

ಬೆಳಗಾವಿ: ಈಚೆಗೆ ತಂತ್ರಜ್ಞಾನ ಅತಿಯಾಗಿ ಬಳಕೆ ಮಾಡಲಾಗುತ್ತಿದೆ. ತಂತ್ರಜ್ಞಾನವು ಸಾಂಸ್ಕೃತಿಕ ಮತ್ತು ಸಾಹಿತ್ಯ ವಲಯದ ಸೃಜನಶೀಲತೆಗೆ ಪೂರಕವಲ್ಲ. ತಂತ್ರಜ್ಞಾನದ ಬದಲಾಗಿ ಮಾನವನ ಸೃಜನಶೀಲ ಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸಾಹಿತಿ ನಾಡೋಜ ಬರಗೂರ ರಾಮಚಂದ್ರಪ್ಪ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ಮರಾಠಿ ವಿಭಾಗಗಳ ಸಹಯೋಗದಲ್ಲಿ ಗುರುವಾರ ಕಾಲೇಜಿನ ಸಭಾಂಗಣದಲ್ಲಿ ಜರುಗಿದ ಹೊಸ ಸಹಸ್ರಮಾನದ ಧ್ವನಿಗಳು: ಸಮಕಾಲೀನ ಭಾರತದಲ್ಲಿ ಸಾಹಿತ್ಯ, ಸಮಾಜ ಮತ್ತು ಸಂಸ್ಕೃತಿ ಕುರಿತಾದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಸಮಕಾಲೀನ ಸಾಹಿತ್ಯ ಎಂದ ಮಾತ್ರಕ್ಕೆ ಇಲ್ಲಿ ಆಧುನಿಕ ಮಾತ್ರ ಎಂಬ ನಿರ್ಧಾರಕ್ಕೆ ಬರುವುದು ಸೂಕ್ತವಲ್ಲ. ಗತಕಾಲದ ಚಿಂತನೆ, ಸಂಪ್ರದಾಯ ಮತ್ತು ಪರಂಪರೆಗಳ ಮೇಲೆಯೇ ವರ್ತಮಾನದ ಚಿಂತನೆ ರೂಪಿತವಾಗಿರುತ್ತದೆ. ಜಾಗತೀಕರಣದ ಕಾಲದಲ್ಲಿ ಪೌರೋಹಿತ್ಯ ಮತ್ತು ಬಂಡವಾಳಶಾಹಿ ವ್ಯವಸ್ಥೆ ಮತ್ತೆ ಮೇಲ್ಪಂಕ್ತಿಗೆ ಬರುತ್ತಿದೆ. ಇತ್ತೀಚಿಗೆ ಸಂವಾದದ ಬದಲು ರಾಜಕೀಯ ಪ್ರೇರಿತ ಭಾವೋನ್ಮಾದ ಹೆಚ್ಚಾಗುತ್ತಿರುವುದು ವಿಷಾದಕರ ಸಂಗತಿ ಎಂದರು. ವಿಮರ್ಶಕ ಪ್ರೊ. ರಾಜೇಂದ್ರ ಚೆನ್ನಿ ವಿಭಿನ್ನ ಸಾಮಾಜಿಕ ಜಗತ್ತುಗಳೊಂದಿಗೆ ಅನುಸಂಧಾನ ವಿಷಯದ ಕುರಿತಾಗಿ ಮಾತನಾಡಿದರು.
ಪ್ರಾಚಾರ್ಯ ಪ್ರೊ. ಎಂ.ಜಿ. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಸಂತೋಷ ಕಾಮಗೌಡ ಅಧ್ಯಕ್ಷತೆ ವಹಿಸಿದ್ದರು. ಶಾಂಭವಿ ಥೋರ್ಲಿ ನಿರೂಪಿಸಿದರು. ಅನನ್ಯ ನಾಯಕ ಸ್ವಾಗತಿಸಿದರು. ಉಪನ್ಯಾಸಕಿ ಲಾವಣ್ಯ ಗುಂಜಾಳ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಗ್ಲೋರಿಯಾ ಮತ್ತು ಸಂಗಡಿಗರು ಸ್ವಾಗತ ಗೀತೆ ಪ್ರಸ್ತುತಪಡಿಸಿದರು. ಸೇಜಲ್ ಮಗದುಮ್ ವಂದಿಸಿದರು.