

ನಾಪೋಕ್ಲು: ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಮೊದಲಿಗೆ ಚೇಲಾವರ ಶಾಲೆಯ ಬಳಿ ಶಾಸಕರ ವಿಶೇಷ ಅನುದಾನದ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಸೇತುವೆ ಉದ್ಘಾಟಿಸಿದರು. ಬಳಿಕ ಗ್ರಾಮದ ಪ್ರಸಿದ್ಧ ಪೊನ್ನೋಲು ಶಾಸ್ತಾವು ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ತಮ್ಮ ಶಾಸಕರ ಅನುದಾನದ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕಡಿಯತ್ನಡ್ ಪೊನ್ನೊಲ ಶಾಸ್ತವು ಪುದಿಯೋದಿ ದೇವಸ್ಥಾನದ ಆವರಣ ರಸ್ತೆ ಉದ್ಘಾಟಿಸಿದರು.
ಇದಕ್ಕೂ ಮುನ್ನ ಪಾರಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡಪಾಲ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮಸ್ಥರು, ಜನಪ್ರತಿನಿಧಿಗಳು ಹಾಗೂ ಪಕ್ಷದ ಪ್ರಮುಖ ಮುಖಂಡರು ಇದ್ದರು.