

ವಿಜಯಪುರ: ಶ್ರದ್ಧೆ ಮತ್ತು ನಂಬಿಕೆಯಿಂದ ಏನನ್ನಾದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟ ದಿಟ್ಟ ಮಹಿಳೆ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಇಡೀ ಮನುಕುಲಕ್ಕೆ ಅದರಲ್ಲೂ ವಿಶೇಷವಾಗಿ ಸ್ತ್ರೀ ಕುಲಕ್ಕೆ ಮಾದರಿ ಎಂದು ಲಚ್ಯಾಣದ ಎಸ್‌ಎಸ್‌ಟಿಟಿಐ ಕಾಲೇಜಿನ ಪ್ರಾಚಾರ್ಯ ಪ್ರೊ. ಶಿವಲಿಂಗ ಶೆಟ್ಟೆನ್ನವರ ಹೇಳಿದರು.
ನಗರದ ಕಸಾಪ ಸಭಾಂಗಣದಲ್ಲಿ ಜಿಲ್ಲೆ, ತಾಲೂಕು ಹಾಗೂ ಕಸಾಪ ನಗರ ಘಟಕಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕುರಿತ ಚಿಂತನಾ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಮಲ್ಲಮ್ಮ ತನ್ನ ಕುಟುಂಬದ ಎಲ್ಲ ನೋವುಗಳನ್ನು ಸಹಿಸಿಕೊಂಡು ತನ್ನಲ್ಲಿರುವ ದೈವಿಭಕ್ತಿ, ಅಪಾರ ತಾಳ್ಮೆಯಿಂದ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ಭಕ್ತಿ ಮತ್ತು ನಂಬಿಕೆ ಮೂಲಕ ಏನನ್ನಾದರೂ ಸಾಧಿಸಬಹುದು ಎಂದು ತೋರಿಸಿದರು. ಮಲ್ಲಮ್ಮಳ ಆದರ್ಶಗಳು ನಮಗೆಲ್ಲ ಮಾದರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಹಕಾರಿ ರಂಗದ ಧುರೀಣ ರಮೇಶ ಬಿದನೂರ ಮಾತನಾಡಿ, ಮಲ್ಲಮ್ಮ ಅವರ ವ್ಯಕ್ತಿತ್ವ ಭಾರತೀಯ ಮಹಿಳೆಯರಿಗೆ ಆದರ್ಶವಾಗಿ ನಿಲ್ಲುತ್ತದೆ. ಮೈದುನ ವೇಮನನ ವ್ಯಕ್ತಿತ್ವವನ್ನು ರೂಪಿಸಿ ಅವನನ್ನು ಮಹಾಯೋಗಿಯನ್ನಾಗಿ ಮಾಡಿದ ಕೀರ್ತಿ ಹೇಮರಡ್ಡಿ ಮಲ್ಲಮ್ಮಳಿಗೆ ಸಲ್ಲುತ್ತದೆ ಎಂದರು.
ಸಾಹಿತಿ ರೇವತಿ ಬೂದಿಹಾಳ ಹೇಮರಡ್ಡಿ ಮಲ್ಲಮ್ಮಳ ಕುರಿತು ವಿಶೇಷ ಉಪನ್ಯಾಸ ನೀಡಿ, ಶ್ರೀಶೈಲ ಮಲ್ಲಿಕಾರ್ಜುನ ಆರಾಧ್ಯ ಭಕ್ತಳಾಗಿದ್ದ ಮಲ್ಲಮ್ಮ ಕೌಟುಂಬಿಕ ಸಂಕಷ್ಟಗಳ ನಡುವೆ ತಾಳ್ಮೆಯಿಂದ ಆಧ್ಯಾತ್ಮಿಕ ಸಾಧನೆ ಮಾಡಿದಳು. ದೈವಭಕ್ತಿಯಿಂದಲೇ ಜನರ ಮನಸ್ಸನ್ನು ತನ್ನತ್ತ ಸೆಳೆದು ಬಾಲ್ಯದಲ್ಲಿಯೇ ಹಲವು ಪವಾಡಗಳನ್ನು ಮಾಡಿ ಶಿವಶರಣ ತತ್ವವನ್ನು ಸಾರಿದ ಮಹಾ ಶಿವಶರಣೆಯ ಆದರ್ಶ ಗುಣಗಳು, ಮಾನವೀಯ ಮೌಲ್ಯಗಳು ಇಂದಿಗೂ ಪ್ರಸ್ತುತ ಎಂದರು.
ಡಾ. ಭುವನೇಶ್ವರಿ ಮೇಲಿನಮಠ, ಬಸವರಾಜ ಕೋನರಡ್ಡಿ, ಮಹಾದೇವಿ ತೆಲಗಿ, ಶ್ರೀಕಾಂತ ಚೌಧರಿ, ದುಂಡಪ್ಪ ಬಗಲಿ, ಎಂ.ಎ. ದರ್ಗಾ ವೇದಿಕೆಯಲ್ಲಿದ್ದರು. ಡಾ. ಮಾಧವ ಎಚ್. ಗುಡಿ ಸ್ವಾಗತಿಸಿ ಗೌರವಿಸಿದರು. ಮಮತಾ ಮುಳಸಾವಳಗಿ ನಿರೂಪಿಸಿದರು. ಡಾ. ಸಂಗಮೇಶ ಮೇತ್ರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶೋಭಾ ಬಡಿಗೇರ ವಂದಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಆಶಾ ಬಿರಾದಾರ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಶಶಿಕಲಾ ಇಜೇರಿ, ಭಾಗೀರಥಿ ಸಿಂಧೆ, ಶ್ರೀಕಾಂತ ನಾಡಗೌಡ, ಆರ್.ಎಂ. ದೊಡಮನಿ, ಸಿದ್ರಾಮಪ್ಪ ಜಂಗಮಶೆಟ್ಟಿ, ಸುಖದೇವಿ ಅಲಬಾಳಮಠ, ಬಿ.ವಿ. ಪಟ್ಟಣಶೆಟ್ಟಿ, ಎಸ್.ಎಸ್. ಮಾನೆ, ಶಾಂತಾ ವಿಭೂತಿ, ಟಿ.ಪಿ. ವಾಂಗಿ, ಆರ್.ಬಿ. ದಾನಿ, ಗಂಗಮ್ಮ ರಡ್ಡಿ ಮತ್ತಿತರರಿದ್ದರು.