

ಕುಶಾಲನಗರ
ಕುಶಾಲನಗರ ಸಮೀಪದ ಆನೆಕಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇಪದೇ ಸಂಭವಿಸುತ್ತಿರುವ ಸರಣಿ ಅಪಘಾತಗಳನ್ನು ತಡೆಗಟ್ಟುವ ಹಾಗೂ ರಸ್ತೆ ಸುರಕ್ಷತೆಯನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಾದೇಶಿಕ ಅಧಿಕಾರಿ ಅಭಿಜಿತ್ ಕುಮಾರ್ ಅವರೊಂದಿಗೆ ಬುಧವಾರ ತುರ್ತು ಉನ್ನತ ಮಟ್ಟದ ಸಭೆ ನಡೆಸಿದರು.
ಸಭೆಯಲ್ಲಿ ಆನೆಕಾಡು ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಡುಬAದಿರುವ ರಸ್ತೆ ವಿನ್ಯಾಸದ ಲೋಪದೋಷಗಳು, ಅಪಾಯಕಾರಿ ಅಪಘಾತ ವಲಯಗಳು ಹಾಗೂ ಬೆಳಕಿನ ಅಭಾವವಿರುವ ಡಾರ್ಕ್ ಸ್ಪಾಟ್‌ಗಳ ಕುರಿತು ಸಮಗ್ರ ಪರಿಶೀಲನೆ ಮತ್ತು ಚರ್ಚೆ ನಡೆಸಲಾಯಿತು.
ಆನೆಕಾಡು ಮಾರ್ಗದಲ್ಲಿ ಸಾರ್ವಜನಿಕರು ಮತ್ತು ಪ್ರಯಾಣಿಕರ ಜೀವ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕಿದೆ. ಆದ್ದರಿಂದ ಹೆದ್ದಾರಿ ಪ್ರಾಧಿಕಾರವು ತಕ್ಷಣವೇ ಸೂಕ್ತ ವೈಜ್ಞಾನಿಕ ಪರಿಶೀಲನೆ ನಡೆಸಿ, ಅಗತ್ಯವಿರುವ ಪ್ರಮುಖ ಸ್ಥಳಗಳಲ್ಲಿ ಮುನ್ನೆಚ್ಚರಿಕಾ ಸೂಚನಾ ಫಲಕಗಳು, ರಸ್ತೆ ಸುರಕ್ಷತಾ ಗುರುತುಗಳು ಹಾಗೂ ಸಮರ್ಪಕ ಹೈಮಾಸ್ಟ್ ಬೆಳಕಿನ ವ್ಯವಸ್ಥೆಯನ್ನು ತುರ್ತಾಗಿ ಜಾರಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕರು ಸ್ಪಷ್ಟ ನಿರ್ದೇಶನ ನೀಡಿದರು. ಸಾರ್ವಜನಿಕರ ಜೀವ ಸುರಕ್ಷತೆಗೆ ನಮ್ಮ ಮೊದಲ ಆದ್ಯತೆ. ಅಪಘಾತಗಳನ್ನು ತಡೆಗಟ್ಟಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಮತ್ತು ಸುರಕ್ಷತಾ ಕ್ರಮಗಳನ್ನು ಶೀಘ್ರವಾಗಿ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಡಾ. ಮಂತರ್ ಗೌಡ ಪ್ರತಿಪಾದಿಸಿದರು. ಆನೆಕಾಡು ಹೆದ್ದಾರಿ ವಲಯದಲ್ಲಿ ಶಾಶ್ವತ ರಸ್ತೆ ಸುರಕ್ಷತೆ ಕಂಡುಕೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ, ಪೊಲೀಸ್ ಮತ್ತು ಅರಣ್ಯ ಇಲಾಖೆಗಳು ಪರಸ್ಪರ ಸಮನ್ವಯ ಸಾಧಿಸಿ ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಬೆನ್ನಲ್ಲೇ ಅಪಾಯಕಾರಿ ವಲಯದಲ್ಲಿ ಗುರುವಾರ ಹಂಪ್‌ಗಳನ್ನು ಅಳವಡಿಸುವ ಕಾರ್ಯ ನಡೆಯಿತು.