

ವಿಜಯವಾಣಿ ಸುದ್ದಿಜಾಲ ಉಡುಪಿ
ಕರ್ತವ್ಯ ಲೋಪ, ವಂಚನೆ ಹಾಗೂ ಸರ್ಕಾರಿ ಕೆಲಸಗಳಲ್ಲಿ ನಿರ್ಲಕ್ಷ್ಯದ ಆರೋಪದ ಹಿನ್ನೆಲೆಯಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ಕೆ.ಮಹೇಶ್ಚಂದ್ರ (ಕೆಎಎಸ್, ಕಿರಿಯ ಶ್ರೇಣಿ) ಅವರನ್ನು ಸರ್ಕಾರದ ಆದೇಶದಂತೆ ಉಡುಪಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
1) ಈ ಹಿಂದೆ ಉಡುಪಿ ನಗರಸಭೆಯ ಆಯುಕ್ತರಾಗಿದ್ದ ಸಂದರ್ಭದಲ್ಲಿ ಕೆ.ಮಹೇಶ್ಚಂದ್ರ ಅವರು ಬಡಾನಿಡಿಯೂರು ಗ್ರಾಮದಲ್ಲಿ ವಾಣಿಜ್ಯ ಉದ್ದೇಶದ ರೆಸಾರ್ಟ್ ನಿಮಾರ್ಣಕ್ಕೆ ಸಂಬಂಧಿಸಿದಂತೆ ಭೂ ಉಪಯೋಗದ ಬದಲಾವಣೆ ಕಡತದಲ್ಲಿ ಸರ್ಕಾರಿ ದಾಖಲೆಗಳ ನಿಯಮ ಮೀರಿ ನಕಲಿ ದಾಖಲೆ ಸೃಷ್ಟಿಸಿದ್ದರು. ಈ ಕುರಿತು ಅಂದಿನ ಉಡುಪಿ ಶಾಸಕರು ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಈ ವಿಚಾರವಾಗಿ ಮಹೇಶ್ಚಂದ್ರ ಅವರು ಸರಿಯಾಗಿ ಸ್ಪಷ್ಟೀಕರಣವನ್ನೂ ನೀಡದೆ ಜಿಲ್ಲಾಡಳಿತಕ್ಕೆ ಮುಜುಗರ ಉಂಟಾಗುವಂತೆ ಮಾಡಿದ್ದರು.
2) ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿ ಭೂ ಸ್ವಾಧಿನ ಪ್ರಕ್ರಿಯೆ, ಪರಿಹಾರ ವಿತರಣೆಯನ್ನೂ ಬಾಕಿ ಉಳಿಸಿದ್ದಾರೆ.
3) ಪಡುಬಿದ್ರಿಯಲ್ಲಿ ಸುಜ್ಞಾನ್ ಕಂಪನಿ ವಿರುದ್ಧ ಸಾರ್ವಜನಿಕರಿಂದ ಸ್ವೀಕೃತವಾದ ಅರ್ಜಿಗಳ ಪರಿಶೀಲನೆ ಮಾಡದೆ ಬಾಕಿ ಉಳಿಸಿದ್ದಾರೆ.
4) ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಮರಳು ಸಾಗಾಟ ಹಾಗೂ 22 ಮರಳು ಬ್ಲಾಕ್ಗಳಿಗೆ ಸಂಬಂಧಿಸಿ ಟೆಂಡರ್ನಲ್ಲಿ ಇಲ್ಲದ ಷರತ್ತು ವಿಧಿಸಿದ್ದಾರೆ. ಇದು ಸರ್ಕಾರಕ್ಕೂ ಮುಖಭಂಗವಾಗುವಂತೆ ಆಗಿದೆ.
5) ಈ ಹಿಂದೆ ಚುನಾವಣಾ ಸಂದರ್ಭದಲ್ಲಿ ಮತ್ತು ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಕೇಂದ್ರ ಸ್ಥಾನದಲ್ಲಿ ಇರುವಂತೆ ಮೇಲಾಧಿಕಾರಿ ಸೂಚನೆ ನೀಡಿದ್ದರೂ ಸಹ ಕರ್ತವ್ಯ ಪಾಲನೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದರು.
6) ಕಾರ್ಕಳ ತಾಲೂಕಿನ ಇನ್ನಾ ಗ್ರಾಮದಲ್ಲಿ ವಿದ್ಯುತ್ ಪ್ರಸರಣ ಮಾರ್ಗದ ಕಾಮಗಾರಿ ವಿಚಾರವಾಗಿ ಪೊಲೀಸ್ ಬಂದೋಬಸ್ತ್ನಲ್ಲಿ ಕೆಲಸ ನಿರ್ವಹಿಸುವಂತೆ ಸೂಚಿಸಿದ್ದರೂ ಸಹ ಅದನ್ನು ಪಾಲಿಸದೇ ಇರುವುದರಿಂದ ಕಾಮಗಾರಿ ಸ್ಥಗಿತಕ್ಕೆ ಕಾರಣರಾಗಿದ್ದಾರೆ. ಕೇಂದ್ರ ಸರ್ಕಾರದ ಈ ಯೋಜನೆಯ ಕುರಿತು ಸಾರ್ವಜನಿಕರಿಗೆ ವಿವರಿಸಿ ಹೇಳಿ ಮನದಟ್ಟು ಮಾಡುವಲ್ಲಿಯೂ ಸಹ ವಿಲರಾಗಿದ್ದಾರೆ.
7) ಜಿಲ್ಲೆಗೆ ಕೇಂದ್ರ ಸಚಿವರು ಹಾಗೂ ಇತರ ರಾಜ್ಯಗಳ ಗಣ್ಯರು ಬರುವ ಸಂದರ್ಭದಲ್ಲಿ ಕೇಂದ್ರ ಸ್ಥಾನದಲ್ಲಿ ಇರದೇ ನಿರ್ಲಕ್ಷ್ಯ ವಹಿಸಿವುದು. ಮೇಘಾಲಯದ ರಾಜ್ಯಪಾಲರು ಬಂದಾಗ ಶಿಷ್ಟಾಚಾರ ಪಾಲಿಸದೆ ಅನುಚಿತವಾಗಿ ವರ್ತಿಸಿದ್ದರು.
8) ಎಸಿ ಕಚೇರಿಗೆ ಬರುವ ಸಾರ್ವಜನಿಕರನ್ನು ಭೇಟಿಯಾಗಿ ಸರಿಯಾಗಿ ಸ್ಪಂದಿಸದೆ ಕಚೇರಿಯ ಸಿಬ್ಬಂದಿ ಭೇಟಿಯಾಗುವಂತೆ ತಿಳಿಸಿ ಕಚೇರಿಯಿಂದ ಹೊರ ಹೋಗುತ್ತಿದ್ದರು. ಈ ಕುರಿತು ಜನಪ್ರತಿನಿಧಿಗಳಿಂದ ಜಿಲ್ಲಾಡಳಿತಕ್ಕೆ ದೂರು ಬಂದಿತ್ತು. ಅನೇಕ ಬಾರಿ ನೋಟಿಸ್, ನಿರ್ದೇಶನ ನೀಡಿದ್ದರೂ ವರ್ತನೆ ಹಾಗೂ ಕರ್ತವ್ಯದಲ್ಲಿ ಬದಲಾವಣೆ ಕಾಣದ್ದರಿಂದ ಸರ್ಕಾರದ ಆದೇಶದಂತೆ ಕುಂದಾಪುರ ಉಪವಿಭಾಗಾಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಬ್ರಹ್ಮಾವರ ತಾಲೂಕು ತಹಸೀಲ್ದಾರ್ ಶ್ರೀಕಾಂತ ಎಸ್. ಹೆಗ್ಡೆ ಅವರಿಗೆ ಕುಂದಾಪುರದ ಪ್ರಭಾರ ಉಪವಿಭಾಗಾಧಿಕಾರಿಯಾಗಿ ಸರ್ಕಾರದ ಕಾರ್ಯದರ್ಶಿ ನೇಮಕಗೊಳಿಸಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.