುಗಾರರು ನಿರ್ಧರಿಸಿದ್ದಾರೆ. | ಸುಂದರ ಪಿ. ಸಾಲ್ಯಾನ್​. ಮಲ್ಪೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net