ಅರ್ಹರಿಗೆ ಮೈನಿಂಗ್ ಪರವಾನಗಿ ನೀಡಿ

ಕಲ್ಲು ಕುಟಿಕರ ಸಮಸ್ಯೆಗಳ ಕುರಿತು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಕೇಸ್ವಾನ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಸೂಚನೆ
Stop illigle maining
ಕಲ್ಲು ಕುಟಿಕರ ಸಮಸ್ಯೆಗಳ ಕುರಿತು ಕೋಲಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಶಾಸಕ ಕೊತ್ತೂರು ಜಿ.ಮಂಜುನಾಥ್, ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್, ಎಂ.ಎಲ್.ಸಿ ಅನಿಲಕುಮಾರ್, ಅಪರ ಜಿಲ್ಲಾಧಿಕಾರಿ ಎಸ್. ಎಂ. ಮಂಗಳಾ, ಉಪವಿಭಾಗಾಧಿಕಾರಿ ಡಾ. ಎಂ. ನಯನಾ ಇದ್ದರು.Stop illigle maining
Published on: 

ಕೋಲಾರ: ಯಾವುದೇ ಪಕ್ಷದ ಕಾರ್ಯಕರ್ತರಿಗೆ ಅಥವಾ ಮುಖಂಡರಿಗೆ ಮೈನಿಂಗ್ ಪರವಾನಗಿ ಕೊಡಬೇಕು ಎಂಬ ನಿಯಮವಿಲ್ಲ. ಪಾರಂಪರಿಕವಾಗಿ ವೃತ್ತಿ ಮಾಡುತ್ತಿರುವ ನೈಜ ಕಲ್ಲು ಕುಟಿಕರು ಯಾರಿದ್ದಾರೋ ಅವರಿಗೆ ಮಾತ್ರ ಅವಕಾಶ ನೀಡಿ ಎಂದು ಶಾಸಕ ಕೊತ್ತೂರು ಜಿ. ಮಂಜುನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಲ್ಲು ಕುಟಿಕರ ಸಮಸ್ಯೆಗಳ ಕುರಿತು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಕೇಸ್ವಾನ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ರಾಜಕೀಯ ಒತ್ತಡಗಳಿಗೆ ಮಣಿಯದೆ ಅರ್ಹರಿಗೆ ಮಾತ್ರ ನ್ಯಾಯ ಒದಗಿಸುವಂತೆ ತಾಕೀತು ಮಾಡಿದರು. ಕೆಲವು ಅನರ್ಹರು ಮುಖ್ಯಮಂತ್ರಿಗಳ ಕಚೇರಿಗೆ ತೆರಳಿ ತಾವು ಕಟ್ಟಾ ತಮ್ಮ ಪಕ್ಷದ ಕಾರ್ಯಕರ್ತರು ಎಂದು ಹೇಳಿಕೊಂಡು ಡಿಸಿ ವಿರುದ್ಧ ದೂರು ನೀಡಿರುವ ವಿಚಾರ ಸಭೆಯಲ್ಲಿ ಪ್ರಸ್ತಾಪವಾದಾಗ, ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳ ವಿರುದ್ಧ ಶಾಸಕರ ಕಿಡಿ: ದಾನಹಳ್ಳಿ ಕಡೆಯಿಂದ ಅಕ್ರಮವಾಗಿ ಕಲ್ಲು ತುಂಬಿಕೊಂಡು ಬರುತ್ತಿದ್ದ ಲಾರಿಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ 10 ನಿಮಿಷದಲ್ಲೇ ಆ ಲಾರಿಗಳು ವಾಪಸ್ ಹೋಗುತ್ತಿವೆ ಎಂದು ಶಾಸಕರ ನೇರವಾಗಿ ಆರೋಪಿದರು. ಇಲಾಖೆಯಿಂದಲೇ ದಂಧೆಕೋರರಿಗೆ ಮಾಹಿತಿ ರವಾನೆಯಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಇಂತಹ ಅಕ್ರಮಗಳಿಗೆ ಸಹಕರಿಸುವ ಸಿಬ್ಬಂದಿ ಹಾಗೂ ಚಾಲಕರನ್ನೂ ಕೂಡಲೇ ತೆಗೆದುಹಾಕಿ, ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಎಚ್ಚರಿಸಿದರು.

ಕ್ರಷರ್‌ಗಳಿಗೆ 20 ರಿಂದ 40 ಟನ್ ಭಾರ ಹೊತ್ತು ಸಾಗುವ ಲಾರಿಗಳಿಂದ ಜಿಲ್ಲೆಯ ಪ್ರಮುಖ ರಸ್ತೆಗಳು ಹಾಳಾಗಿದ್ದು, ರಸ್ತೆಗಳಿಗೆ ಆದ ಹಾನಿ ಸರಿಪಡಿಸಿ, ಡಾಂಬರೀಕರಣ ಮಾಡಿಕೊಡಲು ಗುತ್ತಿಗೆದಾರರು ಒಪ್ಪಿಕೊಂಡಿದ್ದಾರೆ. ಎಚ್.ಕ್ರಾಸ್‌ನಿಂದ ಕೋಲಾರವರೆಗಿನ ರಸ್ತೆ ಕಾಮಗಾರಿ ಮಾರ್ಚ್ ಒಳಗೆ ಪೂರ್ಣಗೊಳಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು.

ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಮಾತನಾಡಿ, ಮಾಲೂರು, ಟೇಕಲ್ ಹಾಗೂ ಬಂಗಾರಪೇಟೆ ಭಾಗದ ನಾಲ್ವರ ವಿರುದ್ಧ ದೂರುಗಳಿದ್ದು, ಅವರು ಆದಾಯ ತೆರಿಗೆ ಪಾವತಿದಾರರೇ ಎಂಬುದನ್ನು ದೃಢಪಡಿಸಿಕೊಳ್ಳಲು ಐಟಿ ಇಲಾಖೆಗೆ ಪತ್ರ ಬರೆಯಲಾಗುವುದು. ವಾರ್ಷಿಕ 1.2 ಲಕ್ಷ ರೂ.ಗಿಂತ ಹೆಚ್ಚು ಆದಾಯವಿರುವ ಎಪಿಎಲ್ ಕಾರ್ಡ್‌ದಾರರು ಕಲ್ಲು ಕುಟಿಕ ಪ್ರಮಾಣಪತ್ರ ಪಡೆಯಲು ಅರ್ಹರಲ್ಲ ಎಂದು ಸ್ಪಷ್ಟಪಡಿಸಿದರು. ಜಂಟಿ ಸಮಿತಿ ವರದಿ ಬರುವವರೆಗೆ ಸದ್ಯ ಇರುವ ಯಾವುದೇ ಅರ್ಜಿ ಪರಿಗಣಿಸದೆ ಹಾಗೂ ಪ್ರಕ್ರಿಯೆ ನಡೆಸದಿರಲು ಆದೇಶಿಸಲಾಯಿತು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ವೈ. ಶಿವಕುಮಾರ್, ಪ್ರಭಾರಿ ತಹಸೀಲ್ದಾರ್ ನಾಗವೇಣಿ ಇದ್ದರು.

ಶೀಘ್ರ ಸಮಿತಿ ರಚನೆ

ನಕಲಿ ಕಲ್ಲು ಕುಟಿಕರ ಪ್ರಮಾಣಪತ್ರಗಳ ಹಾವಳಿಗೆ ಕಡಿವಾಣ ಹಾಕಲು ಕಂದಾಯ, ಪೊಲೀಸ್, ಅರಣ್ಯ, ಗಣಿ ಮತ್ತು ಭೂವಿಜ್ಞಾನ, ಪರಿಸರ, ಆರ್‌ಡಿಪಿಆರ್, ಆಹಾರ ಇಲಾಖೆ, ವಾಣಿಜ್ಯ ತೆರಿಗೆ ವಿಚಕ್ಷಣಾ ದಳ ಹಾಗೂ ಸ್ಥಳೀಯ ಆರ್‌ಐ ಮತ್ತು ವಿಎಗಳನ್ನು ಒಳಗೊಂಡ ಜಂಟಿ ಸಮಿತಿ ರಚಿಸುವುದಾಗಿ ಘೋಷಿಸಿದರು. ಈ ಸಮಿತಿಯು ಮೂರು ದಿನಗಳಲ್ಲಿ ಅರ್ಜಿದಾರರ ಮನೆಗಳಿಗೆ ಖುದ್ದು ಭೇಟಿ ನೀಡಿ ಫೋಟೋ ಸಮೇತ ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್, ಆದಾಯ, ಆಸ್ತಿ ವಿವರ ಹಾಗೂ ಪಾರಂಪರಿಕ ವೃತ್ತಿಯನ್ನು ಪರಿಶೀಲಿಸಿ, ವಾರದೊಳಗೆ ಜಿಲ್ಲಾಮಟ್ಟದ ಸಭೆಗೆ ಸಮಗ್ರ ವರದಿ ಸಲ್ಲಿಸಬೇಕು ಎಂದು ಡಿಸಿ ಎಂ.ಆರ್.ರವಿಕುಮಾರ್ ಆದೇಶಿಸಿದರು.

ಅಕ್ರಮ ಕ್ರಷರ್‌ನಿಂದ ಪಾರಂಪರೆಗೆ ಪೆಟ್ಟು

ವೇಮಗಲ್, ನರಸಾಪುರ ಹಾಗೂ ವಕ್ಕಲೇರಿ ಭಾಗಗಳಲ್ಲಿ ಬೇಕಾಬಿಟ್ಟಿಯಾಗಿ ಕ್ರಷರ್‌ಗಳಿಗೆ ಅನುಮತಿ ನೀಡಿದ್ದು, ಕೋಲಾರ ತಾಲೂಕಿನಲ್ಲಿರುವ ಶೇ. 90 ಕ್ರಷರ್‌ಗಳು ಹೊರರಾಜ್ಯ ಮತ್ತು ಹೊರಜಿಲ್ಲೆಯವರ ಪಾಲಾಗಿವೆ ಎಂಬ ಗಂಭೀರ ವಿಚಾರ ಸಭೆಯಲ್ಲಿ ಚರ್ಚೆಯಾಯಿತು. ಕುರ್ಕಿ ಪಾರಂಪರಿಕ ಬೆಟ್ಟಗಳು, ಕೆರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಗ್ರಾಮಗಳ ಸಮೀಪದಲ್ಲೇ ಅನುಮತಿ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತವಾಯಿತು. ನಿಯಮ ಉಲ್ಲಂಘಿಸಿದ ಕ್ರಷರ್‌ಗಳ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತರುವುದನ್ನು ತಪ್ಪಿಸಲು ಕಂದಾಯ, ಅರಣ್ಯ, ಪರಿಸರ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನೀರಾವರಿ ಇಲಾಖೆಗಳ ಎನ್‌ಒಸಿಗಳನ್ನು ಏಕಕಾಲದಲ್ಲಿ ಹಿಂಪಡೆಯಲು ತೀರ್ಮಾನಿಸಲಾಯಿತು.