

ಕುಶಾಲನಗರ
ಕ್ರೀಡೆ ಮತ್ತು ಜೀವನದಲ್ಲಿ ಸಫಲತೆ ಕಾಣಲು ಕಠಿಣ ಪರಿಶ್ರಮ, ಸಮರ್ಪಣಾ ಭಾವ ಮತ್ತು ಬದ್ಧತೆಯೇ ಮೂಲಾಧಾರ ಎಂದು ಕೊಡಗು ಸೈನಿಕ ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ಹೇಳಿದರು. ಸಮೀಪದ ಕೂಡಿಗೆಯಲ್ಲಿ ಇರುವ ಕೊಡಗು ಸೈನಿಕ ಶಾಲೆಯ ಮರಿಯಪ್ಪ ಕೆಂಪಯ್ಯ ಫುಟ್‌ಬಾಲ್ ಮೈದಾನದಲ್ಲಿ ನಡೆಯುತ್ತಿರುವ ಅಖಿಲ ಭಾರತ ಸೈನಿಕ ಶಾಲೆಗಳ ಗ್ರೂಪ್ ಹೆಚ್ ರಾಷ್ಟ್ರೀಯ ಕ್ರೀಡಾಕೂಟ-2026ರ ಉದ್ಘಾಟನಾ ಸಮಾರಂಭದಲ್ಲಿ ಮಂಗಳವಾರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ದಕ್ಷಿಣ ಭಾರತದ ವಿವಿಧ ಸೈನಿಕ ಶಾಲೆಗಳ ಯುವ ಕ್ರೀಡಾಪಟುಗಳನ್ನು ಒಂದೆಡೆ ಸೇರಿಸಿ ಕ್ರೀಡಾಸ್ಫೂರ್ತಿ, ಶಿಸ್ತು ಮತ್ತು ಸೌಹಾರ್ದತೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಮೈದಾನದ ಒಳಗೆ ಹಾಗೂ ಹೊರಗೆ ಪರಸ್ಪರ ಕಲಿಯಲು, ವ್ಯಕ್ತಿತ್ವ ನಿರ್ಮಾಣ, ನಾಯಕತ್ವದ ಗುಣಗಳು ಮತ್ತು ಪರಸ್ಪರ ಗೌರವವನ್ನು ಬೆಳೆಸಿಕೊಳ್ಳಲು ಈ ವೇದಿಕೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸೈನಿಕ ಶಾಲಾ ಪರಿವಾರದಲ್ಲಿ ಶಾಶ್ವತ ಒಡನಾಟ ಹಾಗೂ ಕ್ರೀಡೆಗಳ ಬಗ್ಗೆ ಸಾಮೂಹಿಕ ಬದ್ಧತೆ ಬೆಳೆಸಿಕೊಳ್ಳಬೇಕು ಎಂದರು.
ಉದ್ಘಾಟನಾ ಸಮಾರಂಭದ ಪ್ರಮುಖ ಆಕರ್ಷಣೆಯಾಗಿ ಭಾಗವಹಿಸಿದ ತಂಡಗಳ ಪಥಸಂಚಲನ ನಡೆಯಿತು. ಶಾಲೆಯ ಧ್ವಜವನ್ನು ಹಿಡಿದು ಮುನ್ನಡೆಸಿದ ಶಾಲೆಯ ವಿದ್ಯಾರ್ಥಿ ನಾಯಕ ಚಿನ್ಮಯ್ ಮತ್ತು ಪ್ಲಕಾರ್ಡ್ ಹಿಡಿದಿದ್ದ ದೀಪ್ತಿ ಅವರ ನೇತೃತ್ವದ ತುಕಡಿ ಪಥಸಂಚಲನವನ್ನು ನಡೆಸಿತು. ಈ ಪಥಸಂಚಲನದಲ್ಲಿ ಯುಪಿಎಸ್‌ಸಿ, ಎನ್‌ಡಿಎ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದ 12ನೇ ತರಗತಿಯ 24 ವಿದ್ಯಾರ್ಥಿಗಳನ್ನು ಒಳಗೊಂಡ ವಿಶೇಷ ಪ್ಲಟೂನ್ ಎಲ್ಲರ ಗಮನಸೆಳೆಯಿತು. ಶಾಲೆಯ ಒಟ್ಟು 54 ಕೆಡೆಟ್‌ಗಳಲ್ಲಿ 24 ಕೆಡೆಟ್‌ಗಳು ಆಯ್ಕೆಯಾಗಿರುವುದು ಕೊಡಗು ಸೈನಿಕ ಶಾಲೆಯ ಇತಿಹಾಸದಲ್ಲೇ ದಾಖಲಾದ ಗರಿಷ್ಠ ಸಂಖ್ಯೆಯಾಗಿದೆ. ಸಶಸ್ತ್ರ ಪಡೆಗಳಲ್ಲಿ ಭವಿಷ್ಯ ಕಂಡುಕೊಳ್ಳಲು ಶ್ರಮಿಸಿದ ವಿದ್ಯಾರ್ಥಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿಯ ಪೂರ್ಣ ಸಮರ್ಪಣೆಗೆ ಈ ಸಾಧನೆ ಸಾಕ್ಷಿಯಾಗಿದೆ ಎಂದು ಪ್ರಾಂಶುಪಾಲರು ಹೇಳಿದರು.
ಈ ಕ್ರೀಡಾಕೂಟದಲ್ಲಿ ದಕ್ಷಿಣ ಭಾರತದ ಪ್ರಮುಖ 11 ಸಂಸ್ಥೆಗಳು ಪಾಲ್ಗೊಳ್ಳುತ್ತಿವೆ ಕೊಡಗು ಸೈನಿಕ ಶಾಲೆ, ಮೈಸೂರಿನ ವಿವೇಕ ಸ್ಕೂಲ್ ಆಫ್ ಎಕ್ಸಲೆನ್ಸ್ ಸೈನಿಕ ಶಾಲೆ, ತಮಿಳುನಾಡಿನ ಅಮರಾವತಿನಗರ ಸೈನಿಕ ಶಾಲೆ, ತೂತುಕುಡಿಯ ದಿ ವಿಕಾಸ ಸೈನಿಕ ಶಾಲೆ., ವಲ್ಲಭ ವಿದ್ಯಾಲಯ ಸೈನಿಕ ಶಾಲೆ ನಾಮಕ್ಕಲ್‌ನ ಎಸ್‌ಆರ್‌ಐಎಸ್‌ಪಿಕೆ ಪಬ್ಲಿಕ್ ಸೀನಿಯರ್ ಸೆಕೆಂಡರಿ ಸೈನಿಕ ಶಾಲೆ, ಆಂಧ್ರಪ್ರದೇಶದ ಕಲಿಕಿರಿ ಸೈನಿಕ ಶಾಲೆ, ಕೇರಳದ ಕಾಸರಗೋಡು, ಕಾಳಕೊಟ್ಟಂ ಸೈನಿಕ ಶಾಲೆ, ಕೋಯಿಕ್ಕೋಡ್‌ನ ವೇದವ್ಯಾಸ ವಿದ್ಯಾಲಯ ಹಿರಿಯ ಮಾಧ್ಯಮಿಕ ಶಾಲೆ, ಎರ್ನಾಕುಲಂನ ಶ್ರೀ ಶಾರದಾ ವಿದ್ಯಾಲಯ ಸೈನಿಕ ಶಾಲೆ, ಆಲಪ್ಪುಳದ ವಿದ್ಯಾಧೀರ ವಿದ್ಯಾಪೀಠಂ ಸೆಂಟ್ರಲ್ ಸೈನಿಕ ಶಾಲೆಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿವೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕ್ರೀಡಾಜ್ಯೋತಿ ಬೆಳಗಿಸಿ, ರಿಲೇ ಓಟದೊಂದಿಗೆ ಕ್ರೀಡಾಪಟುಗಳು ನ್ಯಾಯಯುತ ಆಟ ಮತ್ತು ಏಕತೆಯ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಅ. 13ರಿಂದ 18ರವರೆಗೆ ಆರು ದಿನಗಳ ಕಾಲ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಬಾಸ್ಕೆಟ್‌ಬಾಲ್, ವಾಲಿಬಾಲ್, ಅಥ್ಲೆಟಿಕ್ಸ್ ಹಾಗೂ ಚರ್ಚಾ ಸ್ಪರ್ಧೆ ಮತ್ತು ರಸಪ್ರಶ್ನೆ ಸ್ಪರ್ಧೆಗಳು ನಡೆಯಲಿವೆ.
ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಆಡಳಿತ ಅಧಿಕಾರಿ ಸ್ಕ್ವಾಡ್ರನ್ ಲೀಡರ್ ದೀಪಕ್ ನಾಯಕ್, ಶಾಲಾ ವೈದ್ಯಾಧಿಕಾರಿ ಡಾ. ಅಶೋಕ್ ಕುಮಾರ್, ಹಿರಿಯ ಶಿಕ್ಷಕ ಎನ್. ವಿಬಿನ್ ಕುಮಾರ್, ಎನ್‌ಸಿಸಿ ಅಧಿಕಾರಿಗಳು, ಬೋಧಕ-ಬೋಧಕೇತರ ಸಿಬ್ಬಂದಿ, ತರಬೇತುದಾರರು ಮತ್ತು ವಿವಿಧ ತಂಡಗಳ ವ್ಯವಸ್ಥಾಪಕರು ಉಪಸ್ಥಿತರಿದ್ದರು.