

ಹುನಗುಂದ: ವಕೀಲರು ನೊಂದವರಿಗೆ ಧ್ವನಿಯಾದಾಗ ಮಾತ್ರ ವೃತ್ತಿಗೆ ಸಾರ್ಥಕತೆ ಬರುತ್ತದೆ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಹೇಳಿದರು.
ಪಟ್ಟಣದ ವಕೀಲರ ಸಭಾಂಗಣಲ್ಲಿ ರಾಜ್ಯ ವಕೀಲರ ಪರಿಷತ್ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಶನಿವಾರ ಮಧ್ಯಾಹ್ನ ಹಮ್ಮಿಕೊಂಡಿದ್ದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಕೀಲರು ಪ್ರಾಮಾಣಿಕತೆ, ಧೈರ್ಯದಿಂದ ಶ್ರಮಶೀಲರಾಗಿ ವೃತ್ತಿಯ ಗೌರವ, ಘನತೆ ಹೆಚ್ಚಿಸುವಂತೆ ಕೆಲಸ ಮಾಡಬೇಕು. ಆತ್ಮಸಾಕ್ಷಿ ಸರ್ವಶ್ರೇಷ್ಠ ನ್ಯಾಯಾಲಯವಾಗಿದೆ. ಜ್ಞಾನದ ಹಿಂದೆ ಹೋಗಬೇಕು. ಹಣ ತಾನಾಗಿಯೇ ಬರುತ್ತದೆ. ಸಂಸ್ಕಾರ ಬೆಳೆಸಿಕೊಳ್ಳದಿದ್ದರೆ ಜ್ಞಾನ ಬೆಳೆಯುವುದಿಲ್ಲ. ಕಿರಿಯರು, ಹಿರಿಯರಿಗೆ ಗೌರವ ಕೊಡಬೇಕು ಎಂದು ತಿಳಿಸಿದರು.
ಹೈಕೋರ್ಟ್ ನ್ಯಾಯಮೂರ್ತಿ ಸಂಜೀವಕುಮಾರ ಹಂಚಾಟೆ ಮಾತನಾಡಿ, ಉತ್ತರಕರ್ನಾಟಕ ಕಾನೂನು ಅಕಾಡೆಮಿ ಆಗಬೇಕು. ಹುನಗುಂದಲ್ಲಿ ಎರಡು ದಿನಗಳವರೆಗೆ ಜಿಲ್ಲಾ ಪರ್ಮೆನೆಂಟ್ ನ್ಯಾಯಾಲಯ ಆಗಬೇಕೆಂದು ತಿಳಿಸಿದರು.
ರಾಜ್ಯ ಆಡಳಿತ ನ್ಯಾಯ ಮಂಡಳಿ ಪ್ರಧಾನ ಪೀಠದ ಅಧ್ಯಕ್ಷ ಆರ್.ಬಿ. ಬೂದಿಹಾಳ ಮಾತನಾಡಿ, ವಕೀಲರು ಕೋರ್ಟ್‌ಗೆ ಬರುವ ಮುನ್ನ ಪೂರ್ಣ ತಯಾರಿ ಇರಬೇಕು. ನ್ಯಾಯಾಧೀಶರಿಗೆ ತಿಳಿಯುವ ಹಾಗೆ ಸಂಕ್ಷಿಪ್ತವಾಗಿ ಪ್ರಕರಣ ವಿವರಿಸಬೇಕು ಎಂದು ತಿಳಿಸಿದರು.
ಪ್ರಧಾನ ಜಿಲ್ಲಾ ಸತ್ರ ನ್ಯಾಯಧೀಶ ಎನ್.ವಿ. ವಿಜಯ, ವಕೀಲರ ಪರಿಷತ್ ಸದಸ್ಯರ ಎಸ್.ಎಸ್. ಮಿಟ್ಠಲಕೋಡ, ಬಸವರಾಜ ಎಸ್., ವಿ.ಡಿ. ಕಾಮರೆಡ್ಡಿ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಪಿ.ಎಸ್. ಕಠಾಣಿ, ಕಾರ್ಯದರ್ಶಿ ಎಸ್.ಎಂ. ಉಪ್ಪಾರ ಉಪಸ್ಥಿತರಿದ್ದರು.