

ಕೆ.ಆರ್.ಪೇಟೆ: ತಾಲೂಕಿನ ಬೂಕನಕೆರೆ ಹೋಬಳಿ ಮೋದೂರು ಗ್ರಾಮದ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶತಾಯುಷಿ ಚನ್ನಾಜಮ್ಮ ಮತ್ತು ರಾಮಯ್ಯ ಅವರ ಹೆಸರಿನಲ್ಲಿ ಪುತ್ರ ರಾಜಮೂರ್ತಿ ನಿರ್ಮಿಸಿರುವ ನೂತನ ಸಮುದಾಯ ಭವನವನ್ನು ಸುತ್ತೂರು ಮಠದ ಪೀಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶ್ರೀಗಳು, ಹುಟ್ಟೂರಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ರಾಜಮೂರ್ತಿ ಅವರು ತಂದೆ-ತಾಯಿಯ ಹೆಸರಿನಲ್ಲಿ ಗುಣಮಟ್ಟದ ಸಮುದಾಯ ಭವನ ನಿರ್ಮಿಸಿರುವುದು ಶ್ಲಾಘನೀಯ. ಪ್ರತಿಯೊಬ್ಬರೂ ಎಲ್ಲೇ ನೆಲೆಸಿದ್ದರೂ ಹುಟ್ಟೂರನ್ನು ಮರೆಯಬಾರದು. ಸಮಾಜಮುಖಿ ಕಾರ್ಯಗಳ ಮೂಲಕ ಊರಿನ ಅಭಿವೃದ್ಧಿಗೆ ಕೈಜೋಡಿಸಬೇಕು. ಇಂತಹ ಕಾರ್ಯಗಳು ಇತರರಿಗೂ ಪ್ರೇರಣೆಯಾಗಬೇಕು ಎಂದು ತಿಳಿಸಿದರು.
ಶಾಸಕ ಎಚ್.ಟಿ.ಮಂಜು ಮಾತನಾಡಿ, ಗ್ರಾಮೀಣ ಜನರ ಅನುಕೂಲಕ್ಕಾಗಿ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ನೆರವಾಗುವಂತೆ ಸಮುದಾಯ ಭವನ ನಿರ್ಮಿಸಿರುವುದು ಉತ್ತಮ ಕಾರ್ಯ. ಇಂತಹ ಸಮಾಜಮುಖಿ ಸೇವೆಗಳು ಗ್ರಾಮದ ಅಭಿವೃದ್ಧಿಗೆ ಪೂರಕವಾಗಿವೆ ಎಂದರು.
ಸಮಾಜ ಸೇವಕ ಆರ್ಟಿಒ ಮಲ್ಲಿಕಾರ್ಜುನ್, ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಪೀಠಾಧಿಪತಿ ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಕ್ಷೇತ್ರ ಗವಿಮಠದ ಪೀಠಾಧಿಪತಿ ಚೆನ್ನವೀರ ಮಹಾಸ್ವಾಮಿಗಳು, ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸುಜೇಂದ್ರ ಕುಮಾರ್, ಜಿಲ್ಲಾ ಅಧ್ಯಕ್ಷ ಆನಂದ ಕುಮಾರ್, ಶಿಕ್ಷಣ ಸಂಯೋಜಕ ಸುರೇಶ್, ಶಿಕ್ಷಕರಾದ ಮಂಜುನಾಥಸ್ವಾಮಿ, ಎಂ.ಎನ್.ಮಹದೇವಪ್ಪ ಇತರರು ಇದ್ದರು.