

ಕೂಡ್ಲಿಗಿ: ಹೋಳಿ ಹುಣ್ಣಿಮೆ ಅದ್ದೂರಿ ಆಚರಣೆಗೆ ಕೂಡ್ಲಿಗಿ ಹೆಸರುವಾಸಿಯಾಗಿದ್ದು, ಪಟ್ಟಣದ ಜನತೆ ಶಾಂತಿ-ಸೌಹಾರ್ದ, ಭಾವೈಕ್ಯದಿಂದ ರಂಗಿನಾಟದಲ್ಲಿ ಪಾಲ್ಗೊಂಡು ಭಾತೃತ್ವ ಮೆರೆದರು.
ಮಂಗಳವಾರ ಸಂಜೆ ಪಟ್ಟಣದ ಲಕ್ಷ್ಮೀ ಬಜಾರ್ ಹಳೇ ಆಸ್ಪತ್ರೆ ಬಳಿ ಪ್ರತಿಷ್ಠಾಪಿಸಿದ್ದ ಕಾಮನ ಮೂರ್ತಿಯನ್ನು ರಾತ್ರಿ ಹನ್ನೆರಡು ಗಂಟೆಗೆ ದಹನ ಮಾಡಲಾಯಿತು. ಬುಧವಾರ ಬೆಳಗ್ಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡಿಜೆ ಸೌಂಡ್‌ಗೆ ಯುವಕರು ನತ್ಯ ಮಾಡುತ್ತಾ ರಂಗು ರಂಗಿನ ಬಣ್ಣವನ್ನು ಪರಸ್ಪರ ಎರಚಿಕೊಂಡು ಹೋಳಿ ಹಬ್ಬ ಆಚರಿಸಿದರು.
ಬಣ್ಣದ ಓಕುಳಿ ಆರಂಭವಾಗುತಿದ್ದಂತೆ ಪಟ್ಟಣ ಸಮೀಪದ ಹಳ್ಳಿಗಳ ಯುವಕರು, ಮಕ್ಕಳು ಬಂದು ಹೋಳಿ ಸಂಭ್ರಮದಲ್ಲಿ ಪಾಲ್ಗೊಂಡರು. ಒಬ್ಬರನ್ನೊಬ್ಬರು ಸುಲಭವಾಗಿ ಗುರುತಿಸಲಾಗದಷ್ಟು ಬಣ್ಣದಲ್ಲಿ ಮಿಂದೆದ್ದರು.
ಬಣ್ಣದಲ್ಲಿ ಮಿಂದೆದ್ದ ಮಹಿಳೆಯರು: ಪಟ್ಟಣದ ಪ್ರತಿ ಓಣಿಗಳಲ್ಲಿ ಮಹಿಳೆಯರು ಬಣ್ಣಗಳ ಸಮ್ಮಿಲನದೊಂದಿಗೆ ಹೋಳಿ ಆಚರಿಸಿದರು. ಯುವಕರ ಗುಂಪು ಮದಕರಿ ವೃತ್ತ ಹಾಗೂ ಪಾದಗಟ್ಟೆ ವೃತ್ತದಲ್ಲಿ ಜಮಾವಣೆಗೊಂಡು ಹಲಗೆ ಹಾಗೂ ಡಿಜೆ ನಾದಕ್ಕೆ ಕುಣಿದು ಕುಪ್ಪಳಿಸಿದರು. ಅಹಿತಕರ ಘಟನೆಗಳು ಜರುಗದಂತೆ ಪಟ್ಟಣದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.