ಪಾಂಡವಪುರ: ತಾಲೂಕಿನ ಮಡಕೆಪಟ್ಟಣ ಗ್ರಾಮದ ಭೋವಿ ಸಮುದಾಯದವರಿಗೆ 70 ವರ್ಷಗಳಿಂದಲೂ ಯಾವುದೇ ಮೂಲಸೌಲಭ್ಯ ದೊರೆತಿರಲಿಲ್ಲ. ಈಗ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಇಚ್ಛಾಸಕ್ತಿಯಿಂದ ಹಕ್ಕುಪತ್ರ, ಇ-ಸ್ವತ್ತು, ರಸ್ತೆ, ಚರಂಡಿ, ವಿದ್ಯುತ್ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದಾರೆ ಎಂದು ಭಾರತೀಯ ಭೋವಿ ಜನಾಂಗ ಪರಿಷತ್ ಜಿಲ್ಲಾಧ್ಯಕ್ಷ ಟಿ.ಸಿ.ಗುರಪ್ಪ ಹೇಳಿದರು.
ಗ್ರಾಮದ ಭೋವಿ ಸಮುದಾಯದವರು ಆಯೋಜಿಸಿದ್ದ ಹಕ್ಕು ಪತ್ರ ಮತ್ತು ಇ-ಸ್ವತ್ತು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಭೋವಿ ಜನಾಂಗದ ಕುಟುಂಬಗಳು ಕೆಆರ್‌ಎಸ್ ಅಣೆಕಟ್ಟೆ ನಿರ್ಮಾಣಕ್ಕಾಗಿ ಬಂದು ಇಲ್ಲೇ ನೆಲೆಸಿದವು. ಆದರೆ ಇಲ್ಲಿಯವರೆಗೆ ಮೂಲಸೌಕರ್ಯಗಳಿಲ್ಲದೆ ವಂಚಿತರಾಗಿದ್ದರು. ಭೋವಿ ಸಮುದಾಯದವರ ಮನವಿ ಮೇರೆಗೆ ಆಸಕ್ತಿ ವಹಿಸಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು, ಜನವಸತಿ ಇಲ್ಲದ ಗ್ರಾಮವೆಂದು ಘೋಷಿಸಲ್ಪಟ್ಟಿದ್ದ ಮಡಕೆಪಟ್ಟಣವನ್ನು ಜನವಸತಿ ಪ್ರದೇಶವೆಂದು ಮಾಡಿ ಚಿಕ್ಕಾಡೆ ಗ್ರಾಮ ಪಂಚಾಯಿತಿಗೆ ಸೇರ್ಪಡೆಗೊಳಿಸಿದ್ದಾರೆ. ಪ್ರತಿ ಮನೆಗೆ ವಿದ್ಯುತ್ ಮೀಟರ್, ನರೇಗಾ ಯೋಜನೆಯಡಿ 5 ಲಕ್ಷ ರೂ. ವೆಚ್ಚದಲ್ಲಿ ಮುಖ್ಯರಸ್ತೆ, 7ಲಕ್ಷ ರೂ. ವೆಚ್ಚದಲ್ಲಿ ಸಂಪರ್ಕ ರಸ್ತೆ, ಪ್ರತ್ಯೇಕ ವಿದ್ಯುತ್ ಪರಿವರ್ತಕ, ಶಾಸಕರ ಅನುದಾನದಲ್ಲಿ ಬೋರ್‌ವೆಲ್ ಅಳವಡಿಸಿ ಕುಡಿಯುವ ನೀರಿನ ಟ್ಯಾಂಕ್, ಹೆಚ್ಚುವರಿ ವಿದ್ಯುತ್ ಕಂಬಗಳು ಸೇರಿದಂತೆ ಹಲವು ಅನುದಾನಗಳನ್ನು ನೀಡಿರುವ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಧನ್ಯವಾದ ಅರ್ಪಿಸುವುದಾಗಿ ಹೇಳಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಜನರ ಸಮಸ್ಯೆಗಳನ್ನು ತಿಳಿದುಕೊಳ್ಳಲು ಮೇಲುಕೋಟೆ ವಿಧಾನ ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಪಾದಯಾತ್ರೆ ಮಾಡಿದ ಸಂದರ್ಭದಲ್ಲಿ ಮಡಕೆ ಪಟ್ಟಣಕ್ಕೆ ಭೇಟಿ ನೀಡಿದ್ದೆ. ಇಲ್ಲಿನ ಜನರ ಸಮಸ್ಯೆಗಳನ್ನು ಅರಿತು ಮೂಲಸೌಲಭ್ಯಗಳನ್ನು ಒದಗಿಸಲು ನಿರ್ಧರಿಸಿದ್ದೆ. ಅದರಂತೆ ಶೋಷಣೆಗೆ ಒಳಗಾಗಿರುವ ಭೋವಿ ಸಮುದಾಯದವರಿಗೆ ಅಗತ್ಯವಾಗಿದ್ದ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.
ಭೋವಿ ಸಮುದಾಯದ ಫಲಾನುಭವಿಗಳಾದ ಸಂಪತ್‌ಕುಮಾರ್, ಏಳುಮಲೈ, ಮೀನಾಕ್ಷಿ, ಭಾಗ್ಯಲಕ್ಷ್ಮಿ, ಸುಬ್ಬಮ್ಮ, ಪಳನಿ, ಕೆ.ಸಂಪತ್ತು, ನಾರಾಯಣ ಸೇರಿದಂತೆ ಸುಮಾರು 15 ಕುಟುಂಬಗಳಿಗೆ ಹಕ್ಕುಪತ್ರ ಮತ್ತು ಇ-ಸ್ವತ್ತು ಪತ್ರಗಳನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ವಿತರಿಸಿದರು. ಈ ವೇಳೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಭೋವಿ ಸಮುದಾಯದವರು ಸನ್ಮಾನಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ವೈ.ಪಿ.ಮಂಜುನಾಥ್, ಪಿಡಿಒ ಪ್ರಮೋದ್, ಕಾರ್ಯದರ್ಶಿ ಶಿವರಾಜು, ಬಿಲ್ ಕಲೆಕ್ಟರ್ ಸಂತೋಷ್, ರಾಜೇಂದ್ರ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮೋಹನ್ ಕುಮಾರ್, ಮನು, ಭೋವಿ ಜನಾಂಗದ ಜಿಲ್ಲಾ ಉಪಾಧ್ಯಕ್ಷ ವೆಂಕಟರಾಮು, ಗ್ರಾಮದ ಮುಖಂಡರಾದ ಸಂಪತ್ ಕುಮಾರ್, ವೀರಭದ್ರ, ಸತೀಶ್, ಸತ್ಯವೇಲು ಚಂದ್ರ, ಅಶೋಕ್, ಕಾರ್ತಿಕ್, ಕಿಶೋರ್ ಇತರರಿದ್ದರು.