ಬೆಳೆಗಾರರ ಅಭಿವೃದ್ಧಿಗೆ ವಿಶೇಷ ಒತ್ತು

ಬೆಳೆಗಾರರ ಅಭಿವೃದ್ಧಿಗೆ ವಿಶೇಷ ಒತ್ತು
ಕಾಫಿ ಸೇವನೆ ಮೂಲಕ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕಾಫಿ ದಸರಾ ಉದ್ಘಾಟಿಸಿದರು. ಎಚ್.ಟಿ. ಅನಿಲ್, ಅಂಬೆಕಲ್ ಕುಶಾಲಪ್ಪ, ಅರುಣ್ ಶೆಟ್ಟಿ, ಚುಮ್ಮಿ ದೇವಯ್ಯ ಮತ್ತಿತರರು ಇದ್ದರು.
Published on: 

ಮಡಿಕೇರಿ

ಕೊಡಗಿನಲ್ಲಿ ಕಾಫಿ ದಸರಾ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮೂಡಿಬಂದಿದ್ದು, ಕಾಫಿ ಬೆಳೆಗಾರರ ಮತ್ತು ರೈತರ ಅಭಿವೃದ್ಧಿಗೆ ಹಾಗೂ ಅವರ ಕೃಷಿ ಪದ್ಧತಿಯನ್ನು ಮತ್ತಷ್ಟು ಸುಧಾರಿಸಲು ವಿಶೇಷ ಒತ್ತು ನೀಡಲಾಗುತ್ತಿದೆ ಎಂದು ಮಡಿಕೇರಿ ಶಾಸಕ ಮಂತರ್ ಗೌಡ ಹೇಳಿದ್ದಾರೆ. ಮಡಿಕೇರಿ ನಗರ ದಸರಾ ಸಮಿತಿ ಮತ್ತು ಕೊಡಗು ಕಾಫಿ ಬೆಳೆಗಾರರ ಸಂಘದ ವತಿಯಿಂದ ಇಲ್ಲಿನ ಗಾಂಧಿ ಮೈದಾನದಲ್ಲಿ ಏರ್ಪಡಿಸಿರುವ ಕಾಫಿ ದಸರಾ ಅಂಗವಾಗಿ ತೆರೆದಿರುವ ಮಳಿಗೆಗಳನ್ನು ಮಂಗಳವಾರ ಸಂಜೆ ಉದ್ಘಾಟಿಸಿ ಮಾತನಾಡಿದರು.

ಕಾಫಿ ದಸರಾ ಮುಖಾಂತರ ರೈತರು ಮತ್ತು ತೋಟಗಾರಿಕೆಯಲ್ಲಿ ತೊಡಗಿರುವ ಪ್ರಮುಖರಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತೋಟಗಾರರು ಮತ್ತು ಬೆಳೆಗಾರರಿಗೆ ವೈಜ್ಞಾನಿಕ ಕೃಷಿ ಪದ್ಧತಿಗಳ ಕುರಿತು ಮಾಹಿತಿ ನೀಡಲು ವಿಶೇಷ ಸಂವಾದ ಮತ್ತು ತರಬೇತಿ ಅಧಿವೇಶನಗಳನ್ನು ಏರ್ಪಡಿಸಲಾಗಿದೆ.  

ಕೊಡಗು ಜಿಲ್ಲೆಯಾದ್ಯಂತ ನರ್ಸರಿ ಸೇರಿದಂತೆ ಕೆಫೆಗಳನ್ನು ನಡೆಸುವವರಿಗೂ ಪ್ರೋತ್ಸಾಹ ನೀಡುವ ಮೂಲಕ ಸಂಪೂರ್ಣ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶ ಹೊಂದಲಾಗಿದೆ.  

ಈ ಬಾರಿಯ ಕಾಫಿ ದಸರೆಯಲ್ಲಿ ಸುಮಾರು 55ಕ್ಕೂ ಅಧಿಕ ಮಳಿಗೆಗಳು ಭಾಗವಹಿಸಿದ್ದು, ಕಾಫಿ ಬೋರ್ಡ್ ಮತ್ತು ಸಿಪಿಸಿಆರ್‌ಐ ಸೇರಿದಂತೆ ವಿವಿಧ ಪ್ರಮುಖ ಅಂಗಡಿಗಳು ಪಾಲ್ಗೊಂಡಿವೆ.  ಕಾಫಿ ದಸರೆಯನ್ನು ಮತ್ತಷ್ಟು ವಿಭಿನ್ನವಾಗಿ ಹಾಗೂ ಅರ್ಥಪೂರ್ಣವಾಗಿ ಮುಂದುವರಿಸಿಕೊಂಡು ಹೋಗಲಾಗುವುದು. ಬುಧವಾರ (ಅ.14) ನಡೆಯುವ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಹೆಚ್ಚು ಸಂಖ್ಯೆಯಲ್ಲಿ ರೈತರು ಹಾಗೂ ಕಾಫಿ ಪ್ರೇಮಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಇದೇ ವೇಳೆ ಮಡಿಕೇರಿ ನಗರದ 60ಕ್ಕೂ ಹೆಚ್ಚು ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಮಾತನಾಡಿದ ಡಾ.‌ಮಂತರ್ ಗೌಡ, ನಗರದ ಸ್ವಚ್ಛತೆಯನ್ನು ಕಾಪಾಡುವಲ್ಲಿ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿ ಸಲ್ಲಿಸುತ್ತಿರುವ ನಿರಂತರ ಸೇವೆಗೆ ಬೆಲೆ ಕಟ್ಟಲಾಗದು. ಬೇರೆ ಬೇರೆ ರೀತಿಯ ವ್ಯವಸ್ಥೆಗಳಿದ್ದರೂ, ಪೌರಕಾರ್ಮಿಕರ ಸೇವೆಯ ತೃಪ್ತಿಯನ್ನು ಬೇರೆ ಯಾವುದರೊಂದಿಗೂ ಹೋಲಿಸಲು ಸಾಧ್ಯವಿಲ್ಲ.  ವರ್ಷದ 365 ದಿನವೂ ಅವರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುತ್ತಾರೆ. ಅವರ ಮೇಲಿನ ಕೆಲಸದ ಭಾರವನ್ನು ಕಡಿಮೆ ಮಾಡಲು ನಮ್ಮ ಮನೆಯಿಂದಲೇ ಸ್ವಚ್ಛತೆ ಆರಂಭವಾಗಬೇಕು.  

ಮಡಿಕೇರಿ ನಗರದಲ್ಲಿ ಕಸ ನಿರ್ವಹಣೆಯ ಸಮಸ್ಯೆ ಇದ್ದು, ವಾರಾಂತ್ಯದ ರಜೆಗಳು ಹಾಗೂ ಹಬ್ಬಗಳ ಸಂದರ್ಭದಲ್ಲಿ ಪ್ರವಾಸಿಗರಿಂದ ಕಸದ ಸಮಸ್ಯೆ ಹೆಚ್ಚಾಗುತ್ತಿದೆ.  ಅಕ್ಟೋಬರ್ 21ರಂದು ದಸರಾ ಮುಕ್ತಾಯಗೊಳ್ಳಲಿದ್ದು, ಅಕ್ಟೋಬರ್ 22ರಂದು ಸಮಿತಿಯ ಸದಸ್ಯರು ಹಾಗೂ ವಿವಿಧ ಸಂಘಟನೆಗಳು ಎಲ್ಲರೂ ಸೇರಿಕೊಂಡು ಸ್ವಚ್ಛತಾ ಕಾರ್ಯಕ್ರಮದಲ್ಲಿ ಕೈಜೋಡಿಸಲಿದ್ದಾರೆ ಎಂದು ಹೇಳಿದರು.  ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ನಗರ ದಸರಾ ಸಮಿತಿ‌ ಕಾರ್ಯಾಧ್ಯಕ್ಷ

ಬಿ‌.ಕೆ. ಅರುಣ್ ಕುಮಾರ್, ಉಪಾಧ್ಯಕ್ಷ ಮಹೇಶ್ ಜೈನಿ, ಖಜಾಂಚಿ ಸಬಿತಾ, ಕಾಫಿ ದಸರಾ ಸಂಚಾಲಕ  ಎಚ್.ಟಿ. ಅನಿಲ್ ಮತ್ತಿತರರು ಇದ್ದರು.

ಕಾಫಿ, ಕಾಫಿ ಉಪ ಉತ್ಪನ್ನಗಳು, ಕಾಫಿ ಮೌಲ್ಯವರ್ಧಿತ ಉತ್ಪನ್ನಗಳು, ಕೃಷಿ ಉಪಕರಣಗಳು, ಮೀನುಗಾರಿಕೆ, ಕೃಷಿ, ಕಾಫಿ ಬೆಳೆಗಾರರ ಸಂಘ, ವಿವಿಧ ಸ್ವಸಹಾಯ ಸಂಘಗಳು ಸೇರಿದಂತೆ ವಿವಿಧ ಮಳಿಗೆಗಳನ್ನು ಕಾಫಿ ದಸರಾ ಅಂಗವಾಗಿ ತೆರೆಯಲಾಗಿದೆ. ಪ್ರತಿಯೊಂದು ಮಳಿಗೆಗೂ ಭೇಟಿ ನೀಡಿದ ಶಾಸಕ ಡಾ. ಮಂತರ್ ಗೌಡ ಆಸಕ್ತಿಯಿಂದ ವೀಕ್ಷಿಸಿದರಲ್ಲದೆ ಮಾಹಿತಿಗಳನ್ನು ಪಡೆದುಕೊಂಡರು. 2 ವರ್ಷವೂ ದಸರಾ ಯಶಸ್ವಿಯಾಗಿದ್ದು ಈ ವರ್ಷವೂ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಮುಂದೆಯೂ ಕಾಫಿ ದಸರಾ ಮುಂದುವರಿಯಬೇಕು ಎಂದು ಡಾ. ಮಂತರ್ ಗೌಡ ಇದೇ ಸಂದರ್ಭ ಆಶಯ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net