

ಉಳ್ಳಾಲ: ಮಂಚಿ-ಕೊಳ್ನಾಡು ಸರ್ಕಾರಿ ಪ್ರೌಢಶಾಲೆ ಹಿರಿಯ ವಿದ್ಯಾರ್ಥಿಗಳ ಸಂಘ, ಲಯನ್ಸ್ ಕ್ಲಬ್ ಕೊಳ್ನಾಡು, ಸಾಲೆತ್ತೂರು ಹಾಗೂ ಜೆಸಿಐ ಜೋಡುಮಾರ್ಗ ನೇತ್ರಾವತಿ ಸಹಯೋಗದಲ್ಲಿ ಮಂಚಿ ಪ್ರೌಢಶಾಲೆ ಸಭಾಂಗಣದಲ್ಲಿ ಒಂದು ದಿನದ ಸಭಾ ಕೌಶಲ ತರಬೇತಿ ಕಾರ್ಯಾಗಾರ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ಸಮಾರಂಭ ಭಾನುವಾರ ನಡೆಯಿತು.
ಹಿರಿಯ ವಿದ್ಯಾರ್ಥಿನಿ ಹಾಗೂ ಉಪನ್ಯಾಸಕಿ ಡಾ.ನಾಗವೇಣಿ ಮಂಚಿ ಉದ್ಘಾಟಿಸಿದರು. ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರಾಮ್ ಪ್ರಸಾದ್ ರೈ ತಿರುವಾಜೆ ಅಧ್ಯಕ್ಷತೆ ವಹಿಸಿದ್ದರು. ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಹಿರಿಯ ವಿದ್ಯಾರ್ಥಿಗಳಾದ ಗಣೇಶ್ ಕಾಮತ್ ಪುಚ್ಚೆಕೆರೆ ಮತ್ತು ದಿನೇಶ್ ಎಸ್.ಇರಾ ಅವರನ್ನು ಸನ್ಮಾನಿಸಲಾಯಿತು. ಹಿರಿಯ ವಿದ್ಯಾರ್ಥಿ, ಮಂಗಳೂರಿನ ಖಾಸಗಿ ಕಂಪನಿ ಜನರಲ್ ಮ್ಯಾನೇಜರ್ ಶೇಖ್ ಮೊಯ್ದೀನ್ ಕೆ.ಎಂ., ಲಯನ್ಸ್ ಕ್ಲಬ್ ಎಂಪವರ್ ಯೂತ್ ಜಿಲ್ಲಾ ಸಹ ಸಂಯೋಜಕಿ ಡಾ.ಸ್ನೇಹಾ ಎಂ., ಮಂಚಿ ಕೊಳ್ನಾಡು ಪ್ರೌಢಶಾಲೆ ಮುಖ್ಯ ಶಿಕ್ಷಕಿ ಸುಶೀಲಾ ವಿಟ್ಲ, ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರವೀಣ್ ಕೊಟ್ಟಾರಿ ಅತಿಥಿಗಳಾಗಿದ್ದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಜೆಸಿಐ ರಾಷ್ಟ್ರೀಯ ತರಬೇತುದಾರ ಡಾ.ರಾಘವೇಂದ್ರ ಹೊಳ್ಳ ಎನ್ ಭಾಗವಹಿಸಿದ್ದರು. 60 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭ ಹಿರಿಯ ವಿದ್ಯಾರ್ಥಿಗಳ ಸಂಘದ ಲಾಂಛನ ಬಿಡುಗಡೆಗೊಳಿಸಲಾಯಿತು. ಜೆಸಿಐ ಜೋಡುಮಾರ್ಗ ನೇತ್ರಾವತಿ ಅಧ್ಯಕ್ಷ ಹರಿಪ್ರಸಾದ್ ಕುಲಾಲ್ ಅತಿಥಿಗಳನ್ನು ಪರಿಚಯಿಸಿದರು. ಕೊಳ್ನಾಡು ಸಾಲೆತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷ ಜಯಪ್ರಕಾಶ್ ರೈ ಮೇರಾವು ವಂದಿಸಿದರು. ಯಕ್ಷಗಾನ ಕಲಾವಿದ ಪುಷ್ಪರಾಜ್ ನಿರೂಪಿಸಿದರು.