

ಮಡಿಕೇರಿ
ದೇಶದಲ್ಲಿ ಯುವಶಕ್ತಿಯನ್ನು ಬೆಳೆಸುವ ಹಾಗೂ ಸಂಘಟಿಸುವ ಕಾರ್ಯವಾಗಬೇಕಿದ್ದು, ಸದೃಢ ಭಾರತದ ನಿರ್ಮಾಣಕ್ಕೆ ಯುವಕರ ಪಾತ್ರ ಅತ್ಯಂತ ಅಗತ್ಯವಾಗಿದೆ ಎಂದು ಸಮಾಜ ಸೇವಕ ಅವರೆಮಾದಂಡ ಶರಣ್ ಪೂಣಚ್ಚ ಹೇಳಿದರು. ಮೂರ್ನಾಡು ಪಿಎಂಶ್ರೀ ಕೆಪಿಎಸ್ ಸರ್ಕಾರಿ ಪ್ರೌಢಶಾಲೆಯ ಮೈದಾನ ಮತ್ತು ನಾಡ್ಮಂದ್ನಲ್ಲಿ ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಮಂಗಳವಾರ (ಅ.20) ಆಯೋಜಿಸಲಾಗಿದ್ದ 33ನೇ ವರ್ಷದ ಆಯುಧ ಪೂಜಾ ಮಹೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಲ್ಲಾ ಧರ್ಮದವರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಆಚರಿಸುತ್ತಿರುವುದು ಶ್ಲಾಘನೀಯ. ಸಂಘದ ಸದಸ್ಯರು ಸಮಾಜಮುಖಿ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡುತ್ತಾ, ಮೂರ್ನಾಡಿನ ಸುತ್ತಮುತ್ತಲಿನ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಎಸ್. ಸುರೇಶ್ ನಂಜಪ್ಪ ಮಾತನಾಡಿ, ಆಯುಧಪೂಜೆ, ವಿಜಯದಶಮಿಯಂತಹ ನಾಡಹಬ್ಬಗಳು ಸಮಾಜದಲ್ಲಿ ಒಗ್ಗಟ್ಟನ್ನು ಮೂಡಿಸುವುದಲ್ಲದೆ, ದೇಶದ ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿಯೂ ಸಹಕಾರಿಯಾಗಿವೆ. ಮೂರ್ನಾಡಿನ ಆಯುಧಪೂಜಾ ಕಾರ್ಯಕ್ರಮವು ಇಡೀ ಜಿಲ್ಲೆಯಲ್ಲೇ ವಿಶೇಷ ಗುರುತಿಸಿಕೊಂಡಿದೆ ಎಂದು ಹೇಳಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಸ್ವರ್ಣಲತಾ ಮಾತನಾಡಿ, ನವರಾತ್ರಿಯು ಶಕ್ತಿಯ ಪ್ರತೀಕ ಹಾಗೂ ಸ್ತ್ರೀಶಕ್ತಿಯ ಸಂಕೇತ. ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ ಎಂದರು.
ಮಡಿಕೇರಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಹೆಚ್.ವಿ. ಚಂದ್ರಶೇಖರ್ ಸಭೆಯನ್ನುದ್ದೇಶಿಸಿ ಮಾತನಾಡಿ, ಸುಮಧುರ ಗೀತೆಯನ್ನು ಹಾಡುವ ಮೂಲಕ ಸಾರ್ವಜನಿಕರನ್ನು ರಂಜಿಸಿದರು.
ಸಂಭ್ರಮಾಚರಣೆಯ ಭಾಗವಾಗಿ ಅಲಂಕೃತ ವಾಹನಗಳಿಗೆ ಸಾಮೂಹಿಕ ಪೂಜೆ ನೆರವೇರಿದ ನಂತರ ಮುಖ್ಯ ರಸ್ತೆಯಲ್ಲಿ ಭವ್ಯ ಮೆರವಣಿಗೆ ನಡೆಯಿತು. ಮಳೆಯ ನಡುವೆಯೂ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಾರ್ವಜನಿಕರು ಮೆರವಣಿಗೆಯನ್ನು ಕಣ್ತುಂಬಿಕೊAಡರು.
ಮೆರವಣಿಗೆಯಲ್ಲಿ ಗಜಾನನನಿಂದ ಮೂಕಾಷುರನ ವಧೆ, ಕೊಡಗಿನ ಕಾವೇರಿ ಮಾತೆ, ದೇವಿಯಿಂದ ತಾರಾಕಾಸುರನ ಸಂಹಾರ, ಅರ್ಧನಾರೀಶ್ವರ ದರ್ಶನಂ, ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ, ಆನೆ ದಾಳಿಗೆ ರೈತನ ಬಲಿ, ಶ್ರೀಕೃಷ್ಣನ ಸಮುದ್ರ ಮಂಥನ, ಬಡವರಿಗಾಗಿ ನಿವೇಶನ ಹೋರಾಟ, ಕಾಳಿಂಗ ಮರ್ದನ, ಕರಾವಳಿ ಕಲೆ ಯಕ್ಷಗಾನ, ಕೊಳಲು ಕೃಷ್ಣ ಸೇರಿದಂತೆ ಹಲವು ಜಾಗೃತಿ ಹಾಗೂ ಪೌರಾಣಿಕ ಸ್ತಬ್ದಚಿತ್ರಗಳು ಗಮನಸೆಳೆದವು. ಈ ಬಾರಿ ವಿಶೇಷವಾಗಿ ಬೆಳ್ತಂಗಡಿಯ ಶೆಟ್ಟಿ ಬೊಂಬೆ ಬಳಗದಿಂದ ನಡೆದ ಬೊಂಬೆ ಕುಣಿತ ಮತ್ತು ವಾದ್ಯಗೋಷ್ಠಿ ಮೆರವಣಿಗೆಗೆ ವಿಶೇಷ ಮೆರಗು ನೀಡಿತು.
ಸಭಾ ಕಾರ್ಯಕ್ರಮದಲ್ಲಿ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಜಾನಿಶ ಬೋಜಮ್ಮ, ಬೃಂದ ಮತ್ತು ಪುಣ್ಯ, ನಿವೃತ್ತ ಶಿಕ್ಷಕ ಹೆಚ್.ಬಿ. ಕೃಷ್ಣಪ್ಪ ಹಾಗೂ ಮಾಜಿ ಸೈನಿಕ ಚೆಟ್ಟಿಮಾಡ ಬಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು. ವಿವಿಧ ವಿಭಾಗಗಳ ಅಲಂಕೃತ ವಾಹನಗಳಿಗೆ ಹಾಗೂ ಅಂಗಡಿಗಳಿಗೆ ನಗದು ಬಹುಮಾನ ಮತ್ತು ಪಾರಿತೋಷಕಗಳನ್ನು ವಿತರಿಸಲಾಯಿತು. ನೆರೆದಿದ್ದ ಸಾರ್ವಜನಿಕರಿಗೆ ಊಟೋಪಚಾರ ಹಾಗೂ ಮಂಗಳೂರಿನ ಪುರಾವ್ ಮೆಲೋಡಿಸ್ ಅವರಿಂದ ರಸಮಂಜರಿ, ಡೀಮ್ ಡ್ಯಾನ್ಸ್ ಟೀಮ್ನಿಂದ ನೃತ್ಯ ಮತ್ತು ಶರಣ್ ಅವರಿಂದ ಮಿಮಿಕ್ರಿ ಕಾರ್ಯಕ್ರಮ ನಡೆಯಿತು.
ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಬಿ.ಬಿ. ಅಶ್ವಥ್ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿವಿಧ ಸಂಘ-ಸAಸ್ಥೆಗಳ ಪ್ರಮುಖರು, ಉದ್ಯಮಿಗಳು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.