ಕೋಲಾರದಲ್ಲಿ ಮಿನಿ ಏರ್‌ಪೋರ್ಟ್!

Kolar Mini Airport
Published on

ಉಡಾನ್ ಯೋಜನೆಯಡಿ ಸ್ಥಾಪಿಸಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಚಿಂತನೆ

ಕಿರುವಾರ ಎಸ್. ಸುದರ್ಶನ್ ಕೋಲಾರ

ಜಿಲ್ಲೆಯಲ್ಲಿ ಮಿನಿ ಏರ್‌ಪೋರ್ಟ್ ಸ್ಥಾಪಿಸುವ ಕಾಲ ಸನ್ನಿಹಿತವಾಗಿದೆ.

ಹೌದು. ಜಿಲ್ಲೆಯಲ್ಲಿ ಕೈಗಾರಿಕೆ ಚಟುವಟಿಕೆಗಳು ಗರಿಗೆದರಿದಂತೆ ಈಗ ಮಿನಿ ಏರ್‌ಪೋರ್ಟ್ ಸ್ಥಾಪಿಸುವ ಚರ್ಚೆ ಮುನ್ನೆಲೆಗೆ ಬಂದಿದೆ.

ಕೋಲಾರಕ್ಕೆ ಸುಮಾರು 65 ಕಿಮೀ ದೂರದಲ್ಲಿ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು, ಒಂದು ತಾಸಿನಲ್ಲಿ ಪ್ರಯಾಣ ಮಾಡಿದರೆ ನಿಲ್ದಾಣ ತಲುಪಬಹುದು. ಆದರೆ, ಇತ್ತೀಚೆಗೆ ವಿಮಾನ ನಿಲ್ದಾಣದ ಮೇಲೆ ಒತ್ತಡ ಹೆಚ್ಚಾಗಿರುವುದರಿಂದ ಜಿಲ್ಲೆಯಲ್ಲಿ ಉಡಾನ್ ಯೋಜನೆಯಡಿ ಮಿನಿ ಏರ್‌ಪೋರ್ಟ್‌ಗೆ ಕೇಂದ್ರ ಒಪ್ಪಿಗೆ ಸೂಚಿಸಿರುವುದು ಜಿಲ್ಲೆಗೆ ವರದಾನವಾಗಿದೆ.

ಜಿಲ್ಲೆಯ ಮಾಲೂರು, ನರಸಾಪುರ, ವೇಮಗಲ್ ಭಾಗದಲ್ಲಿ ರಾಷ್ಟ್ರೀಯ-ಅಂತಾರಾಷ್ಟ್ರೀಯ ಕೈಗಾರಿಕೆಗಳು ತಲೆಯೆತ್ತಿದ್ದು, ವಾಣಿಜ್ಯ, ಸ್ಥಳೀಯ ಅಭಿವೃದ್ಧಿಯೂ ವೇಗ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಕೋಲಾರ ಜಿಲ್ಲೆಯಲ್ಲಿ ನಾಗರಿಕ ವಿಮಾನ ನಿಲ್ದಾಣ ಸ್ಥಾಪಿಸುವ ಚಿಂತನೆ ನಡೆಸಿದೆ. ಇದಕ್ಕೆ ಪೂರಕವಾಗಿ ಜಿಲ್ಲೆಯಿಂದ ಕೇಂದ್ರ ವರದಿ ಪಡೆದುಕೊಂಡಿದೆ.

ಅಧಿಕಾರಿಗಳೊಂದಿಗೆ ಚರ್ಚಿಸಲು ಮನವಿ: ಕೋಲಾರ ತಾಲೂಕು ವೀರಾಪುರ ಸಮೀಪದ ಡಿಆರ್‌ಡಿಒ ಬಳಿ ಈಗಾಗಲೇ ವಿಮಾನ ನಿಲ್ದಾಣವಿದೆ. ಈ ನಿಲ್ದಾಣವನ್ನು 2ನೇ ಮಹಾಯುದ್ಧದ ಸಂದರ್ಭದಲ್ಲಿ ಮಿಲಿಟರಿ ಚಟುವಟಿಕೆಗಳಿಗೆ ನಿರ್ಮಿಸಲಾಗಿದೆ. ಶೀಘ್ರ ವೇಮಗಲ್ನಲ್ಲಿ ಹೆಲಿಕಾಪ್ಟರ್ ತಯಾರಿಕಾ ಘಟಕ ಉದ್ಘಾಟನೆ ಮಾಡಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆಗಮಿಸಲಿದ್ದು, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲು ಸಂಸದ ಎಂ.ಮಲ್ಲೇಶ್ ಬಾಬು ಅವರು ಕೇಂದ್ರಕ್ಕೆ ಮನವಿ ಮಾಡಿದ್ದಾರೆ.

ರಾಜ್ಯಸಭೆಯಲ್ಲಿ ಆದ ಚರ್ಚೆ: ಉಡಾನ್ ಯೋಜನೆಯಡಿ ಜಿಲ್ಲೆಯಲ್ಲಿ ಏರ್‌ಸ್ಟ್ರಿಪ್‌ಗಳಲ್ಲಿ ಸಣ್ಣ ವಿಮಾನಗಳ ಕಾರ್ಯಾಚರಣೆಗಾಗಿ (20 ಸೀಟುಗಳಿಗಿಂತ ಕಡಿಮೆ) ಬಿಡ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯ ಲಹರ್ ಸಿಂಗ್ ಸಿರೋಯಾ ಕೇಳಿರುವ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೊಲ್, ವಿಮಾನ ನಿಲ್ದಾಣಗಳ ಆರಂಭಕ್ಕೆ ಒಪ್ಪಿಗೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೋರಲಾಗಿದೆ. ಭೂಮಿ ಲಭ್ಯತೆ ಖಚಿತಪಡಿಸುವಂತೆ ತಿಳಿಸಲಾಗಿದ್ದು, ಕರ್ನಾಟಕ ಸರ್ಕಾರ ಉಚಿತ ಭೂಮಿ ಒದಗಿಸಬೇಕಿದೆ ಎಂದಿದ್ದಾರೆ. ನಿಲ್ದಾಣದಲ್ಲಿ ಆರಂಭಿಕ ಹಂತದಲ್ಲಿ ಸಣ್ಣ ವಿಮಾನಗಳ ಕಾರ್ಯಾಚರಣೆ ಮಾಡಲಾಗುವುದು. ಆ ಭೂಮಿಯಲ್ಲಿ ಮುಂದೆ ನಿಲ್ದಾಣದ ವಿಸ್ತರಣೆಗೆ ಅವಕಾಶವೂ ಇರಬೇಕು. ಅಂತಹ ಜಾಗ ಗುರುತಿಸುವಂತೆ ಸೂಚಿಸಲಾಗಿದೆ ಎಂಬುದು ಚರ್ಚೆಯಾಗಿದೆ. ಹಾಗೆಯೇ, ಕೋಲಾರ ಮತ್ತು ಬಳ್ಳಾರಿ ಏರ್‌ಸ್ಟ್ರಿಪ್‌ಗಳಲ್ಲಿ ವಿಮಾನಯಾನಗಳ ಕಾರ್ಯಾಚರಣೆಗಾಗಿ ಬಿಡ್ ಸ್ವೀಕರಿಸಲಾಗಿದೆ ಎಂದು ತಿಳಿಸಿರುವುದು ಜಿಲ್ಲೆಯಲ್ಲಿ ಮಿನಿ ವಿಮಾನ ನಿಲ್ದಾಣದ ಬೇಡಿಕೆ ಈಡೇರುವ ಭರವಸೆ ಮೂಡಿಸಿದೆ.

ಪ್ರಯೋಜನೆಗಳೇನು..?* ಉದ್ಯೋಗ ಸೃಷ್ಟಿ.* ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಒತ್ತಡ ಕಡಿಮೆ.* ಸರಕು ಸಾಗಣೆಗೆ ಅನುಕೂಲ.* ಮತ್ತಷ್ಟು ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ.* ಆರ್ಥಿಕ ಬೆಳವಣಿಗೆ ವೃದ್ಧಿ* ವ್ಯಾಪಾರಕ್ಕೆ ಉತ್ತೇಜನ* ದೇಶ, ರಾಜ್ಯಗಳ ನಡುವೆ ಸಂಪರ್ಕ ಸಾಧನೆ.* ವಿದೇಶಿ ಬಂಡವಾಳ ಹೂಡಿಕೆಗೆ ಪೂರಕ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದಾಗ ವಿಚಾರ ಪ್ರಸ್ತಾಪಿಸಲಾಗಿತ್ತು. ಪ್ರಸ್ತಾವ ಸಲ್ಲಿಸಿದರೆ ಮಂಜೂರು ಮಾಡುವ ಭರವಸೆ ನೀಡಿದ್ದಾರೆ. ಶೀಘ್ರ ಡಿಫೆನ್ಸ್ ಅಧಿಕಾರಿಗಳೊಂದಿಗೆ ಚರ್ಚೆಸಿ ಕ್ರಮವಹಿಸಲಾಗುವುದು. ಉಡಾನ್ ಯೋಜನೆಯಡಿ ಮಿನಿ ವಿಮಾನ ನಿಲ್ದಾಣದ ಬಗ್ಗೆ ಚರ್ಚೆಯಾಗಿದೆ. ಸರ್ಕಾರದ ಮೇಲೆ ಒತ್ತಡ ತಂದು ಉದ್ದೇಶ ಈಡೇರಿಸಲು ಪ್ರಯತ್ನಿಸಲಾಗುವುದು. ಎಂ.ಮಲ್ಲೇಶ್‌ಬಾಬು ಸಂಸದ ಮಿನಿ ವಿಮಾನ ನಿಲ್ದಾಣಕ್ಕೆ ಜಾಗ ಬೇಕು ಎಂದು ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಬಂದರೆ ಜಾಗ ಕಲ್ಪಿಸಲಾಗುವುದು. ಇದರಿಂದ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಈ ಭಾಗದಲ್ಲಿ ಕೈಗಾರಿಕೆಗಳು ಹೆಚ್ಚಾಗಿರುವುದರಿಂದ ಸರಕು ಸಾಗಾಣಿಕೆಗೂ ಅನುಕೂಲವಾಗುತ್ತದೆ. ಡಾ.ಎಂ.ಆರ್.ರವಿ ಜಿಲ್ಲಾಧಿಕಾರಿ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net