

ಕುಶಾಲನಗರ
ಕ್ರೀಡೆಯ ನಿಜವಾದ ಸೌಂದರ್ಯವು ಸ್ಪರ್ಧಿಸುವ ಧೈರ್ಯ, ಅತ್ಯುತ್ತಮವಾದದ್ದನ್ನು ನೀಡುವ ದೃಢನಿಶ್ಚಯ, ಫಲಿತಾಂಶವನ್ನು ಒಪ್ಪಿಕೊಳ್ಳುವ ಕೃಪೆ ಮತ್ತು ನಿರಂತರವಾಗಿ ಕಲಿಯುವ ಉತ್ಸಾಹದಲ್ಲಿದೆ ಎಂದು ಕೂಡಿಗೆಯ ಕೊಡಗು ಸೈನಿಕ ಶಾಲೆ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ಹೇಳಿದರು.
ಈಚೆಗೆ ನಡೆದ ಕೊಡಗು ಸೈನಿಕ ಶಾಲೆಯ 19ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಅಖಿಲ ಭಾರತ ಸೈನಿಕ ಶಾಲೆಗಳ ಅಂತರ ಗುಂಪು (ಹೆಚ್) ಕ್ರೀಡಾಕೂಟ-2026ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕಠಿಣ ಪರಿಶ್ರಮ, ಶಿಸ್ತುಬದ್ಧ ತರಬೇತಿ ಮತ್ತು ತಂಡದ ಮನೋಭಾವದಿಂದ ಮಾತ್ರ ದೊಡ್ಡ ಸಾಧನೆ ಸಾಧ್ಯ. ಈ ಪ್ರತಿಷ್ಠಿತ ಕ್ರೀಡಾಕೂಟವು ಶಿಸ್ತು, ಧೈರ್ಯ, ಪರಿಶ್ರಮ ಮತ್ತು ಶ್ರೇಷ್ಠತೆಯ ಅನ್ವೇಷಣೆಯಂತಹ ನಮ್ಮ ಸಂಸ್ಥೆಯ ಮೂಲಭೂತ ಮೌಲ್ಯಗಳನ್ನು ಎತ್ತಿಹಿಡಿದಿದೆ. ಬಾಸ್ಕೆಟ್ಬಾಲ್, ವಾಲಿಬಾಲ್, ಅಥ್ಲೆಟಿಕ್ಸ್, ರಸಪ್ರಶ್ನೆ ಹಾಗೂ ಚರ್ಚಾ ಸ್ಪರ್ಧೆಗಳು ಯುವ ಕೆಡೆಟ್ಗಳಿಗೆ ತಮ್ಮ ಕೌಶಲ್ಯಗಳನ್ನು ಒರೆಗೆ ಹಚ್ಚಲು ಮತ್ತು ಪರಸ್ಪರ ಕಲಿಯಲು ಉತ್ತಮ ವೇದಿಕೆಯನ್ನು ಒದಗಿಸಿವೆ ಎಂದು ಹೇಳಿದರು.
ಭಾಗವಹಿಸಿದ್ದ ಒಟ್ಟು 11 ಶಾಲೆಗಳ ಪೈಕಿ ಅತ್ಯುತ್ತಮ ಪ್ರದರ್ಶನ ನೀಡಿದ ಆತಿಥೇಯ ಕೊಡಗು ಸೈನಿಕ ಶಾಲೆ ಒಟ್ಟಾರೆ ಚಾಂಪಿಯನ್ಶಿಪ್ ಮುಡಿಗೇರಿಸಿಕೊಂಡಿತು. ಸೈನಿಕ ಶಾಲೆ ಅಮರಾವತಿ ನಗರ ದ್ವಿತೀಯ ಹಾಗೂ ವೇದವ್ಯಾಸ ವಿದ್ಯಾಲಯಂ ತೃತೀಯ ಸ್ಥಾನ ಪಡೆದುಕೊಂಡವು.
ಜೂನಿಯರ್ ಬಾಸ್ಕೆಟ್ಬಾಲ್ನಲ್ಲಿ ಕೊಡಗು ಸೈನಿಕ ಶಾಲೆಯ ಹೇಮಂತ್ ರೆಡ್ಡಿ, ಹುಡುಗಿಯರ ವಿಭಾಗದಲ್ಲಿ ದಿ ವಿಕಾಸ ಶಾಲೆಯ ಕನಿಷ್ಕಾ ಪಟೇಲ್, ವಾಲಿಬಾಲ್ನಲ್ಲಿ ಸೈನಿಕ ಶಾಲೆ ಅಮರಾವತಿ ನಗರದ ಜಿ. ಹರೀಶ್, ಕಿರಿಯ ಬಾಲಕರು ಅಥ್ಲೆಟಿಕ್ಸ್ನಲ್ಲಿ ಸೈನಿಕ ಶಾಲೆ ಅಮರಾವತಿ ನಗರದ ಕವಿಯಾ ಸೆಲ್ವನ್ , ಅಥ್ಲೆಟಿಕ್ಸ್ ಕಿರಿಯ ಬಾಲಕಿಯರ ವಿಭಾಗದಲ್ಲಿ ವಿವೇಕ ಸ್ಕೂಲ್ ಆಫ್ ಎಕ್ಸಲೆನ್ಸ್ನ ಚಿತ್ರಶ್ರೀ, ಅಥ್ಲೆಟಿಕ್ಸ್ ಉಪ ಕಿರಿಯ ಬಾಲಕರ ವಿಭಾಗದಲ್ಲಿ ಸೈನಿಕ ಶಾಲೆ ಅಮರಾವತಿ ನಗರದ ಸುದೀಪ್, ಅಥ್ಲೆಟಿಕ್ಸ್ ಉಪ ಕಿರಿಯ ಬಾಲಕಿಯರ ವಿಭಾಗದಲ್ಲಿ ವೇದವ್ಯಾಸ ಶಾಲೆಯ ಆರುಷಿ ಉತ್ತಮ ಸಾಧನೆ ಪ್ರದರ್ಶಿಸಿದರು.
ಚರ್ಚಾ ಸ್ಪರ್ಧೆಯಲ್ಲಿ ವಿಷಯದ ಪರವಾಗಿ ವಿವೇಕ ಸ್ಕೂಲ್ ಆಫ್ ಎಕ್ಸಲೆನ್ಸ್ನ ಬಿ. ಉತ್ಸವ್ ಮತ್ತು ವಿಷಯದ ವಿರುದ್ಧವಾಗಿ ಸೈನಿಕ ಶಾಲೆ ಕೊಡಗಿನ ಗಗನ್ ದೀಪ್ ಬಹುಮಾನ ಗಳಿಸಿದರು.
ಇದೇ ಸಂದರ್ಭ ಸ್ಪರ್ಧಿಗಳ ಆಕರ್ಷಕ ಪಥಸಂಚಲನ ಕ್ರೀಡಾಂಗಣದಲ್ಲಿದ್ದ ಸಭಿಕರ ಗಮನ ಸೆಳೆಯಿತು. ಮುಖ್ಯ ಅತಿಥಿಗಳು ವಿಜೇತ ಕ್ರೀಡಾಪಟುಗಳಿಗೆ ಪ್ರಶಸ್ತಿ ಪತ್ರ, ಪದಕ ಹಾಗೂ ಪಾರಿತೋಷಕಗಳನ್ನು ವಿತರಿಸಿದರು.
ಉಪ ಪ್ರಾಂಶುಪಾಲ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಆಡಳಿತಾಧಿಕಾರಿ ಸ್ಕ್ವಾಡ್ರನ್ ಲೀಡರ್ ದೀಪಕ್ ನಾಯಕ್, ಕ್ರೀಡಾ ಉಸ್ತುವಾರಿ ವೈ.ವಿ. ರಮಣ, ಶಾಲೆಯ ಪ್ರಥಮ ಮಹಿಳೆ ದಿವ್ಯಾ ಸಿಂಗ್, ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.