ಮರವೂರು ಸೇತುವೆ ದುರಸ್ತಿ ಬಹುತೇಕ ಪೂರ್ತಿ: 30ರಿಂದ ಲಘು ವಾಹನ ಸಂಚಾರಕ್ಕೆ ತೆರವಾಗುವ ನಿರೀಕ್ಷೆ

bridge
Published on

ಮಂಗಳೂರು: ಕಾವೂರು ಬಳಿ ಮಳವೂರು ಸೇತುವೆಯ ಕುಸಿದ ಪಿಲ್ಲರ್ ದುರಸ್ತಿ ಕಾರ್ಯ ಬಹುತೇಕ ಪೂರ್ತಿಯಾಗಿದ್ದು, ಜು.30ರಿಂದ ಲಘು ವಾಹನ ಸಂಚಾರಕ್ಕೆ ತೆರವಾಗುವ ನಿರೀಕ್ಷೆಯಿದೆ.

ಪಿಡಬ್ಲುೃಡಿ ಇಲಾಖೆಯ ತಜ್ಞ ಇಂಜಿನಿಯರ್‌ಗಳ ಸಲಹೆಯಂತೆ ಕೆಲದಿನಗಳ ಹಿಂದೆಯೇ ಸೇತುವೆಯ ಪಿಲ್ಲರನ್ನು ಮೇಲಕ್ಕೆತ್ತಿ ಯಥಾಸ್ಥಿತಿಗೆ ತರಲಾಗಿತ್ತು. ಅದರ ಬಳಿಕ ವಾಹನ ಸಂಚಾರ ಸುಸೂತ್ರವಾಗುವಂತೆ ಕೆಲವು ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಇದೀಗ ಬಹುತೇಕ ಪೂರ್ಣಗೊಂಡಿದೆ.

ಗುರುವಾರ ತಜ್ಞರ ಉಪಸ್ಥಿತಿಯಲ್ಲಿ ಸೇತುವೆ ವಾಹನ ಸಂಚಾರಕ್ಕೆ ಯೋಗ್ಯವಾಗಿದೆಯೇ ಎಂದು ಪರೀಕ್ಷಿಸಲು ರೋಡ್ ಟೆಸ್ಟ್ ನಡೆಸಲಾಗುತ್ತದೆ. ಈ ಪರೀಕ್ಷೆ ಯಶಸ್ವಿಯಾದರೆ 30ರಿಂದಲೇ ಲಘು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಪಿಡಬ್ಲುೃಡಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಜೂ.15ರಂದು ಬೆಳಗ್ಗೆ ಸೇತುವೆಯಲ್ಲಿ ಬಿರುಕು ಮೂಡಿ ಪಿಲ್ಲರ್ ಜಗ್ಗಿದ್ದನ್ನು ಸ್ಥಳೀಯರೊಬ್ಬರು ಗಮನಿಸಿ ಮಾಹಿತಿ ರವಾನಿಸಿದ್ದರು. ಕೂಡಲೇ ಸೇತುವೆಯ ಎರಡೂ ಬದಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಇದರಿಂದ ಮಂಗಳೂರು ವಿಮಾನ ನಿಲ್ದಾಣ, ಬಜ್ಪೆ, ಕಟೀಲು, ಅದ್ಯಪಾಡಿ ಕಡೆಗೆ ತೆರಳುವರು ಸುತ್ತು ಬಳಸಿ ಹೋಗುವಂತಾಗಿತ್ತು. ಇದೀಗ ಸುಮಾರು ಒಂದೂವರೆ ತಿಂಗಳ ಬಳಿಕ ಸೇತುವೆ ಮತ್ತೆ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net