ಕೆ.ಆರ್.ಸಾಗರ ಅಣೆಕಟ್ಟೆಗೆ ಬರ ಅಧ್ಯಯನ ತಂಡ ಭೇಟಿ

ಜಲಾಶಯದ ವಾಸ್ತವ ಸ್ಥಿತಿ, ನೀರಿನ ಸಂಗ್ರಹ ಮಾಹಿತಿ ಕಲೆ
ಕೆ.ಆರ್.ಸಾಗರ ಅಣೆಕಟ್ಟೆಗೆ ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯ ಡಾ. ನವೀನ್‌ಕುಮಾರ ಜೈನ್ ಮತ್ತು ತಂಡ ಗುರುವಾರ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲಿಸಿತು. ಕೆ.ರಘುರಾಮ್, ಜಯಸ್ವಾಮಿ, ವೆಂಕಟರಮಣಪ್ಪ ಇತರರಿದ್ದರು.
ಕೆ.ಆರ್.ಸಾಗರ ಅಣೆಕಟ್ಟೆಗೆ ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯ ಡಾ. ನವೀನ್‌ಕುಮಾರ ಜೈನ್ ಮತ್ತು ತಂಡ ಗುರುವಾರ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲಿಸಿತು. ಕೆ.ರಘುರಾಮ್, ಜಯಸ್ವಾಮಿ, ವೆಂಕಟರಮಣಪ್ಪ ಇತರರಿದ್ದರು.
Published on: 

ಕೆ.ಆರ್.ಸಾಗರ: ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯ ಡಾ. ನವೀನ್‌ಕುಮಾರ ಜೈನ್ ಗುರುವಾರ ಬೆಳಗ್ಗೆ ಕೆ.ಆರ್.ಸಾಗರ ಅಣೆಕಟ್ಟೆಗೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಶೀಲನೆ ನಡೆಸಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಂದ ಮಾಹಿತಿ ಪಡೆದು ಚರ್ಚಿಸಿದರು.

ಬುಧವಾರ ಕಬಿನಿ ಅಣೆಕಟ್ಟೆ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿದ ಡಾ. ನವೀನ್‌ಕುಮಾರ್ ಮತ್ತು ತಂಡ ಗುರುವಾರ ಬೆಳಗ್ಗೆ ಕೆ.ಆರ್.ಸಾಗರ ಅಣೆಕಟ್ಟೆ ಹಾಗೂ ಮಂಡ್ಯ ಜಿಲ್ಲೆ ಕಾವೇರಿ ನೀರು ಬಳಕೆ ಮಾಡುವ ಜಮೀನು ಪ್ರಾಂತ್ಯದ ವಿವಿಧೆಡೆ ಭೇಟಿ ನೀಡಿ, ಪರಿಶೀಲಿಸಿದರು.

ಕಾವೇರಿ ನೀರಾವರಿ ನಿಗಮದ ಮಂಡ್ಯ ವೃತ್ತದ ಸೂಪರಿಂಟೆಂಡೆಂಟ್ ಇಂಜಿನಿಯರ್ ಕೆ.ರಘುರಾಮ್ ಅವರು ಕೆ.ಆರ್.ಸಾಗರ ಅಣೆಕಟ್ಟೆ ವಾಸ್ತವ ಸ್ಥಿತಿಗತಿ, ನೀರಿನ ಸಂಗ್ರಹ, ಒಳಹರಿವಿನ ಪ್ರಮಾಣ ಬಳಕೆ, ಹಿಂದಿನ ವರ್ಷಗಳ ನೀರಿನ ಸಂಗ್ರಹದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ನಂತರ ಮಂಡ್ಯ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ ಜತೆಗೂಡಿ ಬೆಳಗೊಳ ಮತ್ತು ಪಾಲಹಳ್ಳಿ ಬಳಿ ಜಮೀನುಗಳಿಗೆ ತೆರಳಿ ರೈತರು ಬೆಳೆದಿರುವ ಭತ್ತದ ಫಸಲನ್ನು ಪರಿಶೀಲನೆ ನಡೆಸಿದರು. ನಂತರ ಮದ್ದೂರು ತಾಲೂಕಿನ ಕೊನೆ ಭಾಗಕ್ಕೆ ತೆರಳಿ ಅಲ್ಲಿ ಬರಡಾಗಿರುವ ಜಮೀನುಗಳನ್ನು ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ರೈತರು ನಮಗೆ ನೀರು ಕಡಿಮೆ ಪ್ರಮಾಣದಲ್ಲಿ ಸಿಕ್ಕಿದ್ದು ಒಂದು ತಿಂಗಳ ನಂತರ ನಾಟಿ ಮಾಡಿದ್ದೇವೆ. ನಾವೆಲ್ಲ ಪಶು ಸಂಗೋಪನೆ ಅವಲಂಬಿಸಿದ್ದು ನಮಗೆ ಭತ್ತ, ರಾಗಿ ಸಿಗದೆ ಇದ್ದರೂ ಇದನ್ನು ಮೇವಿಗಾಗಿ ಬಳಸುತ್ತೇವೆ ಎಂದರು.

ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಯಸ್ವಾಮಿ ಮಾತನಾಡಿ, ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗಿ ನಾಲೆಗಳಿಗೆ ನೀರು ಬಿಡುಗಡೆ ಕಡಿಮೆಯಾಗಿದೆ. ಕೆರೆ-ಕಟ್ಟೆಗಳು, ಕುಡಿಯುವ ನೀರು ಮತ್ತು ರೈತರು ಅರೆ ಖುಷ್ಕಿ ಬೆಳೆ ಬೆಳೆಯುವಂತೆ ತಿಳಿಸಲಾಗಿದ್ದು, ಈ ಬಾರಿ ಶೇ.50ಕ್ಕಿಂತ ಕಡಿಮೆ ನೀರು ಸಿಗಲಿದೆ. ಈ ಭಾಗಗಳಲ್ಲಿ ಶೇ.80 ರೈತರು ಎರಡು ಎಕರೆಗಿಂತ ಜಮೀನು ಉಳ್ಳವರಾಗಿದ್ದು, ಒಂದು ತಿಂಗಳು ತಡವಾಗಿ ನಾಟಿ ಮಾಡಿದ್ದಾರೆ. ಇವರೆಲ್ಲ ಹೆಚ್ಚಾಗಿ ಪಶುಸಂಗೊಪನೆ ಜತೆಗೆ ಭತ್ತ ಮತ್ತು ರಾಗಿ ಬೆಳೆಯುತ್ತಿದ್ದು, ನೀರಿನ ಕೊರತೆ ನಡುವೆ ಭತ್ತ ಮತ್ತು ರಾಗಿ ಫಸಲು ಸಿಗದೆ ಇದ್ದರೂ ಇದನ್ನು ಮೇವಾಗಿ ಉಪಯೋಗ ಮಾಡಲು ಸಿದ್ಧರಾಗಿದ್ದಾರೆ ಎಂದು ಬರ ಸಮಿತಿ ಸದಸ್ಯ ಡಾ. ನವೀನ್‌ಕುಮಾರ್ ಜೈನ್ ಅವರಿಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ. ನವೀನ್‌ಕುಮಾರ್ ಜೈನ್, ರೈತರಿಗೆ ಕಡಿಮೆ ನೀರು ಬಳಸಿ ಫಸಲು ಹೆಚ್ಚಿಸಲು ನೇರ ನಾಟಿ ವಿಧಾನ ಅಳವಡಿಸಿಕೊಳ್ಳುವಂತೆ ತಿಳಿಸಿದರು. ಇದರಿಂದ ನೀಡು ಕಡಿಮೆ ಬಳಕೆಯಾಗಿ, ಇತರ ರೈತರಿಗೆ ಉಪಯೋಗ ಹೆಚ್ಚುತ್ತದೆ ಎಂದರು.

ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ, ಪಾಲಹಳ್ಳಿ, ಮದ್ದೂರು ತಾಲೂಕಿನ ಯಮ್ಮನಹಳ್ಳಿ, ಯರಗನಹಳ್ಳಿ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಕೆ.ಆರ್.ಸಾಗರ ಕಾ.ನೀ.ನಿಗಮದ ಕಾರ್ಯಪಾಲಕ ಇಂಜಿನಿಯರ್ ವೆಂಕಟರವಣಪ್ಪ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net