

ಕಡಬ: ಮನೆಯಂಗಳದಲ್ಲಿ ದೊಂದಿ ದೀಪ, ಮನೆಯ ಚಾವಡಿಯಲ್ಲಿ ಆ ಊರಿನ ಹಿರಿ ಜೀವಗಳ ಜೀವನ ಯಶೋಗಾಥೆಯ ವಿವರಣೆ... ಇದೆನೆಲ್ಲ ಉತ್ಸಾಹದಿಂದ ಆಲಿಸುತ್ತಿದ್ದ ಪತ್ರಕರ್ತರು... ಕಲ್ಲು ಮುಳ್ಳಿನ ಹಾದಿಯಲ್ಲಿ ನಡೆದು ಬಂದ ಹಿರಿಯರ ಜೀವನ ಪದ್ಧತಿಯ ಒಂದೊಂದು ಕ್ಷಣವೂ ಬಹಳಷ್ಟು ರೋಚಕ...
ದ.ಕ. ಜಿಲ್ಲಾ ಪತ್ರಕರ್ತರ ಸಂಘ, ಕಡಬ ತಾಲೂಕು ಪತ್ರಕರ್ತರ ಸಂಘದ ಆತಿಥ್ಯದಲ್ಲಿ ಭಾನುವಾರ ಕಡಬ ತಾಲೂಕಿನ ಕೊಂಬಾರು ಗ್ರಾಮದಲ್ಲಿ ಪತ್ರಕರ್ತರ ಗ್ರಾಮ ವ್ಯಾಸ್ತವ್ಯ ಕಾರ್ಯಕ್ರಮ ಅಂಗವಾಗಿ ರಾತ್ರಿ ಗ್ರಾಮದ ಚೆನ್ನಕೇಶವ ಎಂಬುವರ ಮನೆಯಲ್ಲಿ ಗ್ರಾಮದ ಹಿರಿಯರೊಂದಿಗಿನ ಪತ್ರಕರ್ತರ ಚಾವಡಿ ಚರ್ಚೆಯಲ್ಲಿ ಗ್ರಾಮದ ಹಿರಿಯರು ನಡೆದು ಬಂದ ಜೀವನ ಪದ್ಧತಿ ಅನಾವರಣಗೊಂಡಿತು.
ಕೊಂಬಾರು ಮಾತ್ರವಲ್ಲದೆ ಗ್ರಾಮ ವ್ಯಾಪ್ತಿಯಲ್ಲಿರುವ ಸಿರಿಬಾಗಿಲು ಗ್ರಾಮಗಳಲ್ಲಿ 60 ವರ್ಷಗಳ ಹಿಂದಿನ ಜೀವನ ಹಾಗೂ ಪ್ರಸಕ್ತ ಜೀವನ ಪದ್ಧತಿಯ ಹೋಲಿಕೆಯನ್ನು ಹಿರಿಯರು ವಿವರಿಸಿದರು.
ಪ್ರಸಕ್ತ ಕಾಲಘಟ್ಟದಲ್ಲಿ ಗ್ರಾಮದಲ್ಲಿ ಆನೆ, ಚಿರತೆ, ಮಂಗ, ಕಾಡುಕೋಣದಂತಹ ಕಾಡು ಪ್ರಾಣಿಗಳ ಹಾವಳಿ. ಇನ್ನೊಂದು ಕಡೆ ಅರಣ್ಯ ರಕ್ಷಣೆ ನೀತಿಯನ್ನು ಮುಂದಿಟ್ಟು ನಮಗೆ ಮೂಲಸೌಕರ್ಯಗಳಾದ ಸೂಕ್ತ ರಸ್ತೆ, ಕಿರು ಸೇತುವೆಗಳನ್ನು ಒದಗಿಸದೆ, ದುರಸ್ತಿ ಮಾಡದೆ ಇರುವ ಆಡಳಿತ ವ್ಯವಸ್ಥೆ. ಅದರೊಂದಿಗೆ ಕಸ್ತೂರಿರಂಗನ್ ವರದಿ ಜಾರಿಯ ತೂಗು ಗತ್ತಿಯ ಭಯದ ನೆರಳಿನಲ್ಲಿ ನಮ್ಮ ಬದುಕು ಸಾಗುತ್ತಿದೆ ಎನ್ನುವ ಮಾತುಗಳು ಕೇಳಿಬಂದವು.
ಆತಿಥ್ಯ ನೀಡಿದ ಚೆನ್ನಕೇಶವ ಗೌಡ ಕೈಂತಿಲ ಹಾಗೂ ಮನೆಯವರನ್ನು ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮತ್ತು ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಸನ್ಮಾನಿಸಿದರು. ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ. ಸ್ವಾಗತಿಸಿದರು. ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು. ಸಿದ್ದೀಕ್ ನೀರಾಜೆ ವಂದಿಸಿದರು.
ಸರ್ಕಾರದ ನೀತಿ ಅಡ್ಡಿಯಾಗಬಾರದು: ಇತ್ತೀಚಿನ ಕಸ್ತೂರಿ ರಂಗನ್ ವರದಿ ಜಾರಿ ಪ್ರಸ್ತಾಪ ನಮ್ಮನ್ನು ಆತಂಕಕ್ಕೆ ತಳ್ಳಿದೆ. ವರದಿ ಜಾರಿಗೊಳಿಸದಂತೆ ಗ್ರಾಪಂ ಗಳಲ್ಲಿ ನಿರ್ಣಯ ಮಾಡಿ ಸರ್ಕಾದ ವಿವಿಧ ಹಂತದ ಅಧಿಕಾರಿಗಳಿಗೆ, ಸಚಿವರಿಗೆ ಸಲ್ಲಿಸಿದ್ದೇವೆ. ನಾವು ಕಾಡಿನ ನಡುವೆ ಬದುಕು ಕಟ್ಟಿಕೊಂಡು ಇದ್ದೇವೆ. ಆದರೆ ನಾವು ವಾಸುತ್ತಿರುವ ಪ್ರದೇಶದಲ್ಲೂ ಮೂಲಸೌಕರ್ಯ ಒದಗಿಸುವಲ್ಲಿ ಸರ್ಕಾರದ ನೀತಿ ಅಡ್ಡಿಯಾಗಬಾರದು ಎಂದು ಕೊಂಬಾರು ಗ್ರಾಪಂನ ಪ್ರಸನ್ನ ಕುಮಾರ್ ಕಟ್ಟೆ ತಿಳಿಸಿದರು.
ವ್ಯವಸ್ಥೆಗಳೇ ಇಲ್ಲ: ಈಗ ಎಲ್ಲ ಕಡೆ ರಸ್ತೆ, ಶಾಲೆ, ಆಸ್ಪತ್ರೆ, ಬಸ್ ಸೌಕರ್ಯ ಇದೆ. ನಮಗೆ ಮಾತ್ರ ಆ ವ್ಯವಸ್ಥೆಗಳಿಲ್ಲ. ಸೇತುವೆಗಳಿಲ್ಲದ ಈ ಊರಿನಲ್ಲಿ ಮಳೆಗಾಲದಲ್ಲಿ ನಮ್ಮ ಸಮಸ್ಯೆ ಹೇಳಲು ಸಾಧ್ಯವಿಲ್ಲ ಎಂದು ವಯೋವೃದ್ಧ ಚೆನ್ನಪ್ಪ ಗೌಡ ಹೇಳಿದರು.
ಪತ್ರಕರ್ತರು ಕೇವಲ ಬರವಣಿಗೆಗೆ ಸೀಮಿತವಾಗದೆ ಇಂತಹ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಸಮಾಜದ ಉದ್ಧಾರ ಮಾಡುವ ಕೈಂಕರ್ಯ ಶ್ಲಾಘನೀಯ. ಪತ್ರಕರ್ತರ ಗ್ರಾಮ ವಾಸ್ತವ್ಯದಿಂದ ಗ್ರಾಮದ ಹಲವಾರು ಸಮಸ್ಯೆಗಳು ಜನಪ್ರತಿನಿಧಿ, ಅಧಿಕಾರಿಗಳ ಮುಂದೆ ಅನಾವರಣಗೊಂಡಿವೆ. ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಪತ್ರಕರ್ತರು ಶ್ರಮಿಸುವ ವಿಶ್ವಾಸವಿದೆ. ಚೆನ್ನಕೇಶವ, ಕೊಂಬಾರು ಗ್ರಾಪಂ ಸದಸ್ಯ