

ಮದ್ದೂರು: ಉತ್ತಮ ಸಮಾಜ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಅನನ್ಯ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ ಬಣ್ಣಿಸಿದರು.
ನಗರದ ಟೌನ್ ಕ್ಲಬ್‌ನ ಶ್ರೀ ಉಗ್ರ ನರಸಿಂಹಸ್ವಾಮಿ ಸಭಾಂಗಣದಲ್ಲಿ ಚುಂಚಶ್ರೀ ಗೆಳೆಯರ ಬಳಗ, ಶ್ರೀ ನಾಡ ಪ್ರಭು ಕೆಂಪೇಗೌಡ ಅವರ ಒಕ್ಕಲಿಗರ ಸಂಘ ಹಾಗೂ ಟೌನ್ ಕ್ಲಬ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ಶ್ರೀ ಬಿಜಿಎಸ್ ಶಿಕ್ಷಕಶ್ರೀ ಸೇವಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ಉತ್ತಮವಾಗಿ ಪಾಠ ಮಾಡುವ ಜತೆಗೆ ಮಕ್ಕಳಲ್ಲಿ ಉತ್ತಮ ನಡತೆ, ಶಿಸ್ತು ಮತ್ತು ಮಾನವೀಯ ಮೌಲ್ಯಗಳನ್ನು ತುಂಬುವ ಮೂಲಕ ಸಂಸ್ಕಾರಯುತ ವ್ಯಕ್ತಿಗಳನ್ನಾಗಿ ರೂಪಿಸುತ್ತಾರೆ. ಇದರಿಂದ ಪ್ರತಿಯೊಬ್ಬರು ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದರು.
ಚಂಚುಶ್ರೀ ಗೆಳೆಯ ಬಳಗದ ಅಧ್ಯಕ್ಷ ಡಾ.ಬಿ.ಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಚುಂಚಶ್ರೀ ಗೆಳೆಯರ ಬಳಗ, ಶ್ರೀ ನಾಡ ಪ್ರಭು ಕೆಂಪೇಗೌಡರ ಒಕ್ಕಲಿಗರ ಸಂಘ ಹಾಗೂ ಟೌನ್ ಕ್ಲಬ್ ವತಿಯಿಂದ ಹಲವು ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಶ್ರೀ ಬಿಜಿಎಸ್ ಶಿಕ್ಷಕಶ್ರೀ ಸೇವಾ ರತ್ನ ಪ್ರಶಸ್ತಿ ನೀಡುತ್ತಾ ಬಂದಿದ್ದು, ಇದರ ಜತೆಗೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನೊಂದವರ ಬಾಳಿಗೆ ಆಸರೆಯಾಗಿದ್ದೇವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಸಹ ನಿರ್ದೇಶಕ ಸಿ.ಚಾಮೇಗೌಡ ಅವರಿಗೆ ಶ್ರೀ ಬಿಜಿಎಸ್ ಶಿಕ್ಷಕಶ್ರೀ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ಬಿಇಒ ಬಿ.ಎನ್.ಮರೀಗೌಡ, ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ, ಶ್ರೀ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ವಿ.ಟಿ.ರವಿಕುಮಾರ್, ಜನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಆರ್.ಅನಂತೇಗೌಡ, ಮುಖ್ಯಶಿಕ್ಷಕ ಎಚ್.ಆರ್.ಅನಂತೇಗೌಡ, ದೊರೆಸ್ವಾಮಿ, ಎಸ್.ಸಿ.ಶಿವಲಿಂಗಯ್ಯ, ಚನ್ನಯ್ಯ, ಎಂ.ಎ.ಕೃಷ್ಣ, ಎಸ್.ಚಂದ್ರು, ಸಿ.ಕೆ.ರಾಮಕೃಷ್ಣ, ಕೆ.ಶಿವಕುಮಾರ್ ಇತರರು ಇದ್ದರು.