ಪ್ರಾಮಾಣಿಕ ಕೆಲಸಗಾರರಿಗೆ ಟಿಕೆಟ್ |Congress

ಮುಂಬರುವ ತಾಪಂ ಮತ್ತು ಜಿಪಂ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಶಾಸಕರ ನಿವಾಸದಲ್ಲಿ ಟೇಕಲ್ ಹೋಬಳಿ 4 ಗ್ರಾಮ ಪಂಚಾಯಿತಿಗಳ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಶಾಸಕ ಕೆ.ವೈ. ನಂಜೇಗೌಡ ಖಡಕ್ ಎಚ್ಚರಿಕೆ
MLA K Y Nanjegouda Meeting
ಟೇಕಲ್ ಬಳಿಯ ಕೊಮ್ಮನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದರು. ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುನಿಲ್ ನಂಜೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಜೆ. ರಾಮಮೂರ್ತಿ, ಕ್ಷೇತ್ರನಹಳ್ಳಿ ವೆಂಕಟೇಶ್ ಗೌಡ, ಹೇಮಮಾಲಿನಿ, ಚಂದ್ರಶೇಖರ್ ಗೌಡ ಇದ್ದರು. MLA K Y Nanjegouda Meeting
Published on: 

ಟೇಕಲ್: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಆಕಾಂಕ್ಷಿಗಳ ಪಟ್ಟಿ ಅಂತಿಮ ಮಾಡಲಾಗುತ್ತಿದೆ. ಪಕ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಮಾತ್ರ ಟಿಕೆಟ್ ನೀಡಲಾಗುವುದು. ಪಕ್ಷದಲ್ಲೇ ಇದ್ದುಕೊಂಡು ದ್ರೋಹ ಎಸಗುವವರಿಗೆ ಗೇಟ್‌ಪಾಸ್ ನೀಡಲಾಗುವುದು ಎಂದು ಶಾಸಕ ಕೆ.ವೈ. ನಂಜೇಗೌಡ ಟಿಕೆಟ್ ಆಕಾಂಕ್ಷಿಗಳಿಗೆ ಎಚ್ಚರಿಕೆ ನೀಡಿದರು.

ಮುಂಬರುವ ತಾಪಂ ಮತ್ತು ಜಿಪಂ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಶಾಸಕರ ನಿವಾಸದಲ್ಲಿ ಟೇಕಲ್ ಹೋಬಳಿ 4 ಗ್ರಾಮ ಪಂಚಾಯಿತಿಗಳ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಮಾತನಾಡಿ, ಟಿಕೆಟ್ ಸಿಗದವರು ಬಂಡಾಯ ಎದ್ದು ಪಕ್ಷಕ್ಕೆ ಹಾನಿ ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಸಿದರು.

ಬಡವರ ಪರ ಪಂಚ ಗ್ಯಾರಂಟಿ ಯೋಜನೆ ತಂದಿದ್ದು, ಈ ಯೋಜನೆಗಳಿಂದ ಬಡವರಿಗೆ ಕೂಲಿ ಕಾರ್ಮಿಕರಿಗೆ ತುಂಬಾ ಅನುಕೂಲವಾಗಿದೆ. ಕಾರ್ಯಕರ್ತರು ಮನೆ-ಮನೆಗೆ ಭೇಟಿ ನೀಡಿ ಮತದಾರರಿಗೆ ಮನವರಿಕೆ ಮಾಡಿಕೊಡಬೇಕು.ಟಿಕೆಟ್ ಆಕಾಂಕ್ಷಿಗಳು ಒಗ್ಗಟ್ಟಿನಿಂದ ಕೆಲಸ ಮಾಡಿ, ಕಾಂಗ್ರೆಸ್ ಗೆಲ್ಲಿಸಬೇಕು. ಕ್ಷೇತ್ರದ ಜಿಲ್ಲಾ ಪಂಚಾಯಿತಿ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.

ಆನೆಪುರ ಹನುಮಂತಪ್ಪ, ವಿನೋದ್ ಗೌಡ, ರಮೇಶ್ ಗೌಡ, ಪ್ರಗತಿ, ಶ್ರೀನಿವಾಸ್, ಸತೀಶ್ ಇತರರಿದ್ದರು.

ಟೇಕಲ್ ಕ್ಷೇತ್ರಕ್ಕೆ ಸುನಿಲ್ ಅಭ್ಯರ್ಥಿ?

ತೀವ್ರ ಪೈಪೋಟಿ ಇರುವ ಟೇಕಲ್ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಶಾಸಕರ ಪುತ್ರ ಸುನಿಲ್ ನಂಜೇಗೌಡ ಅವರನ್ನು ಅಭ್ಯರ್ಥಿ ಎಂದು ಕಾರ್ಯಕರ್ತರೇ ಘೋಷಣೆ ಮಾಡಿ ಜೈಕಾರ ಕೂಗಿದರು. ಪ್ರತಿ ಸ್ಪರ್ಧಿಯಾಗಿದ್ದ ಕ್ಷೇತ್ರನಹಳ್ಳಿ ವೆಂಕಟೇಶ್‌ಗೌಡ ಅವರ ಪತ್ನಿಗೆ ಬೆರೆ ಕ್ಷೇತ್ರದಲ್ಲಿ ಅವಕಾಶ ನೀಡುವುದಾಗಿ ಮಾತುಕತೆ ನಡೆದು ಸಮಾಧಾನಪಡಿಸಿರುವುದರಿಂದ ಸುನಿಲ್ ನಂಜೇಗೌಡಗೆ ಟೇಕಲ್ ಕ್ಷೇತ್ರ ಸುಗಮವಾದಂತಾಗಿದೆ.