ಜ್ಞಾನ ಕಾವೇರಿ ಆವರಣದಲ್ಲಿ ಗಮನ ಸೆಳೆದ ಯುವ ಸಂಸತ್ತು

ಜ್ಞಾನ ಕಾವೇರಿ ಆವರಣದಲ್ಲಿ ಗಮನ ಸೆಳೆದ ಯುವ ಸಂಸತ್ತು
ಕೊಡಗು ವಿಶ್ವವಿದ್ಯಾಲಯದ ಚಿಕ್ಕ ಅಳುವಾರ ಜ್ಞಾನ ಕಾವೇರಿ ಆವರಣದಲ್ಲಿ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕುಗಳ ಸಂಯುಕ್ತ ಆಶ್ರಯದಲ್ಲಿ 2026ನೇ ಸಾಲಿನ ಯುವ ಸಂಸತ್ತು ಕಾರ್ಯಕ್ರಮ ನಡೆಯಿತು.
Published on: 

ಕುಶಾಲನಗರ

ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯ, ಸಂಸದೀಯ ಕಾರ್ಯವಿಧಾನ ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿಯನ್ನು ಯುವಜನರು ಸಕ್ರಿಯವಾಗಿ ಅರಿತುಕೊಳ್ಳಲು ಯುವ ಸಂಸತ್ತು ಕಾರ್ಯಕ್ರಮಗಳು ಅತ್ಯಂತ ಸಹಕಾರಿಯಾಗಿವೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಹೇಳಿದರು. ಕೊಡಗು ವಿಶ್ವವಿದ್ಯಾಲಯದ ಚಿಕ್ಕ ಅಳುವಾರ ಜ್ಞಾನ ಕಾವೇರಿ ಆವರಣದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕುಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ 2026ನೇ ಸಾಲಿನ ಯುವ ಸಂಸತ್ತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯುವಜನರಲ್ಲಿ ನಾಯಕತ್ವ ಗುಣ, ಸಂವಹನ ಕೌಶಲ, ಆತ್ಮವಿಶ್ವಾಸ ಹಾಗೂ ಸಾಮಾಜಿಕ-ರಾಜಕೀಯ ಜವಾಬ್ದಾರಿಯನ್ನು ಬೆಳೆಸುವಲ್ಲಿ ಇಂತಹ ವೇದಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಂವಿಧಾನದ ಮೌಲ್ಯಗಳು, ಹಕ್ಕುಗಳು ಹಾಗೂ ಕರ್ತವ್ಯಗಳ ಕುರಿತು ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಸಂಸದೀಯ ಕಲಾಪದ ಮಾದರಿಯಲ್ಲಿ ವಿವಿಧ ಪ್ರಚಲಿತ ವಿಷಯಗಳ ಕುರಿತು ಸಕ್ರಿಯವಾಗಿ ಚರ್ಚೆ ನಡೆಸಿದರು. ಪ್ರಶ್ನೋತ್ತರ ಕಲಾಪ, ವಿಚಾರ ಮಂಡನೆ ಹಾಗೂ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗಳ ಮೂಲಕ ಸಂಸದೀಯ ಪ್ರಜಾಪ್ರಭುತ್ವದ ನೈಜ ಕಾರ್ಯವೈಖರಿಯನ್ನು ಪ್ರತ್ಯಕ್ಷವಾಗಿ ಅನುಭವಿಸಿದರು.

ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಪ್ರಾಧ್ಯಾಪಕಿ ಡಾ. ನಿರ್ಮಲ ಹಾಗೂ ವಕೀಲ ಯತೀಶ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ವಿದ್ಯಾರ್ಥಿಗಳ ವಿಷಯ ಮಂಡನೆ, ಸಂಸದೀಯ ನಡವಳಿಕೆ, ಭಾಷಾ ಬಳಕೆ, ಸಮಯಪಾಲನೆ ಮತ್ತು ಚರ್ಚೆಯಲ್ಲಿ ಪಾಲ್ಗೊಂಡ ರೀತಿಯನ್ನು ಆಧರಿಸಿ ಮೌಲ್ಯಮಾಪನ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಕೊಡಗು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ. ಎಂ. ಸುರೇಶ್, ಸೋಮವಾರಪೇಟೆ ತಹಸೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಕೃಷ್ಣಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದೇಗೌಡ, ಉಪನ್ಯಾಸಕ ಡಾ. ಜಮೀರ್ ಅಹ್ಮದ್, ಬಿಆರ್‌ಸಿ ಮಂಜೇಶ್,ತಾಲೂಕು ವಕೀಲರ ಸಂಘದ ಅಧ್ಯಕ್ಷರು ಹಾಗೂ ವಿವಿಧ ಸಮಿತಿ ಸದಸ್ಯರು ಭಾಗವಹಿಸಿದ್ದರು.

ಯುವ ಸಂಸತ್ತು ಸ್ಪರ್ಧೆಯಲ್ಲಿ ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಲೋಹಿತ್ ಪ್ರಥಮ ಸ್ಥಾನ ಗಳಿಸಿದರೆ, ಕೊಡಗು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಹೆಚ್.ಎಂ. ಮೋಹನ್ ದ್ವಿತೀಯ ಸ್ಥಾನ ಪಡೆದರು. ಸೋಮವಾರಪೇಟೆಯ ಸೆಂಟ್ ಜೋಸೆಫ್ ಪ್ರಥಮ ದರ್ಜೆ ಕಾಲೇಜಿನ ಮೋಹನ್ ಮತ್ತು ಜ್ಞಾನ ಕಾವೇರಿ ಆವರಣದ ಕನ್ನಡ ವಿಭಾಗದ ಪ್ರೀತ ಸಿ. ಜಂಟಿಯಾಗಿ ತೃತೀಯ ಸ್ಥಾನ ಗಳಿಸಿದರು. ವಿಜೇತರಾದ ವಿದ್ಯಾರ್ಥಿಗಳನ್ನು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net