

ಶ್ರೀರಂಗಪಟ್ಟಣ: ಮಹಾಲಯ ಅಮಾವಾಸ್ಯೆ ಪ್ರಯುಕ್ತ ತಮ್ಮ ಪೂರ್ವಜರಿಗೆ ಪಿತೃಪಕ್ಷದ ಧಾರ್ಮಿಕ ಕಾರ್ಯ ನೆರವೇರಿಸಲು ಲಕ್ಷಾಂತರ ಸಂಖ್ಯೆಯ ಜನಸಾಗರ ಶನಿವಾರ ಜೀವನದಿ ಕಾವೇರಿ ತೀರಕ್ಕೆ ಹರಿದು ಬಂದಿದ್ದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ಎಲ್ಲೆಲ್ಲೂ ಜನಜಂಗುಳಿಯಿಂದ ತುಂಬಿತ್ತು.
ಪಟ್ಟಣದ ಕಾವೇರಿ ಸ್ನಾನಘಟ್ಟ, ಗಿಡ್ಡಿ ಬಾಗಿಲು(ಜಿ.ಬಿ)ಹೊಳೆ, ಗಂಜಾಂನ ಸಂಗಮ, ಗೋಸಾಯ್ ಘಾಟ್ ಹಾಗೂ ಸಮೀಪದ ಪಶ್ಚಿಮ ವಾಹಿನಿಯ ನದಿ ತೀರಗಳಲ್ಲಿ ನೆರೆದಿದ್ದ ವಿವಿಧ ಜಾತಿಗಳ ವೈದಿಕರಿಂದ ರಾಜ್ಯ ಹಾಗೂ ಹೊರ ರಾಜ್ಯದ ವಿವಿಧೆಡೆಯಿಂದ ಮುಂಜಾನೆಯೇ ಆಗಮಿಸಿದ್ದ ಜನರು ತಮ್ಮ ಸಂಪ್ರದಾಯಬದ್ಧ ಪೂಜೆಗಳ ಹಾದಿಯಲ್ಲಿ ತಿಲ ತರ್ಪಣ, ಶಾಂತಿ ಹೋಮ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಅಪರ ಕರ್ಮಗಳನ್ನು ನೆರವೇರಿಸಿ ಪಿಂಡ ಪ್ರದಾನ ಮಾಡುವ ಮೂಲಕ ತಮ್ಮ ಪೂರ್ವಜರ ಆತ್ಮಗಳಿಗೆ ಜೀವನದಿ ಕಾವೇರಿ ತೀರದಲ್ಲಿ ಕುಳಿತು ಸದ್ಗತಿ ಪ್ರಾಪ್ತಿಗೆ ಪ್ರಾರ್ಥಿಸಿದರು.
ಪೂಜೆಗೆ ಸಾವಿರಾರು ರೂ. ಪಡೆದು ವಂಚನೆ: ಪಿತೃಪಕ್ಷ ಆಚರಣೆ ಹಿನ್ನೆಲೆ ಲಕ್ಷಾಂತರ ಸಂಖ್ಯೆಯ ಆಸ್ತಿಕ ಜನರು ತಮ್ಮ ಪೂರ್ವಜರಿಗೆ ಧಾರ್ಮಿಕ ಕಾರ್ಯ ನೆರವೇರಿಸಲು ಆಗಮಿಸುವುದನ್ನೇ ಬಂಡವಾಳ ಮಾಡಿಕೊಂಡ ಹಲವು ಖದೀಮರು ಜನರಿಂದ ಪ್ರತಿ ಪೂಜೆಗೆ ಕನಿಷ್ಠ 2 ಸಾವಿರ ರೂ.ಗಳಿಂದ ಪ್ರಾರಂಭಿಸಿ 10 ಸಾವಿರ ರೂ.ವರೆಗೂ ದೋಚಿದ್ದಾರೆ. ಹಲವು ವ್ಯಕ್ತಿಗಳು ನಕಲಿ ವೈದಿಕರ ವೇಷಧರಿಸಿ ಮನಸ್ಸಿಗೆ ಬಂದ ಪೂಜೆ ಮತ್ತು ಬಾಯಿಗೆ ಬಂದ ಸಂಕಲ್ಪಗಳನ್ನು ನೆರವೇರಿಸಿ ಮುಗ್ಧ ಜನರಿಂದ ಕೊಟ್ಟಷ್ಟು ಹಣ ಕೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡುಬಂದಿತು.
ನದಿ ತೀರಗಳಲ್ಲಿ ಪೂಜೆ ನಡೆಸುವ ಈ ವೈದಿಕರಿಗೆ ಯಾವುದೇ ಗುರುತಿನ ಕಾರ್ಡುಗಳು ಹಾಗೂ ಪೂಜೆಗಳಿಗೆ ಯಾವುದೇ ದರ ನಿಗದಿಪಡಿಸದ ಕಾರಣ ಸ್ಥಳೀಯ ಪುರಸಭೆಗೆ 100 ರೂ. ರಸೀದಿ ಹರಿದ ಬಳಿಕ ಜನರ ಸ್ಥಿತಿಗತಿಗಳ ಆಧಾರದಲ್ಲಿ ಅವರಿಂದ ಹಣ ಕಿತ್ತಿದ್ದಾರೆ. ಇನ್ನು ಅಧಿಕ ಜನರ ಆಗಮನದಿಂದ ಪಿಕ್ ಪಾಕೆಟ್ ಕಳ್ಳರೂ ಅಲ್ಲಲ್ಲಿ ತಮ್ಮ ಕೈಚಳಕ ತೋರಿರುವುದು ತಮ್ಮ ವಸ್ತು, ದುಡ್ಡು ಕಳೆದುಕೊಂಡ ಕೆಲವರ ಆಪಾದನೆಯಿಂದ ಅಲ್ಲಲ್ಲಿ ಕೇಳಿಬಂದಿತು.
ಭರ್ಜರಿ ಹಣ ಸಂಗ್ರಹ, ವ್ಯಾಪಾರಿಗಳಿಗೂ ಆದಾಯ: ಪಟ್ಟಣದ ಸುತ್ತಲೂ ಹರಿಯುವ ಕಾವೇರಿ ನದಿಯ ವಿವಿಧ ತೀರಗಳಲ್ಲಿ ಅಸ್ಥಿ ವಿಸರ್ಜನೆ, ಪಿಂಡ ಪ್ರದಾನ, ಧಾರ್ಮಿಕ ಅಪರ ಕ್ರಿಯೆ ನಡೆಸಲು ಪುರಸಭೆಯಿಂದ ಹರಾಜು ಪ್ರಕ್ರಿಯೆ ಮೂಲಕ ಟೆಂಡರ್ ನೀಡಿರುವ ಹಿನ್ನೆಲೆ ಆಯಾ ವ್ಯಾಪ್ತಿಯ ಗುತ್ತಿಗೆದಾರರಿಗೆ ಭರ್ಜರಿ ಹಣ ಸಂಗ್ರಹವಾಗಿದೆ.
ಲಕ್ಷಾಂತರ ಸಂಖ್ಯೆಯ ಜನರ ಆಗಮನದಿಂದ ಸ್ಥಳೀಯ ಬೀದಿ ಬದಿಯ ವ್ಯಾಪಾರಿಗಳಾದ ಹಣ್ಣು-ಕಾಯಿ, ಹೂವು, ತರಕಾರಿ, ಪನ್ಸಾರಿ ಸಾಮಗ್ರಿಗಳ ಅಂಗಡಿಗಳ ಮಾರಾಟಗಾರರು ಸೇರಿದಂತೆ ಆಟೋ ಚಾಲಕರು ಹಾಗೂ ಸಣ್ಣ ಪುಟ್ಟ ಟೀ ಅಂಗಡಿ, ಹೋಟೆಲ್‌ಗಳಿಗೂ ಆರ್ಥಿಕ ಮಟ್ಟ ಸುಧಾರಿಸುವಂತಹ ವ್ಯಾಪಾರ ವಾಹಿವಾಟು ನಡೆದಿದೆ.
ಕಾವೇರಿ ನದಿಯಲ್ಲಿ ಬಟ್ಟೆಗಳ ರಾಶಿ: ಪಿತೃಪಕ್ಷದ ನಿಮಿತ್ತ ಧಾರ್ಮಿಕ ಅಪರ ಕಾರ್ಯ ನೆರವೇರಿಸಲು ಆಗಮಿಸಿದ್ದ ಸಹಸ್ರಾರು ಜನರು ಕಾವೇರಿ ನದಿಯಲ್ಲಿ ಮಿಂದು ಬಳಿಕ ತಾವು ಹಾಗೂ ತಮ್ಮ ಮಕ್ಕಳ ಸಮೇತ ಕುಟುಂಬ ಸದಸ್ಯರು ಧರಿಸಿದ್ದ ವಸ್ತ್ರಗಳು ಹಾಗೂ ಖರೀದಿಸಿ ತಂದಿದ್ದ ಇತರ ವಸ್ತುಗಳು, ತ್ಯಾಜ್ಯಗಳನ್ನು ನದಿಯ ನೀರು ಮತ್ತು ತೀರದ ಎಲ್ಲೆಂದರಲ್ಲಿ ವಿಸರ್ಜಿಸಿ ಎಸೆಯುತ್ತಿದ್ದ ಕಾರಣ ಕಾವೇರಿ ನದಿಯೂ ಸಂಪೂರ್ಣ ಮಾಲಿನ್ಯಗೊಳ್ಳುತ್ತಿದ್ದ ದೃಶ್ಯ ಕಂಡುಬಂದಿತು. ಈ ಬಗ್ಗೆ ಜನರು ಎಚ್ಚರ ವಹಿಸಿ ಬಟ್ಟೆಗಳನ್ನು ನದಿಗೆ ಎಸೆಯದಿರಲು ಗೃಹರಕ್ಷಕ ಸಿಬ್ಬಂದಿ ಮೈಕ್‌ಗಳಲ್ಲಿ ಜಾಗೃತಿ ಮೂಡಿಸಿ ಮನವಿ ಮಾಡಿದರೂ ಇದಕ್ಕೆ ಜನರು ಕಿವಿಗೊಡಲೇ ಇಲ್ಲ.
ವಾಹನಗಳ ದಟ್ಟಣೆ: ಪಟ್ಟಣಕ್ಕೆ ರಾಜ್ಯದ ವಿವಿಧೆಡೆಯಿಂದ ಜನರು ಹಾಗೂ ಪ್ರವಾಸಿಗರು ಮುಂಜಾನೆ 5ರಿಂದಲೇ ಆಗಮಿಸುತ್ತಿದ್ದ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಪಟ್ಟಣದ ಮುಖ್ಯರಸ್ತೆ, ನದಿ ತೀರದ ರಸ್ತೆ ಹಾಗೂ ಶ್ರೀರಂಗನಾಥಸ್ವಾಮಿ ದೇವಾಲಯದ ಮೈದಾನ ತುಂಬೆಲ್ಲ ಜನಜಂಗುಳಿ ಹಾಗೂ ಸಾವಿರಾರು ಸಂಖ್ಯೆಯ ವಾಹನಗಳ ಟ್ರಾಫಿಕ್ ದಟ್ಟಣೆ ಹೆಚ್ಚಾಗಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಟೌನ್ ಠಾಣೆಯ ಪೊಲೀಸರು ದಟ್ಟಣೆ ನಿವಾರಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವಲ್ಲಿ ನಿರಂತರವಾಗಿ ಶ್ರಮಿಸಿ ಹೈರಾಣಾದರು. ಅಗ್ನಿಶಾಮಕ ಸಿಬ್ಬಂದಿ ಮುಂಜಾಗ್ರತವಾಗಿ ನದಿ ತೀರಗಳಲ್ಲಿ ಎಚ್ಚರವಹಿಸಿದ್ದರು.