

ಕೆ.ಆರ್.ಸಾಗರ: ಮೈಸೂರು ದಸರಾ ಹಬ್ಬದ ಪ್ರಯುಕ್ತ ಕಳೆದ ವರ್ಷದಂತೆ ಈ ಬಾರಿಯೂ ವಿಶ್ವವಿಖ್ಯಾತ ಬೃಂದಾವನದಲ್ಲಿ ಕಾವೇರಿ ಆರತಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿಶೇಷ ದೀಪಾಲಂಕಾರ ಕಾರ್ಯಕ್ರಮ ನಡೆಯುವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ ಬಂಡಿಸಿದ್ದೇಗೌಡ ನೇತೃತ್ವದಲ್ಲಿ ಮಂಗಳವಾರ ಸಂಜೆ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.
ಅ.11ರಿಂದ 6 ದಿನ ನಡೆಯುವ ಕೆ.ಆರ್.ಸಾಗರದ ಬೃಂದಾವನದಲ್ಲಿನ ದೋಣಿ ವಿಹಾರ ಕೇಂದ್ರದಲ್ಲಿ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡುವ ಹಿನ್ನೆಲೆಯಲ್ಲಿ ಕಳೆದ ಬಾರಿ ನಡೆದಿದ್ದ ಸ್ಥಳವನ್ನು ಶಾಸಕರು ಹಾಗೂ ಅಧಿಕಾರಿಗಳು ಪರಿಶೀಲಿಸಿ, ಚರ್ಚಿಸಿದರು.
ಅತಿಥಗಳು ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯಕ್ರಮ ನಡೆಸಬೇಕು ಎಂಬುದಾಗಿ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ನಂತರ ಕಾವೇರಿ ಸಭಾಂಗಣದಲ್ಲಿ ಸಭೆ ನಡೆಸಿ, ಶೀಘ್ರವೇ ಕಾರ್ಯಕ್ರಮದ ರೂಪರೇಷೆ ಅಂತಿಮಗೊಳಿಸಲು ತೀರ್ಮಾನಿಸಲಾಯಿತು.’
ಕಳೆದ ಬಾರಿ ಕಾರ್ಯಕ್ರಮ ನಡೆಸಿದ್ದ ಕೆಪಿಟಿಸಿಎಲ್ ಎಂಡಿ ರಾಮಪ್ರಸಾದ್ ಮನೋಹರ್, ಕಾವೇರಿ ನೀರಾವರಿ ನಿಗಮ ಎಂ.ಡಿ ಮಹೇಶ್, ಮಂಡ್ಯ ಜಿಲ್ಲಾಧಿಕಾರಿ ಕುಮಾರ, ಜಿಪಂ ಸಿಇಒ ನಂದಿನಿ, ಕಾ.ನೀ. ನಿಗಮದ ಅಧಿಕಾರಿಗಳು, ಡಿವೈಎಸ್‌ಪಿ ಕೃಷ್ಣಕುಮಾರ್ ಇದ್ದರು.