ಭೂಕುಸಿತದಿಂದ ಮಣ್ಣಿನಲ್ಲಿ ಸಿಲುಕಿದ ರೈಲು ಹಳಿ

SWR NEW
Published on

ಹುಬ್ಬಳ್ಳಿ : ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗ ವ್ಯಾಪ್ತಿಯ ಬ್ರಗಾಂಜಾ ಘಾಟ್​ನ ಕ್ಯಾಸಲ್​ರಾಕ್ - ಕರಂಜೊಲ್ ನಿಲ್ದಾಣಗಳ ಮಧ್ಯೆ ಮಂಗಳವಾರ ಉಂಟಾಗಿದ್ದ ಭೂಕುಸಿತದಿಂದ ರೈಲು ಹಳಿ ಮೇಲೆ ಮಣ್ಣು, ಗಿಡ-ಗಂಟಿಗಳು ಬಿದ್ದಿದ್ದು, ಬುಧವಾರ ಬೆಳಗ್ಗೆಯಿಂದಲೇ ತೆರವು ಕಾರ್ಯಾಚರಣೆ ತೀವ್ರಗತಿಯಲ್ಲಿ ಸಾಗಿದೆ.

ಮಂಗಳವಾರ ಸಂಜೆ ಅಂದಾಜು 6.30ಕ್ಕೆ ಕ್ಯಾಸಲ್​ರಾಕ್- ಕರಂಜೋಲ್ ನಿಲ್ದಾಣಗಳ ಮಧ್ಯದ ಮೂರನೇ ಸುರಂಗದ (ಕಿಮೀ 29/3) ಬಳಿ ಗುಡ್ಡ ಕುಸಿದಿದೆ. ಇದರ ಪರಿಣಾಮ ಅಂದಾಜು ಎರಡು ಕಿಮೀವರೆಗಿನ ರೈಲು ಹಳಿ ಭೂಮಿಯಲ್ಲಿ ಮುಚ್ಚಿ ಹೋಗಿದೆ.

ಅಥ್​ವುೂವರ್, ಹಿಟಾಚಿ ಯಂತ್ರಗಳ ಮೂಲಕ ಕುಸಿದ ಮಣ್ಣು ತೆರವುಗೊಳಿಸುವ ಕಾರ್ಯಾಚರಣೆ ನಡೆದಿದೆ. ಆದರೆ, ಸತತ ಸುರಿಯುತ್ತಿರುವ ಮಳೆ ಕಾರ್ಯಾಚರಣೆಗೆ ಅಡ್ಡಿ ಮಾಡಿದೆ. ಘಟನಾ ಸ್ಥಳಕ್ಕೆ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ, ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ಹರ್ಷ ಖರೆ ಅವರ ನೇತೃತ್ವದಲ್ಲಿ ಇಂಜಿನಿಯರಿಂಗ್ ತಂಡ ಭೂಕುಸಿತ ಉಂಟಾದ ಸ್ಥಳಕ್ಕೆ ತೆರಳಿದೆ.

ರೈಲು ಮಾರ್ಗವನ್ನು ಮರಳಿ ಸರಿಪಡಿಸುವುದಕ್ಕಾಗಿ ಹುಬ್ಬಳ್ಳಿಯಿಂದ ಹೆಚ್ಚಿನ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ತೀವ್ರ ಭೂಕುಸಿತದಿಂದಾಗಿ ರೈಲು ಮಾರ್ಗ ಸಂಚಾರಕ್ಕೆ ಪುನಃ ಯಾವಾಗ ಸರಿಹೊಂದಬಹುದೆಂಬುದು ಹೇಳುವುದು ಕಷ್ಟಸಾಧ್ಯವಾಗಿದೆ ಎನ್ನುತ್ತಾರೆ ರೈಲ್ವೆಯ ಹಿರಿಯ ಅಧಿಕಾರಿಗಳು.

ಭೂಕುಸಿತದಿಂದಾಗಿ ಬುಧವಾರ ಸಂಚರಿಸಬೇಕಿದ್ದ ಯಶವಂತಪುರ- ವಾಸ್ಕೊ ಮತ್ತು ವಾಸ್ಕೊ- ಯಶವಂತಪುರ ರೈಲುಗಳ ಸಂಚಾರವನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ವಾಸ್ಕೊ- ಹಜರತ್ ನಿಜಾಮುದ್ದಿನ್ ರೈಲಿನ ಮಾರ್ಗ ಬದಲಾಯಿಸಲಾಗಿದ್ದು, ಈ ರೈಲು ಮಡಗಾಂವ, ಮಜೊರ್ಡಾ, ರೊಹಾ, ಲೊನಾವಾಲಾ, ಪೂಣೆ ಮೂಲಕ ಸಂಚರಿಸಿತು. ಯಶವಂತಪುರ- ವಾಸ್ಕೊ ರೈಲಿನಲ್ಲಿ ತೆರಳುತ್ತಿದ್ದ ಪ್ರಯಾಣಿಕರನ್ನು ಹುಬ್ಬಳ್ಳಿಯಿಂದ 10 ಸಾರಿಗೆ ಬಸ್​ಗಳಲ್ಲಿ ಹಾಗೂ ಬೆಳಗಾವಿಯಿಂದ 13 ಬಸ್​ಗಳಲ್ಲಿ ಗೋವಾಕ್ಕೆ ತಲುಪಿಸಲಾಯಿತು.

ವೆಳಂಕಣಿ-ವಾಸ್ಕೊ ವೀಕ್ಲಿ ಎಕ್ಸ್​ಪ್ರೆಸ್, ಹಜರತ್ ನಿಜಾಮುದ್ದಿನ್- ವಾಸ್ಕೊ ಡೈಲಿ ಸೂಪರ್​ಫಾಸ್ಟ್ ಎಕ್ಸ್​ಪ್ರೆಸ್, ಶಾಲಿಮಾರ್ - ವಾಸ್ಕೊ ಅಮರಾವತಿ ಎಕ್ಸ್​ಪ್ರೆಸ್, ವಾಸ್ಕೊ- ಶಾಲಿಮಾರ್ ಅಮರಾವತಿ ಎಕ್ಸ್​ಪ್ರೆಸ್, ವಾಸ್ಕೊ- ಹಜರತ್ ನಿಜಾಮುದ್ದಿನ್ ಎಕ್ಸ್​ಪ್ರೆಸ್, ಕಾಚಿಗುಡಾ - ವಾಸ್ಕೊ, ವಾಸ್ಕೊ - ಕಾಚೆಗುಡಾ ರೈಲುಗಳ ಸಂಚಾರ ಭಾಗಶಃ ರದ್ದುಗೊಳಿಸಲಾಗಿದೆ. ಭೂ ಕುಸಿತದಿಂದಾಗಿ ಜು. 27ರಂದು ಎಸ್​ಎಸ್​ಎಸ್ ಹುಬ್ಬಳ್ಳಿ - ಮೈಸೂರು ಹಂಪಿ ಡೈಲಿ ಎಕ್ಸ್​ಪ್ರೆಸ್ ರೈಲು ನಿಗದಿತ ಸಮಯಕ್ಕಿಂತ 60 ನಿಮಿಷ ತಡವಾಗಿ ಸಂಚರಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net