

ಮದ್ದೂರು: ವಿದ್ಯಾರ್ಥಿಗಳು ಪದವಿ ಪಡೆದ ಆನಂದದ ಕಣ್ಣುಗಳಲ್ಲಿ ಪಾಲಕರ ತ್ಯಾಗ ಮತ್ತು ಶಿಕ್ಷಕರ ನಿಸ್ವಾರ್ಥ ಸೇವೆ ಇದೆ ಎಂಬುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಎಂದು ಪಿಇಎಸ್ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಸಾಹಿತಿ ಜಿ.ಟಿ.ವೀರಪ್ಪ ಹೇಳಿದರು.
ನಗರದ ಎಂ.ಎಚ್.ಚೆನ್ನೇಗೌಡ ವಿದ್ಯಾಸಂಸ್ಥೆಯ ಎಚ್.ಕೆ.ವೀರಣ್ಣಗೌಡ ಪದವಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪದವಿ ಪಡೆಯುವವರೆಗೂ ವಿದ್ಯಾರ್ಥಿಗಳು ಶಾಲಾ-ಕಾಲೇಜು ಎಂಬ ಸುರಕ್ಷಿತ ವಾತಾವರಣದಲ್ಲಿ, ಶಿಕ್ಷಕರ ಮಾರ್ಗದರ್ಶನದಲ್ಲಿ ಇರುತ್ತೀರಿ. ಆದರೆ ಹೊರಗಿನ ಪ್ರಪಂಚ ಸ್ಪರ್ಧೆ ಮತ್ತು ಸವಾಲುಗಳಿಂದ ಕೂಡಿದ್ದು ಅದನ್ನು ಎದುರಿಸುವ ಶಕ್ತಿ ಮತ್ತು ಸಾಮರ್ಥ್ಯವನ್ನು ಶಿಕ್ಷಣವು ನೀಡಿದೆ. ನಿಮ್ಮ ಸಾಧನೆಗಳ ಮೂಲಕ ಪಾಲಕರಿಗೆ, ಶಿಕ್ಷಕರಿಗೆ, ವಿದ್ಯಾ ಸಂಸ್ಥೆಗೆ, ದೇಶಕ್ಕೆ ಕೀರ್ತಿ ತರಬೇಕೆಂದು ಮನವಿ ಮಾಡಿದರು.
ವಿದ್ಯಾರ್ಥಿಗಳಿಗೆ ಕಲಿಕೆ ಎಂಬುವುದು ನಿರಂತರವಾಗಿದೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಹೊಸ ಕೌಶಲಗಳನ್ನು ಕಲಿಯುವ ಮೂಲಕ ಸಾಮರ್ಥ್ಯದ ಮೇಲೆ ಏನಾದರೂ ಸಾಧಿಸಿ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಶಾಂತಿ ಹಾಗೂ ನೆಮ್ಮದಿಯ ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಜೀವನದಲ್ಲಿ ಯಶಸ್ಸು ಸುಲಭವಾಗಿ ದೊರೆಯುವುದಿಲ್ಲ. ಸ್ವಾಮಿ ವಿವೇಕಾನಂದರ ಆಶಯದಂತೆ ವಿದ್ಯಾರ್ಥಿಗಳು ನಿರಂತರ ಪರಿಶ್ರಮ ಹಾಗೂ ಪ್ರಯತ್ನದಿಂದ ಪಡೆಯಬೇಕು ಎಂದ ಅವರು ವಿನಯ, ಪ್ರಾಮಾಣಿಕತೆ ಮತ್ತು ಸಮಾಜದ ಬಗೆಗಿನ ಕಾಳಜಿಯನ್ನು ಎಂದಿಗೂ ಕಳೆದುಕೊಳ್ಳದೆ ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕೆಂದು ಸಲಹೆ ನೀಡಿದರು.
ಎಂ.ಎಚ್.ಚನ್ನೇಗೌಡ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ಸ್ವರೂಪ್ ಚಂದ್, ಕಾರ್ಯದರ್ಶಿ ಸಿ.ಅಪೂರ್ವಚಂದ್ರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಕೆ.ಎಸ್.ಸುನಿಲ್ ಕುಮಾರ್, ಪ್ರಾಂಶುಪಾಲರಾದ ಡಾ.ಎಸ್.ಪಿ.ಕಿರಣ್, ಯು.ಎಸ್.ಶಿವಕುಮಾರ್, ಸಹಾಯಕ ಪ್ರಾಧ್ಯಾಪಕರಾದ ಸಂದೀಪ್, ಗಂಗಾಧರ್, ರಾಜೇಶ್, ಹರ್ಷ, ಲಕ್ಷ್ಮೀ, ರೇಖಾ, ಪುಟ್ಟಮ್ಮ, ಮೈತ್ರಿ, ವಿನುತಾ, ಅಭಿಲಾಶ, ಗ್ರಂಥಪಾಲಕ ಚಂದನ್, ದೈಹಿಕ ನಿರ್ದೇಶಕ ಪ್ರದೀಪ್ ಕುಮಾರ್ ಇದ್ದರು.