ಜಿಲ್ಲೆಯಲ್ಲಿ ವೆಂಕಟೇಶ್ವರನ ಸ್ಮರಣೆ

06_01_Mdy_Vykunta Ekadashi 3
Published on

ಮಂಡ್ಯ: ಜಿಲ್ಲಾದ್ಯಂತ ಸೋಮವಾರ ವೆಂಕಟೇಶ್ವರ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಹೋಮ, ಹವನ ಆಯೋಜಿಸಲಾಗಿತ್ತು. ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥನೆ ಸಲ್ಲಿಸಿದರು. ಕೆಲ ದೇವಸ್ಥಾನದಲ್ಲಿ ವೈಕುಂಠ ದ್ವಾರದಲ್ಲಿ ಭಕ್ತರು ಪ್ರವೇಶಿಸಲು ಅವಕಾಶ ಕಲ್ಪಿಸಲಾಯಿತು. ಸಹಸ್ರಾರು ಭಕ್ತರು ವೈಕುಂಠ ದ್ವಾರ ಪ್ರವೇಶಿಸಿ ಧನ್ಯತಾಭಾವ ಮೆರೆದರು.
ಮಂಡ್ಯ ನಗರದ ಶ್ರೀ ಲಕ್ಷ್ಮೀ ಜನಾರ್ದನಸ್ವಾಮಿ, ಶ್ರೀನಿವಾಸಸ್ವಾಮಿ, ಹನಿಯಂಬಾಡಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ, ಶ್ರೀ ಶ್ರೀನಿವಾಸ ದೇವಸ್ಥಾನ, ಬೋವಿ ಕಾಲನಿಯಲ್ಲಿರುವ ಶ್ರೀ ವೆಂಕಟೇಶ್ವರ, ಮೈಸೂರು ಬೆಂಗಳೂರು ರಸ್ತೆಯಲ್ಲಿರುವ ಶ್ರೀ ಪಾಂಡುರಂಗಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು. ತಾಲೂಕಿನ ಸಾತನೂರು ಶ್ರೀ ಕಂಬದ ನರಸಿಂಹಸ್ವಾಮಿ, ಕಿರಗಂದೂರು ಶ್ರೀ ವೆಂಕಟೇಶ್ವರ ದೇವಸ್ಥಾನ ಸೇರಿದಂತೆ ತಾಲೂಕಿನ ವಿವಿಧ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ನೆರವೇರಿದವು.
ಎಲ್ಲ ದೇವಸ್ಥಾನದಲ್ಲಿಯೂ ಭಕ್ತರಿಗೆ ಲಾಡು, ಸಿಹಿ ಪೊಂಗಲ್, ಸಕ್ಕರೆ ಹರಳು ಹಾಗೂ ಇತರ ಸಿಹಿ ಪದಾರ್ಥವನ್ನು ಪ್ರಸಾದವಾಗಿ ವಿತರಿಸಲಾಯಿತು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net