

ಬೆಂಗಳೂರು: ಬೆಂಗಳೂರಿನ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಸಮಸ್ಯೆಯನ್ನು ನಿವಾರಿಸಲು ಸಮೂಹ ಸಾರಿಗೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದೇ ಪರಿಹಾರ ಎಂದು ನಗರ ಪರಿಣಿತ ವಿ.ರವಿಚಂದರ್ ಹೇಳಿದ್ದಾರೆ.
ಬೆಂಗಳೂರು ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿ (ಬಿಸಿಐಸಿ) ಗುರುವಾರ ನಗರದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ‘3ನೇ ಬಿಸಿಐಸಿ ನಾಯಕತ್ವ ಶೃಂಗಸಭೆ 2025’ಯ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಸ್ತುತ ನಗರದ ಜನಸಂಖ್ಯೆಗೆ ಹೋಲಿಸಿದರೆ ಸಮೂಹ ಸಾರಿಗೆಯಲ್ಲಿ ಸಂಚರಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಬಿಎಂಟಿಸಿ ಸೇರಿದಂತೆ ವಿವಿಧ ಸಾರಿಗೆಗಳಲ್ಲಿ ಶೇ.45 ಮಂದಿ ಪ್ರಯಾಣಿಸುತ್ತಿದ್ದಾರೆ. ಈ ಪ್ರಮಾಣ ಶೇ.70ಕ್ಕೆ ಏರದ ಹೊರತು ರಸ್ತೆಗಳಲ್ಲಿ ದಟ್ಟಣೆ ಕುಗ್ಗದು. ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಬಸ್ ಸಂಖ್ಯೆ ಕಡಿಮೆಯಾಗಿದ್ದು, ಈ ವಿಚಾರದಲ್ಲಿ ಸಂಸ್ಥೆ ಹಾಗೂ ಸರ್ಕಾರ ಜನಪರ ನಿರ್ಧಾರ ಕೈಗೊಳ್ಳಬೇಕು. ಜತೆಗೆ ಖಾಸಗಿ ಕಂಪನಿಗಳ ಹಿರಿಯ ಹುದ್ದೆಯಲ್ಲಿರುವವರು ಕೂಡ ಸಾರ್ವಜನಿಕ ಸಾರಿಗೆಯನ್ನು ಬಳಸಬೇಕು ಎಂದು ಅವರು ಪ್ರತಿಪಾದಿಸಿದರು.
ನಗರದ ಮೂಲಸೌಕರ್ಯ ಸಮಸ್ಯೆಗಳಿಗೆ ಕಾರ್ಯಸಾಧ್ಯವಾದ ಪರಿಹಾರ ಕೈಗೊಳ್ಳುವ ಅಗತ್ಯ ಇದೆ. ಇದರ ಜವಾಬ್ದಾರಿಯನ್ನು ಬೆಂಗಳೂರಿನ ಕಾರ್ಪೊರೇಟ್ ನಾಯಕರು ತೆಗೆದುಕೊಳ್ಳಬೇಕಾಗಿದೆ ಎಂದು ವಿ.ರವಿಚಂದರ್ ಸಲಹೆ ನೀಡಿದರು.
ಬಿಸಿಐಸಿ ಅಧ್ಯಕ್ಷ ಪ್ರಶಾಂತ್ ಗೋಖಲೆ ಮಾತನಾಡಿ, ಬಿಸಿಐಸಿ ನಾಯಕತ್ವ ವೇದಿಕೆಯು ಸಿ-ಸೂಟ್ ನಾಯಕರಿಗಾಗಿ ಪ್ರತೀ ವರ್ಷ ಶೃಂಗಸಭೆ ಆಯೋಜಿಸುತ್ತಾ ಬಂದಿದೆ. ಅನುಭವ ಹಂಚಿಕೆ, ವ್ಯವಹಾರದ ಅತ್ಯುತ್ತಮ ಅಭ್ಯಾಸ ಮತ್ತು ಕಾರ್ಯತಂತ್ರದ ನೆಟ್‌ವರ್ಕಿಂಗ್‌ಗಾಗಿ ಹಿರಿಯ ವ್ಯಾಪಾರ ವೃತ್ತಿಪರರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಪ್ರಯತ್ನಕ್ಕೆ ಒಂದಿಷ್ಟು ಯಶಸ್ಸು ದೊರತಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ್ ಬಿ. ಹೊಸೂರ್, ಉದ್ಯಮಿಗಳಾದ ಟಿ ಮಹೇಶ್, ಮಾಯಾ ಚಂದ್ರ, ರವೀಂದ್ರ ಕೆ. ಅಗರವಾಲ್, ಶ್ರೀಕಾಂತ್ ಅಯ್ಯರ್ ಮತ್ತು ಸುಬೋರ್ನೊ ಬೋಸ್ ಹಾಜರಿದ್ದರು.