ಸ್ಥಳೀಯ ಬೆಳೆಗಳ ಸಂರಕ್ಷಣೆ ಹಾಗೂ ಮಣ್ಣಿನ ಆರೋಗ್ಯದ ಬಗ್ಗೆ ಕಾರ್ಯಾಗಾರ

ಸ್ಥಳೀಯ ಬೆಳೆಗಳ ಸಂರಕ್ಷಣೆ ಹಾಗೂ ಮಣ್ಣಿನ ಆರೋಗ್ಯದ ಬಗ್ಗೆ ಕಾರ್ಯಾಗಾರ
ಸ್ಥಳೀಯ ಬೆಳೆಗಳ ಸಂರಕ್ಷಣೆ ಹಾಗೂ ಮಣ್ಣಿನ ಆರೋಗ್ಯದ ಕುರಿತು ನಡೆದ ಕಾರ್ಯಾಗಾರದಲ್ಲಿ ಗರ್ವಾಲೆಯ ಆದಿ ಪೆಪ್ಪರ್ ಡೆಮೊ ಫಾರ್ಮ್ ಆ್ಯಂಡ್ ರಿಸರ್ಚ್ ಸೆಂಟರ್‌ನ ನಾಪಂಡ ಪೂಣಚ್ಚ ಮಾಹಿತಿ ನೀಡಿದರು.
Published on: 

ಮಡಿಕೇರಿ

ಹಳೆಯ ರೋಬಸ್ಟಾ ಕಾಫಿ ತೋಟಗಳನ್ನು ಉಳಿಸಿಕೊಂಡು ಹೊಸ ಹಾಗೂ ಉತ್ತಮ ತಳಿಗಳನ್ನು ಕಸಿ ಮಾಡುವ ಗ್ರಾಫ್ಟಿಕಲ್ಚರ್-ಫ್ಯೂಚರ್ ಕಲ್ಚರ್ ಪದ್ಧತಿ ಸೇರಿದಂತೆ ಸ್ಥಳೀಯ ಬೆಳೆಗಳ ಸಂರಕ್ಷಣೆ ಹಾಗೂ ಮಣ್ಣಿನ ಆರೋಗ್ಯದ ಕುರಿತು ಸೋಮವಾರಪೇಟೆ ತಾಲೂಕು ಗರ್ವಾಲೆಯಲ್ಲಿ ಮಂಗಳವಾರ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು. ಸುಂಟಿಕೊಪ್ಪದ ಆದಿ ಬಯೋಡೈರ‍್ಸಿಟಿ ಕನ್ಸರ್ವೇಷನ್ ಮತ್ತು ಗರ್ವಾಲೆಯ ಆದಿ ಪೆಪ್ಪರ್ ಡೆಮೊ ಫಾರ್ಮ್ ಆ್ಯಂಡ್ ರಿಸರ್ಚ್ ಸೆಂಟರ್ ವತಿಯಿಂದ ಈ ಕಾರ್ಯಾಗಾರ ಏರ್ಪಡಿಸಲಾಗಿತ್ತು.

ಗ್ರಾಮೀಣ ಭಾರತಕ್ಕೆ ಗ್ರಾಮ್ಯ ಜ್ಞಾನವನ್ನು ವರ್ಗಾಯಿಸುವ ವೇದಿಕೆ ಎಂಬ ಧ್ಯೇಯದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಬೆಳೆಗಳ ವೈವಿಧ್ಯತೆ, ಸಂರಕ್ಷಣೆ ಹಾಗೂ ಅವುಗಳ ಮಹತ್ವದ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು.

ಹಳೆಯ ರೋಬಸ್ಟಾ ಕಾಫಿ ತೋಟಗಳನ್ನು ಉಳಿಸಿಕೊಂಡು ಉತ್ತಮ ತಳಿಗಳನ್ನು ಕಸಿ ಮಾಡುವ ವಿಧಾನ, ಹೆಚ್ಚು ನೆರಳಿರುವ ರೋಬಸ್ಟಾ ತೋಟಗಳನ್ನು ಕಸಿ ಮೂಲಕ ಅರೇಬಿಕಾ ಕಾಫಿ ತೋಟಗಳಾಗಿ ಪರಿವರ್ತಿಸುವ ವಿಧಾನ ಹಾಗೂ ಅವುಗಳ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಯಿತು.

ಸೂರ್ಲಬ್ಬಿ ಭಾಗದಲ್ಲಿ ಕಂಡುಬರುವ ಅಪರೂಪದ ದೇಸಿ ಆದಿ ಒಳ್ಳೆ ಮೆಣಸು ತಳಿಯನ್ನು ಕಾರ್ಯಕ್ರಮದಕಲ್ಲಿ ಪರಿಚಯಿಸಲಾಯಿತು. ಈ ವಿಭಿನ್ನ ಮೆಣಸಿನ ತಳಿಯ ಸಂರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ಅದರ ಬೀಜ ಸಂಪತ್ತನ್ನು ಉಳಿಸುವ ಕುರಿತು ತಂಬುಕುತ್ತೀರ ಗಪ್ಪು ಸೋಮಯ್ಯ ಅವರೊಂದಿಗೆ ಸಂವಾದ ನಡೆಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದ ನಿವೃತ್ತ ಸಹಾಯಕ ನಿರ್ದೇಶಕ ಡಾ. ರಾಮಮೂರ್ತಿ ಮಣ್ಣು ಪರೀಕ್ಷೆ, ಮಣ್ಣಿನ ಆರೋಗ್ಯ ಸಂರಕ್ಷಣೆ ಹಾಗೂ ಬೆಳೆಗಳಿಗೆ ಅಗತ್ಯವಿರುವ ಸೂಕ್ತ ಗೊಬ್ಬರಗಳ ಆಯ್ಕೆ ಮತ್ತು ಬಳಕೆಯ ಕುರಿತು ರೈತರಿಗೆ ಸವಿವರ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್ ನಿರ್ದೇಶಕ ನಾಗಚೆಟ್ಟಿರ ಪ್ರವೀಣ್, ನಾಪಂಡ ಪೂಣಚ್ಚ ಮತ್ತಿತರರು ಇದ್ದರು.

ಸುತ್ತಮುತ್ತಲಿನ ಹಲವು ಪ್ರಗತಿಪರ ಕೃಷಿಕರು, ಬೆಳೆಗಾರರು ಹಾಗೂ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಚಿಕ್ಕಮಗಳೂರಿನಿಂದಲೂ ಹಲವು ಬೆಳೆಗಾರರು ಆಗಮಿಸಿ ತರಬೇತಿಯ ಪ್ರಯೋಜನ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net