

ಕುಂದಗೋಳ: ತಾಲೂಕಿನ ಯರಗುಪ್ಪಿ, ರೊಟ್ಟಿಗವಾಡ, ಕೊಡ್ಲಿವಾಡ ಗ್ರಾಮಗಳ ಹಳ್ಳಗಳಲ್ಲಿ ಅಕ್ರಮವಾಗಿ ಉಸುಕು ತೆಗೆಯುತ್ತಿರುವ ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಬಿಂದು ಪಾಟೀಲ ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾತನಾಡಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಬಿಂದು ಪಾಟೀಲ, ಅಕ್ರಮವಾಗಿ ಉಸುಕು ದಾಸ್ತಾನು ಮಾಡಿದ ಒಟ್ಟು ಏಳು ಜನರಿಗೆ ನೋಟಿಸ್ ನೀಡಲಾಗಿದೆ. ಸ್ಥಳೀಯ ಆಡಳಿತ ಈಗಾಗಲೇ ನೋಟಿಸ್ ನೀಡಿದ್ದು, ಒಟ್ಟು 15ಕ್ಕೂ ಹೆಚ್ಚು ನೋಟಿಸ್ ಜಾರಿಯಾಗಿವೆ ಎಂದರು. ಉಸುಕು ದಾಸ್ತಾನು ಮಾಡಿರುವುದನ್ನು ಬಳಕೆ ಮಾಡಬಾರದು. ಬೇರೆಡೆ ಸಾಗಾಟ ಕೂಡ ಮಾಡದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಬಿಂದು ಪಾಟೀಲ ಹೇಳಿದರು. ರೊಟ್ಟಿಗವಾಡ ಗ್ರಾಮದ ರೈತ ಗಂಗಾಧರ ಬರದ್ವಾಡ ಮಾತನಾಡಿ, ನಮ್ಮ ಜಮೀನಿನ ಬಳಿ ಹಳ್ಳವಿದೆ. ಅಲ್ಲಿಂದ ಕೆಲವರು ಟ್ರ್ಯಾಕ್ಟರ್ಗಳಲ್ಲಿ ಉಸುಕು ತುಂಬಿಕೊಂಡು ಸಂಚರಿಸುತ್ತಾರೆ. ನಾವು ಏನಾದರೂ ಕೇಳಿದರೆ ಅಧಿಕಾರಿಗಳಿಗೆ ಮಾಮೂಲು ನೀಡುತ್ತೇವೆ ಎನ್ನುತ್ತಾರೆ. ಕೆಲ ರಾಜಕಾರಣಿಗಳ ಹೆಸರು ಹೇಳಿ ನಮಗೇ ಆವಾಜ್ ಹಾಕುತ್ತಾರೆ. ರಾತ್ರಿ ವೇಳೆ ಉಸುಕು ತುಂಬಿಕೊಂಡು ಹೋಗುತ್ತಾರೆ. ಇವರು ಹೀಗೆ ಮಾಡುತ್ತಿರುವುದರಿಂದ ಹಳ್ಳ ಮತ್ತು ನಮ್ಮ ಹೊಲದಲ್ಲಿ ಅಂತರ್ಜಲಮಟ್ಟ ಕಡಿಮೆಯಾಗಿದೆ. ಸರಿಯಾಗಿ ಬೆಳೆ ಬೆಳೆಯುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಹಳ್ಳದ ಉಸುಕನ್ನು ಯಾವುದೇ ಪರವಾನಗಿ ಇಲ್ಲದೆ, ತೆಗೆಯುವುದು, ಸಾಗಾಟ ಮಾಡುವುದು ತಪ್ಪು. ಸ್ಥಳ ಪರಿಶೀಲನೆ ಪ್ರಕಾರ ಮತ್ತು ರೈತರ ಹೇಳಿಕೆಯಂತೆ ಬಹಳ ದಿನಗಳಿಂದ ಉಸುಕು ತೆಗೆಯುವುದು ಸಾಗಾಟ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಇನ್ನು ಮುಂದೆ ಯಾರಾದರೂ ಉಸುಕು ತೆಯುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. | ಬಿಂದು ಪಾಟೀಲ ಗಣಿ ಮತ್ತು ಭೂ ಇಲಾಖೆಯ ಅಧಿಕಾರಿ