ಶ್ರೀಮಠದಿಂದ ಕಲೆ, ಸಂಸ್ಕೃತಿ ರಕ್ಷಣೆ

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿಮತ
ನಾಗಮಂಗಲ
ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ 47ನೇ ಜಾನಪದ ಕಲಾಮೇಳ ಹಾಗೂ ಚುಂಚಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಗಣ್ಯರು ಚುಂಚಶ್ರೀ ಪುಸ್ತಕ ಅನಾವರಣಗೊಳಿಸಿದರು.
Published on: 

ನಾಗಮಂಗಲ: ಜಾನಪದ ಕಲೆ ನಶಿಸಿಸುತ್ತಿರುವುದನ್ನು ಮನಗಂಡು ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು 47 ವರ್ಷಗಳ ಹಿಂದೆ ರಾಜ್ಯಮಟ್ಟದ ಜಾನಪದ ಕಲಾಮೇಳ ಆರಂಭಿಸಿದರು. ಅಂದಿನಿಂದ ಗ್ರಾಮೀಣ ಸೊಗಡಿನ ಕಲಾವಿದರನ್ನು ಪ್ರೋತ್ಸಾಹಿಸುವ ಜತೆಗೆ ಗೌರವಿಸುವ ಕೆಲಸ ಮುಂದುವರಿದುಕೊಂಡು ಬಂದಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ತಾಲೂಕಿನ ಆದಿಚುಂಚನಗಿರಿ ಮಠದ ಬಿಜಿಎಸ್ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯಮಟ್ಟದ 47ನೇ ಜಾನಪದ ಕಲಾಮೇಳ ಹಾಗೂ ಚುಂಚಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಧುನಿಕತೆ ನಡುವೆಯೂ ಜಾನಪದ ಕಲೆಗೂ ಒಂದು ನೆಲೆಗಟ್ಟು ಹಾಗೂ ಸ್ಥಾನಮಾನವನ್ನು ಶ್ರೀ ಆದಿಚುಂಚನಗಿರಿ ಮಠ ನೀಡುತ್ತಾ ಬಂದಿದೆ. ಮುಂದಿನ ತಲೆಮಾರಿಗೆ ಜಾನಪದದ ಸೊಗಡು ಪರಿಚಯಿಸುವ ಕೆಲಸ ಈ ಮೇಳದ ಮೂಲಕ ಆಗುತ್ತಿರುವುದು ಸಂತೋಷ ತಂದಿದೆ ಎಂದರು.

ಶ್ರೀಮಠ ಕೇವಲ ಧರ್ಮ, ಶಿಕ್ಷಣಕಷ್ಟೇ ಸೀಮಿತವಾಗದೆ ಜಾನಪದ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ಆದಿಚುಂಚನಗಿರಿ ಮಠ ನಮ್ಮ ನಾಡಿನ ಸಂಸ್ಕೃತಿ, ಕಲೆಯನ್ನು ರಕ್ಷಿಸುವ ಕಾಯಕ ಮಾಡುತ್ತಿದೆ ಎಂದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಎಲ್ಲ ಕಲಾ ಪ್ರಕಾರಗಳಿಗೂ ಜಾನಪದವೇ ಮೂಲಬೇರು. ಇದರ ಮಹತ್ವವನ್ನು ಯುವಜನರು ಅರಿಯಬೇಕಿದೆ. ಮನಸ್ಸುಗಳನ್ನು ಕೂಡಿಸುವ ಶಕ್ತಿ ಜಾನಪದ ಕಲೆಗಿದೆ ಎಂದು ಹೇಳಿದರು.

ಎಐ ಯುಗದಲ್ಲಿ ಜನಪದ ಕಲೆ ಉಳಿಸುವುದು ಬಹುಮುಖ್ಯವಾಗಿದೆ. ಜಾನಪದದ ಪ್ರಾಮುಖ್ಯತೆ ಮುಂದಿನ ಹಲವು ವರ್ಷಗಳ ನಂತರ ಅರಿವಿಗೆ ಬರಲಿದೆ. ಆದರೆ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ ದೂರ ದೃಷ್ಟಿಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಜಾನಪದ ಸಾಹಿತ್ಯವನ್ನು ಪ್ರತಿಯೊಬ್ಬರು ಸಂರಕ್ಷಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಡಾ. ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಇತರೆ ಗಣ್ಯರು ಚುಂಚಶ್ರೀ ಪುಸ್ತಕ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಹಂಪಿಯ ಗಾಯತ್ರಿ ಪೀಠದ ಶ್ರೀ ದಯಾನಂದಪುರಿ ಸ್ವಾಮೀಜಿ, ಗೋಸಾಯಿ ಮಠದ ಮಂಜುನಾಥ ಭಾರತಿ ಸ್ವಾಮೀಜಿ, ಪುರುಷೋತ್ತಮನಂದನಾಥ ಸ್ವಾಮೀಜಿ, ಪ್ರಸನ್ನನಾಥ ಸ್ವಾಮೀಜಿ, ಶಂಭುನಾಥ ಸ್ವಾಮೀಜಿ, ಧರ್ಮಪಾಲನಾಥ ಸ್ವಾಮೀಜಿ, ಸೋಮನಾಥ ಸ್ವಾಮೀಜಿ, ಗುಣನಾಥ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ ಇತರರಿದ್ದರು.

ಬೆಳ್ಳಿ ರಥದಲ್ಲಿ ಮೆರವಣಿಗೆ: ಆದಿಚುಂಚನಗಿರಿ ಕ್ಷೇತ್ರದ ರಥದ ಬೀದಿಯಿಂದ ಬಿಜಿಎಸ್ ಸಭಾಂಗಣದವರೆಗೆ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಚುಂಚಶ್ರೀ ಪ್ರಶಸ್ತಿಗೆ ಭಾಜನರಾದ ಐವರು ಸಾಧಕರನ್ನು ಸರ್ವಾಲಂಕೃತ ಬೆಳ್ಳಿ ರಥದಲ್ಲಿ ಜಾನಪದ ಕಲಾತಂಡಗಳ ಕಲಾ ಪ್ರದರ್ಶನದೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು. ದಿನವಡೀ ಕಲಾವಿದರ ಕಲಾ ಪ್ರದರ್ಶನ ಪ್ರೇಕ್ಷಕರ ಕಣ್ಮನವನ್ನು ತಣಿಸಿತು.

ಮುತ್ತಿನ ಪಲ್ಲಕ್ಕಿ ಉತ್ಸವ: ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ ಹಾಗೂ ಶ್ರೀ ಗುರು ಸಂಸ್ಮರಣೋತ್ಸವದ ಅಂಗವಾಗಿ ಗುರುವಾರ ಸಂಜೆ ಆದಿಚುಂಚನಗಿರಿ ಕ್ಷೇತ್ರದ ಪ್ರಧಾನ ಜೋಡಿ ರಸ್ತೆಯಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಜಾನಪದ ಕಲಾತಂಡಗಳ ಮೆರವಣಿಗೆ ಮತ್ತು ಶ್ರೀ ಕಾಲಭೈರವೇಶ್ವರಸ್ವಾಮಿ ಪುಷ್ಕರಣಿಯಲ್ಲಿ ತೆಪ್ಪೋತ್ಸವವು ಭಕ್ತರ ಸಮ್ಮುಖದಲ್ಲಿ ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net