

ಹನೂರು: ತಾಲೂಕಿನಲ್ಲಿ ಇಲಾಖೆಗಳ ಅಧಿಕಾರಿಗಳ ನಡುವೆ ಸಮನ್ವಯ ಕೊರತೆಯಿಂದಾಗಿ ಹಲವಾರು ಸಮಸ್ಯೆಗಳು ಎದುರಾಗುತ್ತಿವೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ವೆಂಕಟೇಶ್ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದ ಸಭಾಂಗಣದಲ್ಲಿ ಮಂಗಳವಾರ ಮಕ್ಕಳ ಹಕ್ಕುಗಳ ರಕ್ಷಣೆ ಸಂಬಂಧ ಆಯೋಜಿಸಿದ್ಧ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಬದ್ಧತೆ, ಸೂಕ್ಷ್ಮತೆ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸಿ ಮಕ್ಕಳ ಹಕ್ಕುಗಳ ಬಗ್ಗೆ ಇರುವ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ಅಮಾನತುಗೊಳಿಸಲು ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹನೂರು ತಾಲೂಕಿನ ಭಾಗದಲ್ಲಿ ಬಾಲ್ಯ ವಿವಾಹ ಹೆಚ್ಚಾಗಿ ನಡೆಯುತ್ತಿವೆ. ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಂಖ್ಯೆ ಹೆಚ್ಚಿದೆ. ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ. ಸರಿಯಾದ ಪೋಷಣೆ ಇಲ್ಲದಂತಾಗಿದೆ. ಇದರಿಂದ ಮಕ್ಕಳ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ. ಇದು ಅಪರಾಧ. ಆದ್ದರಿಂದ ಅಧಿಕಾರಿಗಳು ಈ ಬಗ್ಗೆ ಹೆಚ್ಚು ಗಮನಹರಿಸಿ ಮಕ್ಕಳ ಹಕ್ಕುಗಳನ್ನು ರಕ್ಷಿಸಬೇಕು. ಈ ಬಗ್ಗೆ ವರದಿ ಸಲ್ಲಿಸಬೇಕು. ಈ ಸಂಬಂಧ ತಾಲೂಕಿನಲ್ಲಿ ಇರುವ ಸಮಸ್ಯೆಗಳನ್ನು ಮುಂದಿನ ಸಭೆಯೊಳಗೆ ಬಗೆಹರಿಸಬೇಕು ಎಂದು ಸೂಚಿಸಿದರು.
ಮುಚ್ಚಿರುವ ಶಾಲೆಗಳನ್ನು ತೆರೆಯಲು ಕ್ರಮವಹಿಸಿ: ಸಭೆಯಲ್ಲಿ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಮಕ್ಕಳಿಗೆ ಒದಗಿಸಿರುವ ಅಗತ್ಯ ಮೂಲ ಸೌಕರ್ಯ ಹಾಗೂ ರಕ್ಷಣೆಯ ಬಗ್ಗೆ ಮಾಹಿತಿ ಪಡೆಯಲಾಯಿತು. ಈ ವೇಳೆ 17 ಶಾಲೆಗಳು ಮುಚ್ಚಿರುವುದು ಸದಸ್ಯರ ಗಮನಕ್ಕೆ ಬಂತು. ಇದಕ್ಕೆ ಬಿಇಒ ಗುರುಲಿಂಗಯ್ಯ ಅವರು ಕೆಲವು ಕಾರಣಗಳನ್ನು ನೀಡಿದರು. ಆದರೆ, ಇದಕ್ಕೊಪ್ಪದ ಅವರು, ಶಾಲೆಗಳನ್ನು ಮುಚ್ಚುವುದು ಸುಲಭ. ಆದರೆ ತೆರೆಯುವುದು ಕಷ್ಟ. ಆದ್ದರಿಂದ ಈ ಸಂಬಂಧ ಸಮರ್ಪಕ ಕ್ರಿಯಾಯೋಜನೆ ತಯಾರಿಸಿ ಅಧಿಕಾರಿಗಳ ಸಭೆ ನಡೆಸಿ ಮುಚ್ಚಿರುವ ಶಾಲೆಗಳನ್ನು ತೆರೆಯಲು ಅಗತ್ಯ ಕ್ರಮವಹಿಸಬೇಕು. ಹಾಗೆಯೇ 5 ಕ್ಕಿಂತ ಕಡಿಮೆ ಇರುವ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಾಗಬೇಕು. ಖಾಸಗಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಮಕ್ಕಳ ಪ್ರವೇಶಾತಿ ಶುಲ್ಕವನ್ನು ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಅಳವಡಿಸಿರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಪ್ರತಿಧ್ವನಿಸಿದ ವಿಜಯವಾಣಿ ವರದಿ: ಇದೇ ವೇಳೆ ಶೈಕ್ಷಣಿಕ ವಲಯದಲ್ಲಿ 43 ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಗಮನಕ್ಕೆ ಬಂತು. ಈ ವೇಳೆ ಶಶಿಧರ್ ಕೋಸಂಬೆ ಅವರು ಅ.26 ರಂದು ವಿಜಯವಾಣಿ ಸಂಚಿಕೆಯಲ್ಲಿ ಶಾಲೆಯಿಂದ ಹೊರಗುಳಿದ 128 ಮಕ್ಕಳು ಎಂಬ ಶೀರ್ಷಿಕೆಯಡಿ ಪ್ರಕಟಗೊಂಡ ವರದಿಯನ್ನು ಪ್ರಸ್ತಾಪಿಸಿ ಇದರಲ್ಲಿ ಹನೂರು ಭಾಗದಲ್ಲೇ ಹೆಚ್ಚಿನ ಮಕ್ಕಳಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ? ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮವಹಿಸಿ ಮಕ್ಕಳು ಶಾಲೆಗೆ ದಾಖಲಿಸುವಂತೆ ಬಿಇಒ ಅವರಿಗೆ ಸೂಚಿಸಿದರು.
ಆರೋಗ್ಯ ಇಲಾಖೆಯ ಬಗ್ಗೆ ಅತೃಪ್ತಿ: ಸಭೆಯಲ್ಲಿ ಮತ್ತೋರ್ವ ಸದಸ್ಯ ಡಾ.ಕೆ.ಟಿ ತಿಪ್ಪೇಸ್ವಾಮಿ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆ ಸಂಬಂಧ ಮಾತನಾಡಿದರಲ್ಲದೇ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಪ್ರಭಾರ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಕಾಶ್ ಅವರಿಂದ ಮಾಹಿತಿ ಪಡೆದರು. ಈ ವೇಳೆ 25 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಗಮನಕ್ಕೆ ಬಂತು. ಈ ಬಗ್ಗೆ ಅಗತ್ಯ ಕ್ರಮವಹಿಸದಿರುವುದರ ಬಗ್ಗೆ ಡಾ. ಪ್ರಕಾಶ್ ಅವರನ್ನು ಪ್ರಶ್ನಿಸಿ ಆಕ್ಷೇಪ ವ್ಯಕ್ತಪಡಿಸಿದರು. ಇನ್ನು ಮಕ್ಕಳ ಹಕ್ಕುಗಳ ರಕ್ಷಣೆ ಸಂಬಂಧ ಕೆಲವು ವಿಚಾರಗಳಿಗೆ ಸಮರ್ಪಕ ಮಾಹಿತಿ ಇರಲಿಲ್ಲ. ಇದರಿಂದ ಆಯೋಗದ ಸದಸ್ಯರು ಆರೋಗ್ಯ ಇಲಾಖೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ, ಸರಿಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಮಕ್ಕಳನ್ನು ಶಾಲೆಗೆ ಕರೆ ತರಬೇಕು: ಸಭೆಗೂ ಮುನ್ನ ಪಟ್ಟಣದ ಬಿಎಂಜಿ ಸರ್ಕಾರಿ ಪ್ರೌಢಶಾಲೆಗೆ ಆಯೋಗದ ಸದಸ್ಯರು ಭೇಟಿ ನೀಡಿದ್ದರು. ಈ ವೇಳೆ ಹಾಜರಾತಿ ಪುಸ್ತಕವನ್ನು ಪರೀಕ್ಷಿಸಿದಾಗ ಶಾಲೆಗೆ ಬಾರದಿದ್ದ ಮಕ್ಕಳಿಗೂ ಹಾಜರಾತಿ ನೀಡಿರುವುದು ಗಮನಕ್ಕೆ ಬಂತು. ಈ ಬಗ್ಗೆ ಶಿಸ್ತುಕ್ರಮ ಕೈಗೊಳ್ಳುವಂತೆ ಬಿಇಒ ಅವರಿಗೆ ಸೂಚಿಸಿದರು.
ಜತೆಗೆ ಈ ಶಾಲೆಯಲ್ಲಿ ಜುಲೈ ತಿಂಗಳಿನಿಂದ ಈವರೆಗೂ 17 ಮಕ್ಕಳು ನಿರಂತರ ಗೈರಾಗಿರುವ ಸಂಬಂಧ ಬಿಇಒ ಅವರನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು. ತಹಸೀಲ್ದಾರ್ ಹಾಗೂ ತಾಪಂ ಇಒ ಅವರ ಸಹಕಾರ ಪಡೆದು ಗೈರಾಗಿರುವ ಮಕ್ಕಳನ್ನು ಶಾಲೆಗೆ ಕರೆತರುವಂತೆ ಸೂಚಿಸಿದರು.
ಇದೇ ವೇಳೆ ಮಕ್ಕಳ ಹಕ್ಕುಗಳ ರಕ್ಷಣೆ ಸಂಬಂಧ ಇನ್ನಿತರ ವಿಷಯಗಳು ಚರ್ಚೆಯಾದವು. ಸಭೆಯಲ್ಲಿ ತಹಸೀಲ್ದಾರ್ ವೈ.ಕೆ. ಗುರುಪ್ರಸಾದ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚೆಲುವರಾಜು, ತಾಪಂ ಇಒ ಉಮೇಶ್, ಪರಿಶಿಷ್ಟ ವರ್ಗಗಳ ಸಹಕಾಯಕ ನಿರ್ದೇಶಕ ರಾಜೇಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ನಂಜಮಣಿ, ಸಬ್‌ಇನ್ಸ್‌ಪೆಕ್ಟರ್ ಮಂಜುನಾಥ್ ಪ್ರಸಾದ್ ಹಾಗೂ ಇನ್ನಿತರರು ಇದ್ದರು.