

ಮಡಿಕೇರಿ
ಮಕ್ಕಳಿಗೆ ಹಲವೆಡೆ ದಸರಾ ರಜೆ ಆರಂಭವಾಗಿರುವAತೆಯೇ ಕೊಡಗಿನ ಕಡೆಗೆ ಪ್ರವಾಸಿಗರ ದಂಡು ಆಗಮಿಸುತ್ತಿದೆ. ವಾರಾಂತ್ಯದಲ್ಲAತೂ ಸಾಮಾನ್ಯಕ್ಕಿಂತ 2-3 ಪಟ್ಟು ಪ್ರವಾಸಿಗರು ಜಿಲ್ಲೆಯಲ್ಲಿ ಕಂಡುಬರುತ್ತಿದ್ದಾರೆ. ಮುಂದೆ ಸಾಲು ಸಾಲು ರಜೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ. ಈ ಮಧ್ಯೆ ಕೊಡಗಿಗೆ ಆಗಮಿಸುವ ಪ್ರವಾಸಿಗರು ಅದರಲ್ಲೂ ಮಹಿಳಾ ಪ್ರವಾಸಿಗರ ಸುರಕ್ಷತೆಗೆ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದ ಕರ್ನಾಟಕದ ಕಾಶ್ಮೀರ ಕೊಡಗಿನಲ್ಲಿ ವಿಶೇಷವಾಗಿ ಮಹಿಳಾ ಪ್ರವಾಸಿಗರ ಭದ್ರತೆ ಮತ್ತು ಸುರಕ್ಷತೆಗೆ ಸಂಬAಧಿಸಿದAತೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಮಹತ್ವದ ಮತ್ತು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಏಪ್ರಿಲ್‌ನಲ್ಲಿ ಹೋಂಸ್ಟೇ ಒಂದರಲ್ಲಿ ವಿದೇಶಿ ಪ್ರವಾಸಿ ಮಹಿಳೆ ಮೇಲೆ ನಡೆದಿದೆ ಎನ್ನಲಾಗುತ್ತಿರುವ ಲೈಂಗಿಕ ಕಿರುಕುಳ ಪ್ರಕರಣ, ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ತೆರಳಿದ್ದ ಯುವತಿ ನಾಪತ್ತೆ ಪ್ರಕರಣ ಹಾಗೂ ದುಬಾರೆಯಲ್ಲಿ ಆನೆದಾಳಿಗೆ ಪ್ರವಾಸಿ ಮಹಿಳೆ ಮೃತಪಟ್ಟ ಘಟನೆಗಳನ್ನು ಗಂಭೀರವಾಗಿ ತೆಗೆದುಕೊಂಡಿರುವ ಸರ್ಕಾರ ಈಗ ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಿದೆ.
ಜಿಲ್ಲೆಯಲ್ಲಿ ಅನುಮತಿ ಇಲ್ಲದೆ ನಡೆಯುತ್ತಿರುವ ಸಾವಿರಾರು ಅಕ್ರಮ ಹೋಂಸ್ಟೇಗಳಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸುತ್ತಿವೆ. ನೋಂದಾಯಿಸದ ಅಥವಾ ನಿಯಮ ಉಲ್ಲಂಘಿಸಿದ ಹೋಂಸ್ಟೇಗಳ ಪರವಾನಗಿ ರದ್ದುಗೊಳಿಸಿ, ತಕ್ಷಣವೇ ಬಂದ್ ಮಾಡಲು ಸರ್ಕಾರ ಆದೇಶಿಸಿದೆ.
ಆನ್‌ಲೈನ್ ಬುಕಿಂಗ್ ಪ್ಲಾಟ್‌ಫಾರ್ಮ್ಗಳಲ್ಲಿ ಸರ್ಕಾರಿ ನೋಂದಣಿ ಸಂಖ್ಯೆ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ಅಕ್ರಮ ಹೋಂಸ್ಟೇಗಳನ್ನು ಪಟ್ಟಿಯಿಂದ ತೆಗೆದುಹಾಕಲು ಸೂಚಿಸಲಾಗಿದೆ. ಎಲ್ಲಾ ಹೋಂಸ್ಟೇಗಳು, ರೆಸಾರ್ಟ್ಗಳು ಹಾಗೂ ಲಾಡ್ಜ್ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಮತ್ತು ಅವುಗಳು ಸುಸ್ಥಿತಿಯಲ್ಲಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಪ್ರವಾಸಿ ತಾಣಗಳ ಸಂಪರ್ಕ ರಸ್ತೆಗಳು ಹಾಗೂ ಸೂಕ್ಷ್ಮ ಪ್ರದೇಶಗಳನ್ನು ಪೊಲೀಸ್ ಇಲಾಖೆಯ ಜಿಪಿಎಸ್ ಮತ್ತು ನಿರಂತರ ಕಣ್ಗಾವಲು ವ್ಯಾಪ್ತಿಗೆ ತರಲಾಗಿದೆ.
ಹೋಂಸ್ಟೇ ಮತ್ತು ರೆಸಾರ್ಟ್ಗಳಲ್ಲಿ ಕೆಲಸ ಮಾಡುವ ಕಾಯಂ ಹಾಗೂ ಗುತ್ತಿಗೆ ಆಧಾರಿತ ಪ್ರತಿಯೊಬ್ಬ ಸಿಬ್ಬಂದಿಯ ಸಂಪೂರ್ಣ ಹಿನ್ನೆಲೆಯನ್ನು ಸ್ಥಳೀಯ ಪೊಲೀಸ್ ಠಾಣೆಗಳ ಮೂಲಕ ತಪಾಸಣೆ ಮಾಡುವುದು ಕಡ್ಡಾಯವಾಗಿದೆ. ಯಾವುದೇ ಅಪರಾಧ ಹಿನ್ನೆಲೆಯುಳ್ಳವರನ್ನು ಕೆಲಸಕ್ಕೆ ಇಟ್ಟುಕೊಳ್ಳದಂತೆ ಮಾಲೀಕರಿಗೆ ಗಂಭೀರ ಎಚ್ಚರಿಕೆ ನೀಡಲಾಗಿದೆ. ಮಹಿಳಾ ಪ್ರವಾಸಿಗರಿಗೆ ತುರ್ತು ಸಂದರ್ಭದಲ್ಲಿ ತಕ್ಷಣ ಪೊಲೀಸ್ ನೆರವು ಸಿಗುವಂತೆ ಮಾಡಲು ಕರ್ನಾಟಕ ರಾಜ್ಯ ಪೊಲೀಸ್ ತುರ್ತು ಆ್ಯಪ್ ಕೆಪಿಎಸ್ ಎಸ್‌ಒಎಸ್ ಬಳಕೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಪ್ರತಿಯೊಂದು ಹೋಂಸ್ಟೇ, ಹೋಟೆಲ್ ಹಾಗೂ ಪ್ರವಾಸಿ ತಾಣಗಳಲ್ಲಿ ಕೆಪಿಎಸ್ ಎಸ್‌ಒಎಸ್ ಆ್ಯಪ್‌ನ ಕ್ಯೂಆರ್ ಕೋಡ್‌ಗಳನ್ನು ಕಡ್ಡಾಯವಾಗಿ ಪ್ರದರ್ಶಿಸಲು ಸೂಚಿಸಲಾಗಿದೆ. ಮಹಿಳೆಯರು ಅಪಾಯದಲ್ಲಿದ್ದಾಗ ಈ ಆಪ್ ಮೂಲಕ ಒಂದೇ ಕ್ಲಿಕ್‌ನಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಲೊಕೇಶನ್ ಸಮೇತ ಸಂದೇಶ ತಲುಪಿ ತಕ್ಷಣ ನೆರವು ಲಭಿಸಲಿದೆ.
ಪ್ರವಾಸಿ ತಾಣಗಳು, ನಿರ್ಜನ ಪ್ರದೇಶಗಳು ಹಾಗೂ ಹೋಂಸ್ಟೇ ಕೇಂದ್ರಿತ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಪಡೆಯ ಗಸ್ತು ತಿರುಗಾಟ ಹೆಚ್ಚಿಸಲಾಗಿದೆ. ಜಿಲ್ಲಾಧಿಕಾರಿ ನಿರ್ದೇಶನದಂತೆ ಪ್ರವಾಸೋದ್ಯಮ ಇಲಾಖೆ, ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಜಂಟಿ ತಪಾಸಣಾ ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಆಗಾಗ ದಿಢೀರ್ ತಪಾಸಣೆ ನಡೆಸುತ್ತಿವೆ.
ಆತಿಥ್ಯ ವಲಯದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಮಹಿಳೆಯರ ಭದ್ರತೆ, ಮಹಿಳಾ ಹಕ್ಕುಗಳು ಹಾಗೂ ಸಭ್ಯ ವರ್ತನೆ ಕುರಿತು ಜೆಂಡರ್ ಸೆನ್ಸಿಟೈಸೇಶನ್ ತರಬೇತಿ ನೀಡುವುದು ಮತ್ತು ಪೋಸ್ಕೋ ಕಾಯ್ದೆಯ ಅರಿವು ಮೂಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದಕ್ಕಾಗಿ ಅಕ್ಕ ಪಡೆ ಸಿಬ್ಬಂದಿ ಬಳಸಿಕೊಳ್ಳಲಾಗುತ್ತಿದೆ. ವಿದೇಶಿ ಪ್ರವಾಸಿಗರ ಮಾಹಿತಿ ನಿರ್ವಹಣೆಗಾಗಿ ಸಿಬ್ಬಂದಿಗೆ ಪ್ರತ್ಯೇಕ ತರಬೇತಿ ನೀಡಲಾಗುತ್ತಿದೆ.
ದುಬಾರೆ ಸಾಕಾನೆ ಶಿಬಿರದಲ್ಲಿ ನಡೆದ ಅಹಿತಕರ ಘಟನೆಯ ನಂತರ, ಪ್ರವಾಸಿಗರ ಸುರಕ್ಷತೆ ಹಾಗೂ ಆನೆಗಳ ಸಂರಕ್ಷಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕರ್ನಾಟಕ ಅರಣ್ಯ ಇಲಾಖೆ ಹೊಸ ಕಟ್ಟುನಿಟ್ಟಿನ ಸುರಕ್ಷತಾ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಪ್ರವಾಸಿಗರು ಆನೆಗಳನ್ನು ಮುಟ್ಟುವುದು, ಅವುಗಳ ಮೇಲೆ ಕೈಯಿಡುವುದು ಅಥವಾ ಆನೆಗಳಿಗೆ ಆಹಾರ ನೀಡುವುದನ್ನು ನಿಷೇಧಿಸಲಾಗಿದೆ. ಆನೆಗಳನ್ನು ಕಾವೇರಿ ನದಿಯಲ್ಲಿ ಸ್ನಾನ ಮಾಡಿಸುವಾಗ ನದಿಯ ನೀರಿನಲ್ಲಿ ಪ್ರವಾಸಿಗರು ಇಳಿಯುವುದನ್ನು ಮತ್ತು ಪ್ರವಾಸಿಗರು ಆನೆಗಳಿಗೆ ಸ್ನಾನ ಮಾಡಿಸುವುದನ್ನು ನಿಷೇಧಿಸಲಾಗಿದೆ. ಶಿಬಿರದಲ್ಲಿ ಪ್ರವಾಸಿಗರಿಗಾಗಿ ಸುರಕ್ಷಿತ ವಲಯಗಳನ್ನು ನಿರ್ಮಿಸಲಾಗಿದ್ದು, ಆನೆಗಳಿಂದ ಕನಿಷ್ಠ 10 ಮೀಟರ್ ಸುರಕ್ಷಿತ ಅಂತರದಲ್ಲಿ ನಿಂತು ಮಾತ್ರ ವೀಕ್ಷಿಸಲು ಅವಕಾಶ ನೀಡಲಾಗಿದೆ. ಪ್ರವಾಸಿಗ ಭೇಟಿಗೆ ಸಮಯ ನಿಗದಿಪಡಿಸಲಾಗಿದೆ. ಪ್ರವಾಸಿಗರ ಗರಿಷ್ಠ ಸಂಖ್ಯೆಗೂ ಮಿತಿ ಹೇರಲಾಗಿದೆ. ಆನೆಗಳ ಹತ್ತಿರ ಹೋಗಿ ಸೆಲ್ಫಿ ತೆಗೆಯುವುದು, ಫ್ಲ್ಯಾಶ್ ಬೆಳಕು ಬಳಸುವುದು ಹಾಗೂ ಆನೆಗಳನ್ನು ಕೆರಳಿಸುವಂತಹ ಜೋರು ಶಬ್ದ ಮಾಡುವುದನ್ನು ಕಟ್ಟುನಿಟ್ಟಾಗಿ ತಡೆಯಲಾಗಿದೆ. ಆನೆಗಳಿಂದ ಪ್ರವಾಸಿಗರಿಗೆ ನಮಸ್ಕರಿಸುವುದು, ಸೊಂಡಿಲಿನಿAದ ನೀರು ಚಿಮ್ಮಿಸುವುದು ಅಥವಾ ಯಾವುದೇ ರೀತಿಯ ಸಾಹಸ ಪ್ರದರ್ಶನಗಳನ್ನು ಮಾಡಿಸುವುದನ್ನು ನಿಷೇಧಿಸಲಾಗಿದೆ.
ತಡಿಯಂಡಮೋಳ್ ಬೆಟ್ಟದಲ್ಲಿ ಕೇರಳ ಮೂಲದ ಯುವತಿ ಚಾರಣದ ವೇಳೆ ದಾರಿ ತಪ್ಪಿ ನಾಪತ್ತೆಯಾಗಿ, ನಂತರ ರಕ್ಷಿಸಲ್ಪಟ್ಟ ಘಟನೆಯ ಬಳಿಕ ಸುರಕ್ಷಿತ ಚಾರಣಕ್ಕೆ ಸಂಬAಧಿಸಿದAತೆ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಏಕಾಂಗಿಯಾಗಿ ಚಾರಣ ಮಾಡುವುದನ್ನು ತಡೆಯಲು ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಚಾರಣ ಮಾಡುವವರನ್ನು ಗುಂಪುಗಳಲ್ಲಿ ಮಾತ್ರ ಕಳುಹಿಸಲಾಗುತ್ತದೆ. ಪ್ರತಿ 10 ಜನ ಚಾರಣಿಗರ ಗುಂಪಿಗೆ ಒಬ್ಬ ತರಬೇತಿ ಪಡೆದ ಸ್ಥಳೀಯ ಮಾರ್ಗದರ್ಶಕನನ್ನು ಕಡ್ಡಾಯಗೊಳಿಸಲಾಗಿದೆ. ಚಾರಣಿಗರ ಸುರಕ್ಷತೆಗಾಗಿ ಮೊಬೈಲ್ ಆ್ಯಪ್‌ಗಳ ಮೂಲಕ ಜಿಪಿಎಸ್ ಲೊಕೇಶನ್ ಟ್ರ‍್ಯಾಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಕಾಡಿನೊಳಗೆ ಮೊಬೈಲ್ ನೆಟ್‌ವರ್ಕ್ ಸಿಗದ ಕಾರಣ ಗೈಡ್‌ಗಳಿಗೆ ವಾಕಿ-ಟಾಕಿ ಹಾಗೂ ತುರ್ತು ಪರಿಸ್ಥಿತಿಗಾಗಿ ಪ್ರಥಮ ಚಿಕಿತ್ಸಾ ಕಿಟ್‌ಗಳನ್ನು ಒದಗಿಸಲಾಗಿದೆ. ಬೆಟ್ಟದ ದಾರಿಯಲ್ಲಿ ಚಾರಣಿಗರು ದಾರಿ ತಪ್ಪದಂತೆ ಕಲ್ಲು ಹಾಗೂ ಮರಗಳ ಮೇಲಿರುವ ಮಾರ್ಗಸೂಚಿ ಗುರುತುಗಳನ್ನು ಸ್ಪಷ್ಟವಾಗಿ ಮರುಬಣ್ಣ ಬಳಿದು ಸರಿಪಡಿಸಲಾಗಿದೆ. ಅರಣ್ಯ ಇಲಾಖೆಯ ಅಧಿಕೃತ ಪೋರ್ಟಲ್ ಮೂಲಕವೇ ಟ್ರಕ್ಕಿಂಗ್‌ಗೆ ಮುಂಗಡ ಬುಕಿಂಗ್ ಮಾಡಬೇಕು. ಪ್ರತಿದಿನ ಬೆಟ್ಟಕ್ಕೆ ತೆರಳುವ ಪ್ರವಾಸಿಗರ ಸಂಖ್ಯೆಗೆ ಮಿತಿ ವಿಧಿಸಲಾಗಿದೆ. ಬೆಟ್ಟದ ವ್ಯಾಪ್ತಿಯಲ್ಲಿ ಕಾಡಾನೆ ಅಥವಾ ಇತರ ಕಾಡುಪ್ರಾಣಿಗಳ ಚಲನವಲನವಿದ್ದರೆ ಪ್ರವಾಸಿಗರ ಭದ್ರತೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಚಾರಣವನ್ನು ಸ್ಥಗಿತಗೊಳಿಸುವ ವ್ಯವಸ್ಥೆ ಮಾಡಲಾಗಿದೆ.
ಕೊಡಗಿನ ವರ್ಚಸ್ಸಿಗೆ ಧಕ್ಕೆ ಬಾರದಂತೆ ಮತ್ತು ಪ್ರವಾಸಿಗರಲ್ಲಿ ವಿಶೇಷವಾಗಿ ಒಂಟಿಯಾಗಿ ಅಥವಾ ತಂಡಗಳಲ್ಲಿ ಬರುವ ಮಹಿಳಾ ಪ್ರವಾಸಿಗರಲ್ಲಿ ಆತ್ಮವಿಶ್ವಾಸ ಮೂಡಿಸಲು ಸರ್ಕಾರ ಹಲವು ಹೊಸ ಕಾಯ್ದೆ-ನಿಯಮಗಳನ್ನು ಜಾರಿಗೆ ತಂದಿದೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಂದು ಹೋಂಸ್ಟೇ ಹಾಗೂ ರೆಸಾರ್ಟ್ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ಅಂಥ ಹೋಂಸ್ಟೇಗಳನ್ನು ಗುರುತಿಸಿ ಅವುಗಳ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಿ ಮುಚ್ಚಿಸಲು ಸೂಚಿಸಲಾಗಿದೆ.
ಪ್ರಿಯಾಂಕ್ ಖರ್ಗೆ, ಗೃಹ ಸಚಿವ
ಸಾಕಾನೆ ಶಿಬಿರಗಳಲ್ಲಿ ಸುರಕ್ಷತಾ ವಿಧಾನಗಳಲ್ಲಿನ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಶಿಬಿರವು ಸಾರ್ವಜನಿಕ ಪ್ರವೇಶಕ್ಕೆ ಯೋಗ್ಯವಾಗಿರುವ ಬಗ್ಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರವಾಸಿಗರ ಭೇಟಿಗೆ ಸಮಯ ಮತ್ತು ಪ್ರವಾಸಿಗರ ಸಂಖ್ಯೆಗೆ ಗರಿಷ್ಠಮಿತಿ ನಿಗದಿಪಡಿಸಲಾಗಿದೆ. ಯಾವುದೇ ಅನಾಹುತಗಳು ಮರುಕಳಿಸಿದಂತೆ ಕಾಳಜಿ, ಮುನ್ನೆಚ್ಚರಿಕೆ ವಹಿಸಲಾಗಿದೆ.
ವಿ. ಅಭಿಷೇಕ್, ಉಪ ಅರಣ್ಯ ಸಂರಕ್ಷಣಾಧಿಕಾರಿ