30ರೊಳಗೆ ಅಂಬೇಡ್ಕರ್ ಭವನ ಕಾಮಗಾರಿ ಆರಂಭ

Ambedkar Bhavan construction work to begin by the 30th.
30ರೊಳಗೆ ಅಂಬೇಡ್ಕರ್ ಭವನ ಕಾಮಗಾರಿ ಆರಂಭ
ಹೊಂಗಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ವಿಚಾರ ಸಂಬಂಧ ಶ್ರೀರಂಗಪಟ್ಟಣ ಠಾಣೆಯಲ್ಲಿ ಸಭೆ ಏರ್ಪಡಿಸಲಾಗಿತ್ತು. ತಾಪಂ ಕಾರ್ಯನಿರ್ವಹಣಾಧಿಕಾರಿ ಚಂದ್ರು, ಹುಲಿಕೆರೆ ಆಡಳಿತಾಧಿಕಾರಿ ಪ್ರದೀಪ್, ಪಿಡಿಒ ಶ್ರೀನಿವಾಸ್ ಹಾಗೂ ದಲಿತ ಮುಖಂಡರು ಇದ್ದರು.
Published on: 

ಕೆ.ಆರ್.ಸಾಗರ: ಹೊಂಗಳ್ಳಿ ಗ್ರಾಮದಲ್ಲಿ ಅ.30ರೊಳಗೆ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಆರಂಭಿಸುವುದಾಗಿ ಹುಲಿಕೆರೆ ಪಿಡಿಒ ಶ್ರೀನಿವಾಸ್ ಭರವಸೆ ನೀಡಿದರು.

ಕೆ.ಆರ್.ಸಾಗರ ಠಾಣೆಯಲ್ಲಿ ಸೋಮವಾರ ಪಿಎಸ್‌ಐ ಜಗದೀಶ್ ಧೂಳ್‌ಶೆಟ್ಟರ್ ಸಮ್ಮುಖದಲ್ಲಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಚಂದ್ರು, ಹುಲಿಕೆರೆ ಗ್ರಾಪಂ ಆಡಳಿತಾಧಿಕಾರಿ ಪ್ರದೀಪ್ ಸಭೆ ಸಮ್ಮುಖದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು.ಸರ್ಕಾರದ ಶಿಷ್ಟಾಚಾರ ಪಾಲನೆ ಮಾಡಬೇಕಾಗಿದ್ದು, ಅಂಬೇಡ್ಕರ್ ಭವನ ನಿರ್ಮಾಣಕ್ಕೆ 10 ಲಕ್ಷ ರೂ.ಮೀಸಲಿರಿಸಲಾಗಿದೆ. ಕ್ಷೇತ್ರದ ಶಾಸಕರ ಉಪಸ್ಥಿತಿಯ ದಿನಾಂಕ ಪಡೆದು ಅ.30ರೊಳಗೆ ಭೂಮಿಪೂಜೆ ಮಾಡಿಸಿ ಕಾಮಗಾರಿ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು.

ಹೊಂಗಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಯತ್ನಿಸಿದಾಗ ಪಿಡಿಒ ತಡೆದು ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ಗ್ರಾಪಂ ಮಾಜಿ ಸದಸ್ಯರ ವಿರುದ್ಧ ದೂರು ದಾಖಲಿಸಿದ್ದರು. ನಂತರ ಶ್ರೀರಂಗಪಟ್ಟಣ ತಾಲೂಕು ದಲಿತಪರ ಮುಖಂಡರು ಕೆ.ಆರ್.ಸಾಗರ ಠಾಣೆಗೆ ತೆರಳಿ ದಲಿತರಿಗೆ ಅನ್ಯಾಯ ಮಾಡುತ್ತಿರುವ ಹುಲಿಕೆರೆ ಪಿಡಿಒ ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದ್ದರು.

ಸಭೆಯಲ್ಲಿ ದಲಿತ ಮುಖಂಡ ಮಹದೇವಸ್ವಾಮಿ ಮಾತನಾಡಿ, ಅಂಬೇಡ್ಕರ್ ಭವನ ದುಸ್ಥಿತಿಯಲ್ಲಿದೆ ಎಂದು ಅಂದು ಪಿಡಿಒ ಶ್ರೀನಿವಾಸ್ ಅವರು ಭವನ ಕೆಡವಿ ಗ್ರಾಪಂ ಸದಸ್ಯರ ಸಮ್ಮುಖದಲ್ಲಿ ಹೊಸ ಭವನ ನಿರ್ಮಾಣ ಮಾಡುವ ಭರವಸೆ ನೀಡಿದ್ದರು. ನಂತರ ನಿರ್ಲಕ್ಷ ಮಾಡಿದ ಕಾರಣ ಅಂದಿನ ಸದಸ್ಯರು ದಲಿತ ಮುಖಂಡರ ಸಮ್ಮುಖದಲ್ಲಿ ಹಿರಿಯರಿಂದ ಭೂಮಿಪೂಜೆ ಮಾಡಿಸಿದ್ದರು. ಇದು ಶಿಷ್ಟಾಚಾರ ಉಲ್ಲಂಘನೆ ಎಂದು 9 ತಿಂಗಳು ಕಳೆದರೂ ಅನುದಾನ ಇದ್ದರೂ ನೀಡದೆ ನಿರ್ಲಕ್ಷ ಮಾಡಿದ್ದರು. ನಾವೇ ಅಂಬೇಡ್ಕರ್ ಭವನ ನಿರ್ಮಿಸಲು ಯತ್ನಿಸಿದ್ದಾಗ ನಮಗೆ ಪ್ರಚೋದನೆ ನೀಡಿದ್ದಾರೆಂದು ಗ್ರಾಪಂ ಮಾಜಿ ಸದಸ್ಯ ಬಂಗಾರಪ್ಪ ವಿರುದ್ಧ ರಾತ್ರೋರಾತ್ರಿ ದೂರು ದಾಖಲು ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ತಾಪಂ ಮಾಜಿ ಸದಸ್ಯ ಪುಟ್ಟಸ್ವಾಮಿ, ಶೆಟ್ಟಹಳ್ಳಿ ಸುರೇಶ್, ಕೆ.ಆರ್.ಸಾಗರ ಗ್ರಾಪಂ ಮಾಜಿ ಅಧ್ಯಕ್ಷ ನಾಗೇಂದ್ರ ಕುಮಾರ್, ಮುಖಂಡ ನರಸಿಂಹ, ಹೊಂಗಳ್ಳಿ ಕಾರ್ತಿಕ್, ಮರುಳಗಾಲ ಸುರೇಶ್, ಶ್ರೀಧರ್, ಧನಂಜಯ, ಹೊಂಗಳ್ಳಿ ಗ್ರಾಮದ ದಲಿತ ಮುಖಂಡರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net