ಸೈನೈಡ್ ಮೋಹನ್‌ಗೆ ಜೀವಾವಧಿ

mohan
Published on

ಮಂಗಳೂರು: ಸರಣಿ ಸ್ತ್ರೀ ಹಂತಕ ಸೈನೈಡ್ ಮೋಹನ್‌ಗೆ ಕೇರಳದ ಕಾಸರಗೋಡಿನ ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕೊಳ್ತಾಜೆಪಾದೆ ಗ್ರಾಮ ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ ಮೈಸೂರಿಗೆ ಕರೆದೊಯ್ದು ಅತ್ಯಾಚಾರ ಎಸಗಿ ಬಳಿಕ ಸೈನೈಡ್ ಮಾತ್ರೆ ನೀಡಿ ಕೊಲೆ ಮಾಡಿದ 19ನೇ ಪ್ರಕರಣದಲ್ಲೂ ಜೀವಾವಧಿ ಶಿಕ್ಷೆ ಮತ್ತು 55 ಸಾವಿರ ರೂ. ದಂಡ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಆರೋಪ ಸಾಬೀತಾಗಿದೆ ಎಂಬುದಾಗಿ ೆ.11ರಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಫೆ.15ರಂದು ಶಿಕ್ಷೆಯ ಪ್ರಮಾಣದ ಬಗ್ಗೆ ವಾದ ಪ್ರತಿವಾದ ನಡೆದಿತ್ತು. ೆ.17ರಂದು ಆರೋಪಿಗೆ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶರಾದ ಸಯೀದುನ್ನಿಸಾ ಅವರು ಪ್ರಕಟಿಸಿದರು.

ಪ್ರಕರಣದ ಹಿನ್ನೆಲೆ: ಕಾಸರಗೋಡಿನ ಕೊಳ್ತಾಜೆಪಾದೆ ಗ್ರಾಮದ 23 ವರ್ಷದ ಯುವತಿ ತನ್ನ ಸಂಬಂಧಿಕರ ಮದುವೆಗೆ 2006ರಲ್ಲಿ ಹೋಗಿದ್ದಾಗ ಅಲ್ಲಿ ಮೋಹನನ ಪರಿಚಯ ಆಗಿತ್ತು. ಆತ ತನ್ನನ್ನು ಶಿಕ್ಷಕ ಹಾಗೂ ಆಕೆಯದ್ದೇ ಜಾತಿಯವನು ಎಂದು ಪರಿಚಯಿಸಿದ್ದನು. ಮದುವೆ ಬಗ್ಗೆ ಮಾತುಕತೆ ನಡೆದು ಮದುವೆಯಾಗುವುದಾಗಿ ನಂಬಿಸಿ ಒಂದು ವಾರದೊಳಗೆ ನಿರ್ಧಾರ ತಿಳಿಸುವುದಾಗಿ ಹೇಳಿದ್ದನು.

ಬಳಿಕ 2006 ಜೂನ್ 3ರಂದು ಯುವತಿ ತಾನು ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಟಿದ್ದಳು. ಆಕೆಯನ್ನು ಪುತ್ತೂರಿನಿಂದ ಬಸ್ಸಿನಲ್ಲಿ ಮೈಸೂರಿನ ಲಾಡ್ಜ್‌ಗೆ ಕರೆದೊಯ್ದು ಅಲ್ಲಿ ಒಂದು ರಾತ್ರಿ ನಿಂತು ಆಕೆ ಮೇಲೆ ಅತ್ಯಾಚಾರ ಮಾಡಿದ್ದನು. ಮರುದಿನ ಪೂಜೆಯ ನೆಪ ಹೇಳಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಕರೆದೊಯ್ದು ಗರ್ಭಪಾತದ ಮಾತ್ರೆ ಎಂದು ಹೇಳಿ ಸೈನೈಡ್ ನೀಡಿದ್ದನು. ಆಕೆ ಟಾಯ್ಲೆಟ್‌ಗೆ ಹೋಗಿ ಅದನ್ನು ಸೇವಿಸಿ ಕುಸಿದು ಬಿದ್ದು ಸಾವನ್ನಪ್ಪಿದ್ದಳು. ಲಷ್ಕರ್ ಪೊಲೀಸ್ ಠಾಣೆ ಸಿಬಂದಿ ಬಸವರಾಜ್ ಕುಸಿದು ಬಿದ್ದಿದ್ದ ಯುವತಿಯನ್ನು ಆಸ್ಪತ್ರೆಗೆ ಒಯ್ದು, ವೈದ್ಯರು ಪರಿಶೀಲಿಸಿದಾಗ ಸಾವನ್ನಪ್ಪಿರುವುದು ಗೊತ್ತಾಗಿತ್ತು. ಯುವತಿ ಮನೆ ಮಂದಿ ತಮ್ಮ ಪುತ್ರಿ ನಾಪತ್ತೆಯಾದ ಬಗ್ಗೆ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2009ರಲ್ಲಿ ಮೋಹನ್ ಬಂಧನದ ಬಳಿಕ ಈ ಯುವತಿಯ ಸಾವಿನ ಪ್ರಕರಣ ಬೆಳಕಿಗೆ ಬಂದಿತ್ತು. ಆಗ ಆಕೆ ಹೆತ್ತವರು ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಒಟ್ಟು 48 ಸಾಕ್ಷಿಗಳು ಹಾಗೂ 70 ದಾಖಲೆಗಳನ್ನು ನ್ಯಾಯಾಲಯ ಪರಿಗಣಿಸಿತ್ತು. ಈ ಪ್ರಕರಣದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಒ.ಎಂ. ಕ್ರಾಸ್ತಾ ಅವರು ಈ ಮೊದಲು ಹಾಗೂ ಪ್ರಸ್ತುತ ಜಯರಾಮ ಶೆಟ್ಟಿ ಅವರು ವಾದಿಸಿದ್ದರು.

19 ಪ್ರಕರಣಗಳಲ್ಲಿ 4ರಲ್ಲಿ ಮರಣ ದಂಡನೆ: ಸೈನೈಡ್ ಮೋಹನ್‌ನ 19 ಪ್ರಕರಣಗಳ ವಿಚಾರಣೆ ಮುಗಿದ್ದಿದ್ದು , ಇನ್ನು 1 ಪ್ರಕರಣ ವಿಚಾರಣೆಗೆ ಬಾಕಿ ಇದೆ. 19 ಪ್ರಕರಣಗಳ ಪೈಕಿ 4 ರಲ್ಲಿ ಮರಣ ದಂಡನೆ ಶಿಕ್ಷೆ ಆಗಿದೆ. ಈ ಪೈಕಿ ಒಂದು ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣವನ್ನು ಜೀವಾವಧಿ ಶಿಕ್ಷೆಗೆ ಹಾಗೂ ಇನ್ನೊಂದು ಪ್ರಕರಣದಲ್ಲಿ 5 ವರ್ಷಗಳ ಕಠಿಣ ಶಿಕ್ಷೆಗೆ ಇಳಿಸಿದೆ. ಒಂದು ಪ್ರಕರಣದಲ್ಲಿ ಮರಣ ದಂಡನೆ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಇನ್ನೊಂದು ಪ್ರಕರಣದಲ್ಲಿ ಹೈಕೋರ್ಟ್ ತೀರ್ಪು ಇನ್ನಷ್ಟೇ ಬರಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net