

ಗೋಣಿಕೊಪ್ಪಲು
ಗಾಂಧೀಜಿ ಹಾಗೂ ಶಾಸ್ತ್ರಿಯವರ ಸರಳ ಬದುಕು, ಹೋರಾಟದ ಹಾದಿ ಮತ್ತು ದೇಶದ ಬಗ್ಗೆ ಅವರಿಗಿದ್ದ ಬದ್ಧತೆಯನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡುಬೀಟಿ ಹೇಳಿದರು. ಶಾಲೆಯಲ್ಲಿ ಶುಕ್ರವಾರ ನಡೆದ ಮಹಾತ್ಮ ಗಾಂಧೀಜಿ ಹಾಗೂ ದೇಶದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಇಬ್ಬರು ಮಹನೀಯರ ಆದರ್ಶಗಳು ನಮ್ಮ ಬದುಕಿಗೆ ಬೆಳಕಾಗಲಿದ್ದು, ಮಹನೀಯರ ಜೀವನಚರಿತ್ರೆಯನ್ನು ಅರಿತುಕೊಳ್ಳುವುದು ಇಂದಿನ ಪೀಳಿಗೆಯ ಜವಾಬ್ದಾರಿಯಾಗಿದೆ. ಗಾಂಧೀಜಿಯವರ ಸತ್ಯ, ಅಹಿಂಸೆ, ಸ್ವಚ್ಛತೆ ಹಾಗೂ ಸಾಮಾಜಿಕ ಸಮಾನತೆಯ ತತ್ವಗಳನ್ನು ಸ್ಮರಿಸಿದ ಅವರು, ಲಾಲ್ ಬಹದ್ದೂರ್ ಶಾಸ್ತ್ರಿಯವರು ರೈಲ್ವೆ ಸಚಿವರಾಗಿದ್ದಾಗ ಸಂಭವಿಸಿದ ಅಪಘಾತದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ ಘಟನೆಯನ್ನು ನೆನಪಿಸಿ, ಸಾರ್ವಜನಿಕ ಜೀವನದಲ್ಲಿ ನೈತಿಕತೆ ಮತ್ತು ಹೊಣೆಗಾರಿಕೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಶಾಲೆಯ ಮುಖ್ಯೋಪಾಧ್ಯಾಯ ಹೆಚ್.ಕೆ. ಕುಮಾರ್ ಮಾತನಾಡಿ, ಕೊಡಗಿನಲ್ಲೂ ಗಾಂಧೀಜಿಯವರ ವಿಚಾರಗಳ ಪ್ರಭಾವ ಅಪಾರವಾಗಿತ್ತು. ಕೊಡಗಿನ ಲೇಖಕಿ ಗೌರಮ್ಮನವರು ಗಾಂಧೀಜಿಯವರಿAದ ಪ್ರೇರಿತರಾಗಿ ತಮ್ಮ ಒಡವೆಗಳನ್ನು ಸ್ವಾತಂತ್ರ‍್ಯ ಹೋರಾಟಕ್ಕೆ ದಾನ ಮಾಡಿದ್ದರು. ಇಂತಹ ಸ್ಫೂರ್ತಿದಾಯಕ ಇತಿಹಾಸವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಮಹನೀಯರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಎಸ್‌ಡಿಎಂಸಿ ಸದಸ್ಯರು ಶಾಲಾ ಆವರಣ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಅಭಿಯಾನ ನಡೆಸಿದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ದಿವ್ಯ, ಸದಸ್ಯೆ ಅನಿತಾ, ಶಿಕ್ಷಕರಾದ ಜೋಸ್ಲಿಯ, ಇಂದಿರಾ, ದಮಯಂತಿ, ಅನಿತಾ ಕುಮಾರಿ, ಯಶ್ವಿನಿ, ಅರ್ಷಿಯ, ಕ್ಲೆಮೆಂಟಿನ್, ಸಹನಾ, ಶಾರದಾ, ನಾಗರಾಜು, ಸ್ನೇಹ, ಕಾವೇರಮ್ಮ, ಮಂಜುಳಾ, ಸಿದ್ದರಾಜು, ಪೂಜಾ, ಪಾರ್ವತಿ, ಕಚೇರಿ ಸಿಬ್ಬಂದಿ ಕೀರ್ತಿ, ಪೂಜಾ ಹಾಗೂ ಅಡುಗೆ ಸಿಬ್ಬಂದಿ ಇದ್ದರು.