

ಮದ್ದೂರು: ನಗರಸಭೆ ವ್ಯಾಪ್ತಿಯ ಮನೆ ಮನೆಗಳಲ್ಲಿ ಸಂಗ್ರಹಿಸಿದ ಹಸಿ ತ್ಯಾಜ್ಯದಿಂದ ತಯಾರಿಸಿದ ಸಾವಯವ ಗೊಬ್ಬರವನ್ನು ಅತಿ ಕಡಿಮೆ ಬೆಲೆಯಲ್ಲಿ ನಗರಸಭೆ ವತಿಯಿಂದ ವಿತರಣೆ ಮಾಡುತ್ತಿದ್ದು, ರೈತರು ಸದುಪಯೋಗಕ್ಕೆ ಮುಂದಾಗಬೇಕು ಎಂದು ಶಾಸಕ ಕೆ.ಎಂ.ಉದಯ್ ಸಲಹೆ ನೀಡಿದರು.
ತಾಲೂಕಿನ ಆತಗೂರು ಹೋಬಳಿ ವ್ಯಾಪ್ತಿಯ ಹೂತಗೆರೆ-ಅವರಸದಹಳ್ಳಿ ಗ್ರಾಮದ ಘನತ್ಯಾಜ ವಿಲೇವಾರಿ ಘಟಕಕ್ಕೆ ಶನಿವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸಾವಯವ ಗೋಲ್ಡನ್ ಗೊಬ್ಬರ ವಿತರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಗರ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ಮಾಡಿ ಸಾವಯವ ಗೊಬ್ಬರ ತಯಾರಿಸಿ ಕೆ.ಜಿ ಗೆ 2 ರೂ.ಗಳಂತೆ 25 ಕೆ.ಜಿ ಬ್ಯಾಗ್‌ಗೆ 50 ರೂ. ನಿಗದಿ ಪಡಿಸಲಾಗಿದೆ. ನಗರಸಭೆಯಿಂದಲೇ ರೈತರಿಗೆ ಮಾರಾಟ ಮಾಡಲಾಗುತ್ತಿದ್ದು, ಗುಣಮಟ್ಟದ ಗೊಬ್ಬರ ಖರೀದಿಸಿ ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಳ್ಳಬೇಕು ಎಂದರು.
ಮಲ್ಲನಕುಪ್ಪೆ, ಹೂತಗೆರೆ, ಕೆಸ್ತೂರು ಇತರ ಗ್ರಾಪಂ ವ್ಯಾಪ್ತಿಯ ರೈತರು ಸದುಪಯೋಗ ಪಡಿಸಿಕೊಳ್ಳುವಂತೆ ಮತ್ತು ಸ್ಥಳೀಯ ರೈತರು ಗುಣಮಟ್ಟದ ಗೊಬ್ಬರವನ್ನು ಹೊಲ-ಗದ್ದೆ, ಜಮೀನುಗಳಿಗೆ ಹಾಕಿದರೆ ಬೆಳೆಗಳಿಗೆ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗಲಿದೆ ಮತ್ತು ಭೂಮಿಯ ಫಲವತ್ತತೆಯು ಹೆಚ್ಚಾಗಲಿದೆ ಎಂದರು.
ಮುಂದಿನ ದಿನಗಳಲ್ಲಿ ನಗರಸಭೆಯಿಂದ ಹಲವು ಸೌಲಭ್ಯಗಳನ್ನು ಒದಗಿಸಲಾಗುವುದು. ಜತೆಗೆ ನಗರವನ್ನು ಮಾದರಿಯನ್ನಾಗಿಸಲು ಈಗಾಗಲೇ ಕೋಟ್ಯಂತರ ರೂ.ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ಪ್ರಗತಿ ಹಂತದಲ್ಲಿದೆ. ಯುಜಿಡಿ ಸಂಪರ್ಕ, ಕುಡಿಯುವ ನೀರು, ಬೀದಿ ದೀಪ, ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಅಂತಿಮ ಹಂತದಲ್ಲಿವೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಸಿ.ಟಿ.ಶಂಕರ್, ನಗರಸಭೆ ಪೌರಾಯುಕ್ತೆ ರಾಧಿಕಾ, ಪರಿಸರ ಇಂಜಿನಿಯರ್ ಅರ್ಚನಾ, ಪುಟ್ಟಸ್ವಾಮಿ, ಟಿಎಪಿಸಿಎಂಎಸ್ ನಿರ್ದೇಶಕ ಶಂಕರಲಿಂಗಯ್ಯ ಹಾಗೂ ಸ್ಥಳೀಯ ಮುಖಂಡರು ಇದ್ದರು.